ಮುಂದಿನ ಬಾರಿಯೂ ಮುಂಬೈ ಗೆಲ್ಬೋದು, ಆದ್ರೆ 2021ರಲ್ಲಿ ಮಾತ್ರ ರೋಹಿತ್​ ಪಡೆಗೆ ಗೆಲುವು ಎನ್ನುತ್ತಿದೆ ಈ ಲೆಕ್ಕಾಚಾರ

ನವದೆಹಲಿ: ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗ ಎರಡರಲ್ಲೂ ಬಲಿಷ್ಠ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್​ ತಂಡ ನಾಲ್ಕು ಬಾರಿ ಐಪಿಎಲ್​ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡು ಇತಿಹಾಸ ಸೃಷ್ಟಿ ಮಾಡಿದೆ. ಈ ಮಧ್ಯೆ ಮುಂಬೈ ತಂಡದ ಗೆಲುವಿನ ಹಾದಿಯನೊಮ್ಮೆ ತಿರುಗಿ ನೋಡಿದರೆ, ಮುಂದಿನ ಬಾರಿ ಅಲ್ಲದಿದ್ದರೂ 2021ನೇ ಐಪಿಎಲ್​ ಆವೃತ್ತಿಯಲ್ಲಿಯೂ ರೋಹಿತ್​ ಪಡೆಯೇ ಗೆಲುವು ಸಾಧಿಸಲಿದೆ ಎಂದು ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದು, ಅದರ ಲೆಕ್ಕಾಚಾರ ಈ ಕೆಳಗಿನಂತಿದೆ.

2008ರಲ್ಲಿ ಆರಂಭವಾದ ಐಪಿಎಲ್​ 2019ಕ್ಕೆ 12 ಆವೃತ್ತಿಯನ್ನು ಪೂರೈಸಿದೆ. ಇದರಲ್ಲಿ ಮುಂಬೈ(4), ಚೆನ್ನೈ(3), ಕೊಲ್ಕತ ನೈಟ್​ ರೈಡರ್ಸ್​(2) ಹಾಗೂ ಡೆಕ್ಕನ್​ ಚಾರ್ಜರ್ಸ್​, ರಾಜಸ್ಥಾನ ರಾಯಲ್ಸ್​ ಹಾಗೂ ಸನ್​​ ರೈಸರ್ಸ್​ ಹೈದರಾಬಾದ್​ ತಲಾ ಒಂದೊಂದು ಬಾರಿ ಟ್ರೋಫಿಯನ್ನು ಗೆದ್ದಿವೆ.

ಮುಂಬೈ ತಂಡದ ಐಪಿಎಲ್​ ಹಾದಿಯನ್ನು ಗಮನಿಸಿದಾಗ ಕೆಲವು ಆಸಕ್ತಿದಾಯಕ ಅಂಶಗಳು ನಮ್ಮ ಗಮನಕ್ಕೆ ಬರುತ್ತದೆ. 2008 ರಿಂದ 2012ರ ವರೆಗೆ ಸತತವಾಗಿ ಸೆಣಸಿದರೂ ಟ್ರೋಫಿ ಗೆಲ್ಲದ ಮುಂಬೈ ತಂಡದ ಹಾದಿ 2013ರಿಂದ ಐಪಿಎಲ್​ ಹಾದಿ ತಿರುವು ಪಡೆದುಕೊಳ್ಳುತ್ತದೆ.

2013ರಲ್ಲಿ ಮೊದಲ ಬಾರಿಗೆ ಟ್ರೋಫಿ ಎತ್ತಿಡಿದ ಮುಂಬೈ, ಬಳಿಕ ವರ್ಷ ಬಿಟ್ಟು ವರ್ಷ ಅಂದರೆ, 2013, 2015, 2017 ಹಾಗೂ 2019ರಲ್ಲಿ ಟ್ರೋಫಿ ಗೆಲ್ಲುತ್ತಿರುವುದು ಬಹಳ ಕುತೂಹಲಕ್ಕೆ ಕಾರಣವಾಗಿದ್ದು, 2021ರಲ್ಲೂ ಮುಂಬೈ ತಂಡವೇ ಗಲ್ಲಲಿದೆ ಎಂದು ಕ್ರೀಡಾಭಿಮಾನಿಗಳು ತಮ್ಮಷ್ಟಕ್ಕೆ ತಾವೇ ಲೆಕ್ಕಾಚಾರಗಳನ್ನು ಹಾಕಿಕೊಳ್ಳುತ್ತಿದ್ದಾರೆ.

ಬೆಸ ಸಂಖ್ಯೆ ಮತ್ತೊಮ್ಮೆ ಅದೃಷ್ಟ ತರುವುದೇ?
ಮುಂಬೈ ಇದುವರೆಗೂ ಐಪಿಎಲ್​ ಟ್ರೋಫಿ ಗೆದ್ದಿರುವ ವರ್ಷಗಳೆಲ್ಲವೂ ಬೆಸ ಸಂಖ್ಯೆಯೇ ಎಂಬುದು ಇಲ್ಲಿ ಗಮನಾರ್ಹವಾಗಿದೆ. ಇದು ಕೂಡ ಕ್ರೀಡಾಸಕ್ತರ ಕುತೂಹಲಕ್ಕೆ ಕಾರಣವಾಗಿದ್ದು, ಮುಂಬೈ ತಂಡಕ್ಕೆ ಬೆಸ ಸಂಖ್ಯೆ ಬೆಂಗಾವಾಲಾಗಿ ನಿಂತಿದೆ ಎನ್ನುತ್ತಿದ್ದಾರೆ.

ನಿನ್ನೆ ನಡೆದ ಐಪಿಎಲ್​ ಫೈನಲ್​ನಲ್ಲಿ ರೋಚಕ ಗೆಲುವು
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಿನ್ನೆ(ಭಾನುವಾರ) ನಡೆದ ಪ್ರಶಸ್ತಿ ಕದನದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮ, ಬ್ಯಾಟಿಂಗ್ ಆಯ್ದುಕೊಂಡರು. ಕ್ವಿಂಟನ್ ಡಿ ಕಾಕ್ ನೀಡಿದ ಬಿರುಸಿನ ಆರಂಭದ ನಡುವೆಯೂ ದೀಪಕ್ ಚಹರ್ (26ಕ್ಕೆ 3) ಹಾಗೂ ಶಾರ್ದೂಲ್ ಠಾಕೂರ್ (37ಕ್ಕೆ 2) ಬೌಲಿಂಗ್ ದಾಳಿಗೆ ನಲುಗಿದ ಮುಂಬೈ ಇಂಡಿಯನ್ಸ್ 8 ವಿಕೆಟ್​ಗೆ 149 ರನ್ ಪೇರಿಸಿತು. ಪ್ರತಿಯಾಗಿ ಶೇನ್ ವ್ಯಾಟ್ಸನ್ (80ರನ್, 59 ಎಸೆತ, 8 ಬೌಂಡರಿ 4 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್​ಗೆ 148 ರನ್ ಬಾರಿಸಲಷ್ಟೇ ಶಕ್ತವಾಯಿತು. (ಏಜೆನ್ಸೀಸ್​)

Leave a Reply

Your email address will not be published. Required fields are marked *