ಜೈಪುರದಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ

ನವದೆಹಲಿ: ಮುಂಬರುವ 12ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಪೂರ್ವಭಾವಿ ಯಾಗಿ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 17 ಮತ್ತು 18ರಂದು ಜೈಪುರದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಐಪಿಎಲ್ ಹರಾಜು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಗೋವಾದಲ್ಲಿ ನಡೆಸುವುದೆಂದು ಮೊದಲು ಆಯ್ಕೆ ಮಾಡಲಾಗಿತ್ತಾದರೂ, ಉತ್ತಮ ಪ್ರಯಾಣ ಸೌಕರ್ಯದಿಂದಾಗಿ ನಂತರ ಜೈಪುರದಲ್ಲಿ ನಿಗದಿಪಡಿಸಲಾಗಿದೆ. ಈ ಬಾರಿಯದ್ದು ಪೂರ್ಣಪ್ರಮಾಣದ ಹರಾಜು ಪ್ರಕ್ರಿಯೆ ಆಗಿರುವುದಿಲ್ಲ. ತಂಡಗಳು ಬಿಡುಗಡೆ ಮಾಡಿದ, ಕಳೆದ ಬಾರಿ ಹರಾಜಾಗದ ಮತ್ತು ಹರಾಜು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ಕೆಲ ಆಟಗಾರರು ಬಿಕರಿ ಪ್ರಕ್ರಿಯೆ ಮಾತ್ರ ನಡೆಯಲಿದೆ.

ಫ್ರಾಂಚೈಸಿ ಮಾಲೀಕರ ಅಸಮಾಧಾನ: ಮುಂದಿನ ಐಪಿಎಲ್ ಟೂರ್ನಿ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗದೆ ಇದ್ದರೂ, ಹರಾಜಿನ ದಿನಾಂಕ ನಿಗದಿಪಡಿಸಿರುವ ಬಗ್ಗೆ ಫ್ರಾಂಚೈಸಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮುಂದಿನ ಐಪಿಎಲ್ ಭಾರತದಲ್ಲಿ ನಡೆಯುವ ಬಗ್ಗೆ ಅನುಮಾನವಿದ್ದು, ದಕ್ಷಿಣ ಆಫ್ರಿಕಾ ಅಥವಾ ಯುಎಇಗೆ ಭಾಗಶಃ ಅಥವಾ ಸಂಪೂರ್ಣ ಸ್ಥಳಾಂತರವಾಗುವ ಸಾಧ್ಯತೆ ಇದೆ. ಹೀಗಾಗಿ ತಂಡಕ್ಕೆ ಯಾವ ರೀತಿಯ ಆಟಗಾರರು ಬೇಕೆಂಬುದೇ ಸ್ಪಷ್ಟವಿರದಿರುವಾಗ, ಹರಾಜಿನಲ್ಲಿ ಸೂಕ್ತ ಆಟಗಾರರನ್ನು ಖರೀದಿಸುವುದು ಕಷ್ಟಕರ. ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆದರೆ ವೇಗಿಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ ಎಂದು ಫ್ರಾಂಚೈಸಿ ಮಾಲೀಕರು ಹೇಳಿದ್ದಾರೆ. -ಏಜೆನ್ಸೀಸ್