ಕಳಪೆ ಫಾರ್ಮ್​ನಿಂದ ಕಂಗೆಟ್ಟಿರುವ ವೇಗಿ ಉಮೇಶ್​ ಯಾದವ್​ ನೋವಿನಿಂದ ಹೇಳಿಕೊಂಡಿದ್ದು ಹೀಗೆ…

ನವದೆಹಲಿ: ಕ್ರಿಕೆಟ್​ ವೃತ್ತಿ ಜೀವನದಲ್ಲಿ ಟೀಂ ಇಂಡಿಯಾದ ವೇಗಿ ಹಾಗೂ ಸ್ಟಾರ್​ ಬೌಲರ್​ ಉಮೇಶ್​ ಯಾದವ್​ ಅವರು ಸಂಕಷ್ಟದ ಸಮಯದಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚ್ಚಗೆ ಅವರು ನೀಡುತ್ತಿರುವ ಕಳಪೆ ಪ್ರದರ್ಶನ. ಈ ಕಾರಣದಿಂದಲೇ ಇದೇ ತಿಂಗಳ ಅಂತ್ಯದಲ್ಲಿ ಇಂಗ್ಲೆಂಡ್​​ ಮತ್ತು ವೇಲ್ಸ್​ನಲ್ಲಿ​ ಆರಂಭವಾಗುವ ಏಕದಿನ ವಿಶ್ವಕಪ್​ಗೂ ಯಾದವ್​ ತಂಡದಲ್ಲಿ ಸ್ಥಾನ ಪಡೆದಿಲ್ಲ.​

ಪ್ರಸ್ತುತ ನಡೆಯುತ್ತಿರುವ ಐಪಿಎಲ್​ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡುತ್ತಿರುವ ಉಮೇಶ್​ ಯಾದವ್​ ಅವರು 10 ಪಂದ್ಯಗಳಲ್ಲಿ ಕೇವಲ 8 ವಿಕೆಟ್​ ಪಡೆಯುವುದರೊಂದಿಗೆ 9.60 ಎಕಾನಮಿಯಲ್ಲಿ ಹೆಚ್ಚು ರನ್​ ಬಿಟ್ಟುಕೊಟ್ಟು ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

ವಿಶ್ವಕಪ್​ಗೆ ಆಯ್ಕೆಯಾಗದಿರುವುದು ಹಾಗೂ ತಮ್ಮ ಬೌಲಿಂಗ್​ ಸಾಮರ್ಥ್ಯದ ಬಗ್ಗೆ ಯಾದವ್​ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ನಾನು ಉತ್ತಮವಾಗಿ ಬೌಲಿಂಗ್​ ಮಾಡುವುದಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಅಲ್ಲದೆ ಹೀಗೇಕೆ ನಡೆಯುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ನಾನು ಸತತವಾಗಿ ಎರಡು ವರ್ಷದಿಂದ ದೇಶಿ ಪಂದ್ಯಾವಳಿಯ ಎಲ್ಲಾ ಮಾದರಿ ಪಂದ್ಯಗಳಲ್ಲಿಯೂ ಬಿಡುವಿಲ್ಲದೆ ಆಡುತ್ತಿದ್ದೇನೆ. ನಾನು ಹೆಚ್ಚಾಗಿ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಿಲ್ಲ. ಕೇವಲ 2 ರಿಂದ 3 ಪಂದ್ಯಗಳಿಗೆ ಮಾತ್ರ ನನ್ನನ್ನು ಆಯ್ದುಕೊಳ್ಳುತ್ತಿದ್ದಾರೆ. ಬಳಿಕ ನನ್ನನ್ನು ತಂಡದಿಂದ ಕೈಬಿಡುತ್ತಾರೆ ಎಂದು ಯಾದವ್​ ತಮ್ಮ ನೋವನ್ನು ಬಹಿರಂಗಪಡಿಸಿದ್ದಾರೆ.

ನಾನು ಉತ್ತಮವಾದದನ್ನು ನೀಡುವುದಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಇದು ಆ ರೀತಿಯಲ್ಲ. ಎಲ್ಲಾ ವೇಗದ ಬೌಲರ್​ಗಳಿಗೂ ಈ ರೀತಿ ಆಗುತ್ತಿರುತ್ತದೆ. ಕೆಲವೊಂದು ಬಾರಿ ನಾವು ಒಳ್ಳೆಯ ಹಾಗೂ ಕೆಟ್ಟ ದಿನಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಂದು ಬಾರಿ ಹಲವಾರು ಯೋಚನೆಗಳು ನಮ್ಮ ತಲೆಗೆ ಬಂದು ಹೋಗುತ್ತವೆ. ಕೆಲವೊಂದು ಸಂದರ್ಭದಲ್ಲಿ ನಮ್ಮ ನಂಬಿಕೆ ಬಲವಾಗಿರುತ್ತದೆ ಎಂದು ಭಾವಿಸುತ್ತೇವೆ. ಇನ್ನು ಕೆಲವು ಸಂದರ್ಭದಲ್ಲಿ ಈ ವರ್ಷ ನಮಗೆ ಒಳ್ಳೆಯ ಸಮಯವಿಲ್ಲ ಎಂದು ಅಂದುಕೊಂಡುಬಿಡುತ್ತೇವೆ. ವಾಸ್ತವವಾಗಿ ನನ್ನ ಲಯ ನನ್ನ ಹಿಡಿತಕ್ಕೆ ಸಿಗುತ್ತಿಲ್ಲ ಎಂದು ಯಾದವ್​ ತಿಳಿಸಿದ್ದಾರೆ. (ಏಜೆನ್ಸೀಸ್​)

One Reply to “ಕಳಪೆ ಫಾರ್ಮ್​ನಿಂದ ಕಂಗೆಟ್ಟಿರುವ ವೇಗಿ ಉಮೇಶ್​ ಯಾದವ್​ ನೋವಿನಿಂದ ಹೇಳಿಕೊಂಡಿದ್ದು ಹೀಗೆ…”

Comments are closed.