
ಮುಂಬೈ: ಪ್ಲೇಆಫ್ ಹಂತಕ್ಕೇರಲು ಕಡೇ ಅವಕಾಶ ಉಳಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-15ರ ತನ್ನ ಕಡೇ ಲೀಗ್ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ತಂಡವನ್ನು ಗುರುವಾರ ಎದುರಿಸಲಿದೆ. ಟೂರ್ನಿಯಲ್ಲಿ ಉತ್ತಮ ಆರಂಭ ಕಂಡಿದ್ದರೂ ನಂತರದ ಕೆಲ ಪಂದ್ಯಗಳಲ್ಲಿ ಮಾಡಿಕೊಂಡ ಎಡವಟ್ಟುಗಳಿಂದಾಗಿ ಆರ್‌ಸಿಬಿ ಅಂತಿಮ ನಾಲ್ಕರ ಘಟ್ಟಕ್ಕೇರಲು ಪರದಾಡುವಂತಾಗಿದೆ. ಆರ್‌ಸಿಬಿ ತಂಡಕ್ಕೆ ಗೆಲುವೊಂದೇ ಮಾರ್ಗವಾಗಿದೆ. ಒಂದು ವೇಳೆ ಗೆದ್ದರೂ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಎದುರು ಸೋತರಷ್ಟೇ ಆರ್‌ಸಿಬಿ ಮುನ್ನಡೆಯಲಿದೆ. ಮತ್ತೊಂದೆಡೆ, ಟೈಟಾನ್ಸ್ ತಂಡಕ್ಕೆ ಸೋತರೂ ಅಗ್ರಸ್ಥಾನ ಕಾಯಂ ಆಗಲಿದೆ.
ಜಯಕ್ಕಾಗಿ ಆರ್‌ಸಿಬಿ ಕಾತರ: ಆರ್‌ಸಿಬಿ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 7 ಜಯ, 6 ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಮೈನಸ್ ರನ್‌ರೇಟ್ ಹೊಂದಿದೆ. ಗುಜರಾತ್ ವಿರುದ್ಧ ಗೆದ್ದರೆ ಒಟ್ಟು ಅಂಕ 16ಕ್ಕೇರಲಿದೆ. ಆದರೆ ರನ್‌ರೇಟ್ ಸುಧಾರಿಸಲು ಭಾರಿ ಅಂತರದಿಂದ ಗೆಲ್ಲಬೇಕಾಗಿದೆ. ಇಲ್ಲದಿದ್ದರೆ, ಡೆಲ್ಲಿ ತಂಡ ಮುಂಬೈ ಎದುರು ಸೋಲಬೇಕೆಂದು ಪ್ರಾರ್ಥಿಸಬೇಕಿದೆ. ಸತತ 2 ಜಯದ ಬಳಿಕ ಆರ್‌ಸಿಬಿ ಹಿಂದಿನ ಪಂದ್ಯದಲ್ಲಿ ಪಂಜಾಬ್ ಎದುರು ಸೋಲನುಭವಿಸಿದ್ದೇ ದೊಡ್ಡ ಮಟ್ಟದ ಹಿನ್ನಡೆ ತಂದಿದೆ. ಮೊದಲ ಹಣಾಹಣಿಯಲ್ಲಿ ಟೈಟಾನ್ಸ್ ಎದುರು ಅನುಭವಿಸಿದ ಸೋಲಿಗೂ ಸೇಡು ತೀರಿಸಿಕೊಳ್ಳುವ ಅವಕಾಶ ಆರ್‌ಸಿಬಿಗಿದೆ.
* ಆತ್ಮವಿಶ್ವಾಸದಲ್ಲಿ ಟೈಟಾನ್ಸ್
ಟೂರ್ನಿ ಪದಾರ್ಪಣೆ ಮಾಡಿದ ಮೊದಲ ಆವೃತ್ತಿಯಲ್ಲೇ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆದಿರುವ ಟೈಟಾನ್ಸ್ ತಂಡ, 13 ಪಂದ್ಯಗಳಿಂದ 10 ಜಯ ದಾಖಲಿಸಿ, 3 ಸೋಲು ಕಂಡಿದ್ದು, 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ 16 ಪಾಯಿಂಟ್ಸ್ ಹೊಂದಿದ್ದು, ಒಂದು ವೇಳೆ ಟೈಟಾನ್ಸ್ ಸೋತರೂ ಅಗ್ರಸ್ಥಾನ ಭದ್ರವಾಗಿರಲಿದೆ.
ಟೀಮ್ ನ್ಯೂಸ್:
ಆರ್‌ಸಿಬಿ: ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಕಳೆದ ಪಂದ್ಯ: ಪಂಜಾಬ್ ಎದುರು 54 ರನ್ ಸೋಲು
ಗುಜರಾತ್ ಟೈಟಾನ್ಸ್: ಒಂದು ವೇಳೆ ಸೋತರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯಂ ಆಗಿದ್ದು, ಹೊಸಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಕಳೆದ ಪಂದ್ಯ: ಸಿಎಸ್‌ಕೆ ವಿರುದ್ಧ 7 ವಿಕೆಟ್ ಜಯ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 1, ಗುಜರಾತ್: 1, ಆರ್‌ಸಿಬಿ: 0
ಮೊದಲ ಮುಖಾಮುಖಿ: ಗುಜರಾತ್ ಟೈಟಾನ್ಸ್‌ಗೆ 6 ವಿಕೆಟ್ ಜಯ.