ಐಎನ್ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಚಿದಂಬರಂಗೆ ಸೆ.28ರ ವರೆಗೆ ನಿರೀಕ್ಷಣಾ ಜಾಮೀನು

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೀಕ್ಷಣಾ ಜಾಮೀನು ಕೋರಿ ಹಿರಿಯ ಕಾಂಗ್ರೆಸ್​ ಮುಖಂಡ ಪಿ. ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ದೆಹಲಿ ಹೈಕೋರ್ಟ್​ , ಸೆ.28ರ ವರೆಗೆ ಮಧ್ಯಂತರ ರಕ್ಷಣೆ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಕೆ.ಪಾಠಕ್​ ಅವರು ಚಿದಂಬರಂಗೆ ಸೆ.28ರ ವರೆಗೆ ನಿರೀಕ್ಷಣಾ ಜಾಮೀನು ನೀಡಿದ್ದು, ಈ ಬಗ್ಗೆ ಏನಾದರೂ ಆಕ್ಷೇಪಗಳಿದ್ದರೆ ನಾಲ್ಕು ವಾರದಲ್ಲಿ ಕೋರ್ಟ್​ಗೆ ಸಲ್ಲಿಸಿ ಎಂದು ಜಾರಿ ನಿರ್ದೇಶನಾಲಯ(ಇ.ಡಿ.)ಕ್ಕೆ ತಿಳಿಸಿದರು. ಈ ವೇಳೆ ತನ್ನ ಉತ್ತರವನ್ನು ಸಲ್ಲಿಸಿರುವುದಾಗಿ ಸಿಬಿಐ ತಿಳಿಸಿದೆ.

ಮೇ 31ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಚಿದಂಬರಂಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಅಲ್ಲದೆ, ಆಗಸ್ಟ್​ 1ರ ವಿಚಾರಣೆ ವರೆಗೆ ಒತ್ತಾಯಪೂರ್ವಕವಾಗಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಇ.ಡಿ.ಗೆ ಸೂಚನೆ ನೀಡಿತ್ತು. ಅಲ್ಲದೆ, ಸಿಬಿಐ ವಿಚಾರಣೆ ಅರ್ಜಿ ಪರಿಶೀಲನೆಯಲ್ಲೂ ಚಿದಂಬರಂ ಬಂಧನಕ್ಕೆ ನಿರೀಕ್ಷಣಾ ಜಾಮೀನು ನೀಡಿತ್ತು.