ದಿಕ್ಕು ತಪ್ಪಿದ ತನಿಖಾ ವರದಿ

ಹಾವೇರಿ: ಸರ್ಕಾರದ ಶೂ ಭಾಗ್ಯ ಯೋಜನೆಯಲ್ಲಿನ ಅವ್ಯವಹಾರದ ತನಿಖೆಗೆ ನೇಮಕಗೊಂಡಿದ್ದ ತನಿಖಾಧಿಕಾರಿಗಳು ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಮಾಡಿರುವುದು ತನಿಖಾ ವರದಿಯಿಂದ ಬಹಿರಂಗಗೊಂಡಿದೆ.

ಜಿಲ್ಲೆಯ ಹಿರೇಕೆರೂರ ತಾಲೂಕಿನ ಸರ್ಕಾರಿ ಶಾಲೆಗಳ 21 ಸಾವಿರ ವಿದ್ಯಾರ್ಥಿಗಳಿಗೆ 58 ಲಕ್ಷ ರೂ. ವೆಚ್ಚದಲ್ಲಿ ಶೂ ಭಾಗ್ಯ ಯೋಜನೆಯಡಿ ಶೂ ಮತ್ತು ಸಾಕ್ಸ್​ಗಳನ್ನು ಖರೀದಿಸಲಾಗಿತ್ತು. ಆದರೆ, ಈ ಯೋಜನೆಯಲ್ಲಿ ವ್ಯಾಪಕವಾದ ಅವ್ಯವಹಾರ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವ ಕುರಿತು ಮಾಜಿ ಶಾಸಕ ಯು.ಬಿ. ಬಣಕಾರ ಅವರು ಕೆಲ ದಾಖಲೆಗಳ ಮೂಲಕ ಆರೋಪ ಮಾಡಿದ್ದರು. ಈ ಕುರಿತು ಡಿಡಿಪಿಐ ಅವರಿಗೂ ಸೆ. 11ರಂದು ತನಿಖೆಗೆ ನಡೆಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ಅದರಂತೆ ಡಿಡಿಪಿಐ ಸೆ. 17ರಂದು ಸರ್ವ ಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯಾಧಿಕಾರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಸಮರ್ಪಕ ತನಿಖೆಯೇ ಆಗಿಲ್ಲ: ಮಾಜಿ ಶಾಸಕ ಯು.ಬಿ. ಬಣಕಾರ ಅವರು ಆರೋಪಿಸಿದ ವಿಷಯಗಳು ತನಿಖಾ ವರದಿಯಲ್ಲಿ ಮಾಯವಾಗಿವೆ. ಇದು ತನಿಖಾ ವರದಿಯ ಬಗೆಗೆ ಹಲವು ಸಂಶಯಗಳು ಮೂಡುವಂತೆ ಮಾಡಿವೆ.

ಶೂಭಾಗ್ಯ ಯೋಜನೆಯಲ್ಲಿ ನಡೆದ ಅವ್ಯವಹಾರದ ಕುರಿತು ಪ್ರಮುಖವಾಗಿ ಒಬ್ಬರೇ ಹಲವಾರು ಅಂಗಡಿಗಳ ಹೆಸರಲ್ಲಿ ಕೊಟೇಶನ್ ಕೊಟ್ಟಿದ್ದರು. ಅದನ್ನು ದಾಖಲೆಗಳ ಸಮೇತವಾಗಿ ದೂರು ನೀಡಲಾಗಿತ್ತು. ಕೊಟೇಶನ್​ಗಳ ಪ್ರತಿಗಳಲ್ಲಿನ ಸಹಿ ಹಾಗೂ ಅಕ್ಷರಗಳು ಒಂದೇ ರೀತಿಯಾಗಿದ್ದವು. ಇದರ ಕುರಿತು ತನಿಖಾ ವರದಿಯಲ್ಲಿ ಯಾವುದೇ ವಿಷಯ ಪ್ರಸ್ತಾಪವೇ ಆಗಿಲ್ಲ. ಇನ್ನು ಶೂ ಹಾಗೂ ಸಾಕ್ಸ್​ಗಳ ಗುಣಮಟ್ಟವನ್ನು ತಿಳಿಯಲು ಅದಕ್ಕೆ ಒಂದು ಮಾನದಂಡವಿದೆ. ಅದು ಬಿಟ್ಟು ಮಕ್ಕಳ, ಎಸ್​ಡಿಎಂಸಿಯವರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗಿದೆ. ಅಲ್ಲದೆ, 19 ಪ್ರೌಢಶಾಲೆಗಳಲ್ಲಿ ಒಂದೇ ಕಂಪನಿಯ ಶೂಗಳನ್ನು ನಿಯಮಾನುಸಾರ ಖರೀದಿಸಲಾಗಿದೆ. ಆದ್ದರಿಂದ ಶೂ ಖರೀದಿಯಲ್ಲಿ ಅವ್ಯವಹಾರ ಕಂಡುಬಂದಿಲ್ಲ. ಆದರೆ, ಕೆಲವೊಂದು ಶಾಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ನಿಯಮಾವಳಿ ಉಲ್ಲಂಘನೆಯಾಗಿದೆ. ಅಂತಹ ಶಾಲೆಗಳ ಮುಖ್ಯಾಧ್ಯಾಪಕರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ. ಆದರೆ, ಯಾವ ಶಾಲೆಗಳು ನಿಯಮ ಉಲ್ಲಂಘಿಸಿವೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಇದನ್ನೆಲ್ಲ ಗಮನಿಸಿದರೆ ತನಿಖಾ ವರದಿಯೇ ದಿಕ್ಕು ತಪ್ಪಿರುವ ಸಂಶಯ ಮೂಡುತ್ತದೆ. ಅಲ್ಲದೆ, ನಾನು ಮಾಡಿದ ಆರೋಪದ ಕುರಿತು ಸಮರ್ಪಕವಾದ ತನಿಖೆಯೂ ಆಗಿಲ್ಲ ಎಂದು ಮಾಜಿ ಶಾಸಕ ಯು.ಬಿ. ಬಣಕಾರ ದೂರಿದ್ದಾರೆ.

ಉದಾರ ದೇಣಿಗೆ ನೀಡಿದ್ದಾರಂತೆ: ಶೂಭಾಗ್ಯ ಯೋಜನೆಯಲ್ಲಿ ಶಾಲೆಗಳಿಗೆ ಶೂ, ಸಾಕ್ಸ್ ಪೂರೈಕೆ ಮಾಡಿರುವ ಏಜೆನ್ಸಿಗಳು ಶಾಲೆಗಳಿಗೆ ವಾಟರ್ ಫಿಲ್ಟರ್, ಊಟದ ತಟ್ಟೆಗಳು, ನೀರಿನ ಟ್ಯಾಂಕ್, ಕುಕ್ಕರ್, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಉದಾರವಾಗಿ ದೇಣಿಗೆ ನೀಡಿದ್ದಾರಂತೆ. ಹೀಗೆಂದು ತನಿಖಾಧಿಕಾರಿಗಳೇ ವರದಿಯಲ್ಲಿ ನಮೂದಿಸಿದ್ದಾರೆ. ನಿಯಮಾನುಸಾರ ಶೂ ಪೂರೈಸಿದ ಏಜೆನ್ಸಿಗಳೇಕೆ ದೇಣಿಗೆ ನೀಡಿದವು. ಶಾಲೆಗಳಿಗೆ ನೀಡಿದಂತೆ ತನಿಖಾಧಿಕಾರಿಗಳಿಗೂ ಏಜೆನ್ಸಿಗಳು ಉದಾರವಾದ ದೇಣಿಗೆ ನೀಡಿದ್ದಾರೆಯೇ ಎಂಬ ಸಂಶಯ ಮೂಡತೊಡಗಿದೆ.

ತನಿಖಾಧಿಕಾರಿಗಳು ನನ್ನ ದೂರಿನ ದಿಕ್ಕು ತಪ್ಪಿಸುವ ರೀತಿಯಲ್ಲಿ ವರದಿ ನೀಡಿದ್ದಾರೆ. ಮಾಡಿದ ತಪ್ಪನ್ನು ಮುಚ್ಚಿ ಹಾಕಲೆಂದೇ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಶಾಲೆಗಳಿಗೆ ದೇಣಿಗೆ ನೀಡಿದ ವಿಷಯ ಪ್ರಸ್ತಾಪವಾಗಿದೆ. ಇದೇ ವಿಷಯ ಸಾಕು ಅವ್ಯವಹಾರ ನಡೆದಿರುವುದನ್ನು ಗಮನಿಸಲು. ಆದರೂ ಡಿಡಿಪಿಐ ಅವರು ನನ್ನ ದೂರು ಹಾಗೂ ತನಿಖಾ ವರದಿಯನ್ನು ಪರಿಶೀಲನೆ ಮಾಡಿದಂತೆ ಕಂಡುಬಂದಿಲ್ಲ. ಈ ಕೂಡಲೇ ಸರಿಯಾದ ತನಿಖೆ ನಡೆಸದ ತನಿಖಾಧಿಕಾರಿ ಹಾಗೂ ನಿಯಮ ಉಲ್ಲಂಘಿಸಿದ ಮುಖ್ಯಾಧ್ಯಾಪಕರ ಮೇಲೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿಯೂ ಡಿಡಿಪಿಐ ಅವರಿಗೆ ಪತ್ರ ಬರೆದಿದ್ದೇನೆ.

– ಯು.ಬಿ. ಬಣಕಾರ, ಮಾಜಿ ಶಾಸಕರು ಹಿರೇಕೆರೂರ

ಶೂಭಾಗ್ಯ ಯೋಜನೆಯಲ್ಲಿನ ತನಿಖಾ ವರದಿಯಂತೆ ನಿಯಮ ಉಲ್ಲಂಘಿಸಿದ ಮುಖ್ಯಾಧ್ಯಾಪಕರಿಗೆ ನೋಟಿಸ್ ನೀಡುವಂತೆ ಬಿಇಒ ಅವರಿಗೆ ತಿಳಿಸಿದ್ದೇನೆ. ಈಗಾಗಲೇ ನೋಟಿಸ್​ಗಳನ್ನು ಕೊಟ್ಟಿರಬಹುದು. ತನಿಖಾ ವರದಿಯಲ್ಲಿ ಏಜೆನ್ಸಿಗಳು ಶಾಲೆಗಳಿಗೆ ಉದಾರ ದೇಣಿಗೆ ನೀಡಿರುವ ವಿಷಯ ಪ್ರಸ್ತಾಪಿಸಿರುವುದು ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸುತ್ತೇನೆ. ಎಲ್ಲವೂ ನಿಯಮದ ಪ್ರಕಾರವೇ ನಡೆದಿದೆ. ಮಾಜಿ ಶಾಸಕರ ಆರೋಪ ಮಾಡಿರುವಂತೆ ಒಬ್ಬರೇ ಕೊಟೇಶನ್ ಕೊಟ್ಟಿರುವುದು ಪತ್ತೆಯಾಗಿಲ್ಲ. -ಅಂದಾನಪ್ಪ ವಡಗೇರಿ, ಡಿಡಿಪಿಐ ಹಾವೇರಿ