ಮೂರು ವರ್ಷಗಳಿಂದ ತನಿಖೆ ನಡೆಸಿದರೂ ನಿಗೂಢವಾಗುಳಿದ ನಾಪತ್ತೆ ಪ್ರಕರಣ

ತರೀಕೆರೆ: ಮೂರು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಗಡೀಹಳ್ಳಿ ತಾಪಂ ಕ್ಷೇತ್ರದ ಮಾಜಿ ಸದಸ್ಯ ಜಿ.ಬಿ.ಕೃಷ್ಣಮೂರ್ತಿ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

2016ರ ತಾಪಂ ಚುನಾವಣೆಯಲ್ಲಿ ಗಡಿಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು. ಆದರೆ ಪ್ರಚಾರವಿಲ್ಲದೆ 273 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕೃಷ್ಣಮೂರ್ತಿ ಪತ್ತೆಗೆ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿತ್ತು. ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡು ರಾಜ್ಯದ ವಿವಿಧೆಡೆ ಹುಡುಕಾಟ ನಡೆಸಿತಾದರೂ ಸಣ್ಣದೊಂದು ಸುಳಿವೂ ಸಿಕ್ಕಿಲ್ಲ. ಆದರೆ ಜಿ.ಬಿ.ಕೃಷ್ಣಮೂರ್ತಿ ಪತ್ನಿ ಪ್ರೇಮಾ ಮಾತ್ರ ಪತಿಯ ಜೀವಕ್ಕೆ ಯಾವುದೆ ಹಾನಿಯಾಗಿಲ್ಲ ಎಂಬ ಆಶಾದಾಯಕ ಮಾತುಗಳನ್ನಾಡುತ್ತಿದ್ದಾರೆ.

2005ರಲ್ಲಿ ನಡೆದ ತಾಪಂ ಚುನಾವಣೆಯಲ್ಲೂ ಇದೇ ಗಡೀಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ, ನಾಮಪತ್ರ ಸಲ್ಲಿಸಿದ ಬಳಿಕ ಕೃಷ್ಣಮೂರ್ತಿ ಕಾಣೆಯಾಗಿದ್ದರು. ಗೆಲುವನ್ನು ದೃಢಪಡಿಸಿಕೊಂಡ ನಂತರ ಮನೆಗೆ ವಾಪಸಾಗಿದ್ದರು. ಆಗ ಎಲ್ಲಿಗೆ ಹೋಗಿದ್ದರು? ಏತಕ್ಕಾಗಿ ಹೋಗಿದ್ದರು?ಎಂಬ ಬಗ್ಗೆ ಯಾರೂ ಲಕ್ಷ್ಯ ಕೊಡಲಿಲ್ಲ. ಈ ಬಾರಿಯೂ ಮತ್ತೆ ಬರುತ್ತಾರೆಂದು ಭಾವಿಸಿದ್ದ ಕುಟುಂಬಸ್ಥರ ನಿರೀಕ್ಷೆ ಹುಸಿಯಾಗಿದೆ

ಸ್ನೇಹಿತನ ಬಂಧನ ತಂದ ಅನುಮಾನ: ತನ್ನೊಂದಿಗೆ ಆತ್ಮೀಯವಾಗಿದ್ದ ಎಂದು ಹೇಳಲಾಗುತ್ತಿರುವ ಆಸುಂಡಿ ನಾಗರಾಜ್ ಎಂಬುವವರನ್ನು ಗಡೀಹಳ್ಳಿ ಗ್ರಾಪಂ ಅಧ್ಯಕ್ಷನನ್ನಾಗಿಸುವಲ್ಲಿ ಕೃಷ್ಣಮೂರ್ತಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅಧ್ಯಕ್ಷನಾದ ನಾಲ್ಕೇ ದಿನದಲ್ಲಿ ಆಸುಂಡಿ ನಾಗರಾಜ್ ದಾವಣಗೆರೆಯಲ್ಲಿ ಖೋಟಾ ನೋಟು ದಂಧೆಯಲ್ಲಿಸಿಕ್ಕಿ ಬಿದ್ದಿದ್ದರು. ಈ ಖೋಟಾ ನೋಟಿನ ದಂಧೆ ಮತ್ತು ನಾಪತ್ತೆ ಪ್ರಕರಣಕ್ಕೂ ನಂಟಿದೆ ಎಂದು ತಳುಕು ಹಾಕಲಾಗುತ್ತಿದೆ ಎನ್ನುತ್ತಾರೆ ಕೃಷ್ಣಮೂರ್ತಿ ಕುಟುಂಬದ ಹಿತೈಷಿ.

ಮೂಲೆ ಸೇರಿತು ಪ್ರಕರಣದ ಫೈಲು: ಮೂರು ವರ್ಷಕ್ಕೂ ಅಧಿಕ ಸಮಯದಿಂದ ತನಿಖಾ ತಂಡದ ನಿದ್ದೆಗೆಡಿಸಿರುವ ಕೃಷ್ಣಮೂರ್ತಿ ನಾಪತ್ತೆ ಪ್ರಕರಣದಲ್ಲಿ ಯಾವುದೆ ರೀತಿಯ ತಿರುವಾಗಲಿ, ಸಣ್ಣ ಸುಳಿವಾಗಲಿ ಸಿಕ್ಕಿಲ್ಲ. ಎಲ್ಲ ಆಯಾಮಗಳಲ್ಲಿ ಹುಡುಕಾಟ ನಡೆಸಿದ ಪೊಲೀಸರು ರೋಸಿಹೋಗಿದ್ದಾರೆ. ಅವಧಿ ಮೀರಿದ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣಕ್ಕೆ ತಾತ್ಕಾಲಿಕ ತಡೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಉನ್ನತ ಮಟ್ಟದ ಅಧಿಕಾರಿ ಕಚೇರಿ ಅಲೆದಾಡಿದ ಫೈಲು ಕೊನೆಗೆ ಅಜ್ಜಂಪುರ ಠಾಣೆಯ ಮೂಲೆ ಸೇರಿದೆ.

ಪತಿ ನಾಮಬಲದಲ್ಲಿ ಪತ್ನಿ ಗೆಲುವು: ಗಡೀಹಳ್ಳಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ನಾಪತ್ತೆಯಾದರೂ ಕೃಷ್ಣಮೂರ್ತಿ ಜಯಭೇರಿ ಬಾರಿಸಿದ್ದರು. 2016ರ ಮೇ 12ರಂದು ನಡೆದ ತಾಪಂ ಅಧ್ಯಕ್ಷರ ಚುನಾವಣೆ ಮತ್ತು 8ಕ್ಕೂ ಅಧಿಕ ಸಾಮಾನ್ಯ ಸಭೆಗಳಿಗೆ ನಿರಂತರ ಗೈರಾಗಿದ್ದರು. ಪಂಚಾಯತ್​ರಾಜ್ ಅಧಿನಿಯಮದ ಪ್ರಕಾರ 129/ಡಿ ಅಡಿ ಕೃಷ್ಣಮೂರ್ತಿ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು. ತೆರವಾದ ಸ್ಥಾನಕ್ಕೆ 2017ರ ಡಿ.17ರಂದು ಚುನಾವಣಾ ಆಯೋಗ ಉಪ ಚುನಾವಣೆ ಘೊಷಿಸಿತು. ಕ್ಷೇತ್ರದ ಜನರ ಒತ್ತಡಕ್ಕೆ ಮಣಿದು ಕೃಷ್ಣಮೂರ್ತಿ ಪತ್ನಿ ಪ್ರೇಮಾ ಸ್ಪರ್ಧೆ ಮಾಡಿ ಬಿಜೆಪಿ ಪ್ರತಾಪ್ ವಿರುದ್ಧ 385 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಪತಿ ನಾಪತ್ತೆ ಆತಂಕದಲ್ಲಿದ್ದ ಪ್ರೇಮಾ ಅವರಿಗೆ ಇತ್ತೀಚೆಗೆ ಅವರ ತಂದೆಯ ಸಾವಿನ ಆಘಾತ ತಂದಿದೆ.

4 ತಿಂಗಳ ನಂತರ ಬಂದಿತ್ತೊಂದು ಪತ್ರ: 2016ರ ಫೆ. 11ರಂದು ನಾಪತ್ತೆಯಾದ ಗಡೀಹಳ್ಳಿ ಕೃಷ್ಣಮೂರ್ತಿ ಶಿವಮೊಗ್ಗದ ಲಾಡ್ಜ್​ವೊಂದರಲ್ಲಿ ಮರುದಿನ ಪ್ರತ್ಯಕ್ಷರಾಗಿದ್ದರು. ಅಲ್ಲಿಂದಲೂ ದಿಢೀರ್ ಕಣ್ಮರೆಯಾಗಿ 4 ತಿಂಗಳ ನಂತರ ಹಾಸನ ಅಂಚೆ ಕಚೇರಿಯಿಂದ ಗಡೀಹಳ್ಳಿ ವಿಳಾಸದ ತಮ್ಮ ಮನೆಗೆ ಪತ್ರವೊಂದನ್ನು ಬರೆದಿದ್ದರು. ಆ ಪತ್ರ ನಮ್ಮ ಮನೆಯ ವಿಳಾಸಕ್ಕೆ ಬಂದು ತಲುಪಿದ್ದು, ಪೊಲೀಸರ ಕೈಗೆ ಒಪ್ಪಿಸಲಾಗಿದೆ. ಪತ್ರದ ಮೊದಲೆರಡು ಸಾಲಿನ ಸಾರಾಂಶ ಮತ್ತು ನಮ್ಮೂರಿನ ವಿಳಾಸ ಮಾತ್ರ ಅವರದ್ದೇ ಕೈಬರಹದಿಂದ ಕೂಡಿದ್ದು, ಇನ್ನುಳಿದ ವಿಷಯಗಳನ್ನು ಅಪರಿಚಿತರು ಬರೆದಿದ್ದಾರೆಂದು ಕೃಷ್ಣಮೂರ್ತಿ ಪತ್ನಿ ಪ್ರೇಮಾ ಹೇಳುತ್ತಾರೆ.

ಲಾಡ್ಜ್​ನಲ್ಲಿ ಬಳಸಿದ ಸಿಮ್ ಯಾವುದು?: ಕೃಷ್ಣಮೂರ್ತಿ ಸಾಮಾನ್ಯವಾಗಿ ಬಳಸುತ್ತಿದ್ದ ಬಿಎಸ್​ಎನ್​ಎಲ್ ಮತ್ತು ಏರ್​ಟೆಲ್ ಮೊಬೈಲ್ ಸಿಮ್ಳು ಭದ್ರಾವತಿ ದಾಟುತ್ತಿದ್ದಂತೆ ಸ್ವಿಚ್​ಆಫ್ ಆಗಿವೆ ಎಂದು ನೆಟ್​ವರ್ಕ್ ಲೊಕೇಷನ್ ಪರಿಶೀಲಿಸಿದಾಗ ಗೊತ್ತಾಗಿದೆ. ನಾಪತ್ತೆಯಾದ ಮರುದಿನ ಶಿವಮೊಗ್ಗದ ಲಾಡ್ಜ್​ವೊಂದರಲ್ಲಿ ವಾಸ್ತವ್ಯ ಹೂಡಿರುವ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಅವರು ಯಾರೊಂದಿಗೋ ಮೊಬೈಲ್​ನಲ್ಲಿ ಮಾತನಾಡುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸಿಕ್ಕಿವೆ. ಬೇರೊಂದು ಸಿಮ್ ಬಳಸಿ ಯಾರೊಂದಿಗೋ ಮಾತನಾಡುತ್ತಿದ್ದುದು ಹಲವು ಸಂಶಯಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *