ನವದೆಹಲಿ: ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಗುರುವಾರ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಮೀಪದ ಮೇಘನಿನಗರದಲ್ಲಿನ ಬಿ.ಜಿ. ಆಸ್ಪತ್ರೆಯ ಹಾಸ್ಟೆಲ್ ಮೇಲೆ ಪತನಗೊಂಡು ಒಟ್ಟು 265 ಜನರ ಸಾವಿಗೆ ಕಾರಣವಾದ ಡ್ರೀಮ್ಲೈನರ್ ವಿಮಾನಗಳ ಸುರಕ್ಷತೆ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಏರ್ ಇಂಡಿಯಾ ಸಂಸ್ಥೆಗೆ ಸೇರಿದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನ ಪತನದಿಂದ ಅದರಲ್ಲಿ 242 ಮಂದಿ ಪೈಕಿ ಒಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರೂ ಸಾವಿಗೀಡಾಗಿದ್ದಲ್ಲದೆ, ಹಾಸ್ಟೆಲ್ ಕಟ್ಟಡದಲ್ಲಿನ ವೈದ್ಯರು ಹಾಗೂ ಇತರರು ಸೇರಿ 24 ಮಂದಿ ಕೂಡ ಮೃತಪಟ್ಟಿದ್ದಾರೆ. ದೇಶದಲ್ಲಿನ ಎರಡನೇ ಅತ್ಯಂತ ಭೀಕರ ವಿಮಾನಪತನ ಇದಾಗಿರುವ ಹಿನ್ನೆಲೆಯಲ್ಲಿ ಬೋಯಿಂಗ್ ಡ್ರೀಮ್ಲೈನರ್ 787-8 ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಅಮೆರಿಕದ ವೈಡ್ಬಾಡಿ ವಿಮಾನದ ಸುರಕ್ಷತಾ ಪರಿಶೀಲನೆಗಾಗಿ ಈ ಸ್ಥಗಿತ ಕೈಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಾತುಕತೆ ನಡೆಯುತ್ತಿದೆ. ಅಪಘಾತದ ತನಿಖೆಯ ಆಧಾರದ ಮೇಲೆ ನಿರ್ಧಾರ ತಳೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತಪಾಸಣೆ ತೀವ್ರ
ವಿಮಾನಪತನ ಹಿನ್ನೆಲೆಯಲ್ಲಿ ಜಿಇ ಎನ್ಎಕ್ಸ್ ಇಂಜಿನ್ ಹೊಂದಿರುವ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನಗಳನ್ನು ತೀವ್ರ ತಪಾಸಣೆಗೆ ಒಳಪಡಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಆದೇಶಿಸಿದೆ. ಟೇಕಾಫ್ ಮಾನದಂಡಗಳು ಸೇರಿದಂತೆ ಇತರ ವ್ಯವಸ್ಥೆಗಳ ಪರಿಶೀಲನೆಯನ್ನು ಈ ತಪಾಸಣೆ ಒಳಗೊಂಡಿರಲಿದೆ. ಏರ್ ಇಂಡಿಯಾ ವಿಮಾನ ನಿರ್ವಹಣೆಗೆ ಸಂಬಂಧಿಸಿದ ಅದರ ಪ್ರಮಾಣಿತ ಕಾರ್ಯåಚರಣಾ ಕಾರ್ಯವಿಧಾನದ ಬಗ್ಗೆಯೂ ಪರಿಶೀಲನೆ ನಡೆಯಬಹುದು ಎನ್ನಲಾಗಿದೆ. ಏರ್ ಇಂಡಿಯಾ ಸಂಸ್ಥೆಯು 26 ಬೋಯಿಂಗ್ 787-8 ಮತ್ತು ಏಳು ಬೋಯಿಂಗ್ 787-9 ವಿಮಾನಗಳನ್ನು ಹೊಂದಿದೆ. ನಿರ್ವಹಣೆ ಸಂಬಂಧ ಪರಿಶೀಲನಾ ವರದಿ ಸಲ್ಲಿಸುವಂತೆ ಡಿಜಿಸಿಎ ಈಗಾಗಲೇ ಏರ್ ಇಂಡಿಯಾಗೆ ತಿಳಿಸಿತ್ತು.
ಘಟನಾ ಸ್ಥಳ ಪರಿಶೀಲಿಸಿದ ಮೋದಿ
ಅಹಮದಾಬಾದ್: ದೇಶದ ಎರಡನೇ ಅತ್ಯಂತ ಭೀಕರ ವಿಮಾನಪತನ ಪ್ರಕರಣ ಸಂಭವಿಸಿದ ಗುಜರಾತ್ನ ಅಹಮದಾಬಾದ್ನ ಮೇಘನಿನಗರ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಿಎಂ ಭೂಪೇಂದ್ರ ಪಟೇಲ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಘಟನಾ ಸ್ಥಳವನ್ನು ಪರಿಶೀಲಿಸಿ, ಅವಲೋಕನ ನಡೆಸಿದರು.
‘ವಿಮಾನಪತನ ಸ್ಥಳಕ್ಕೆ ಭೇಟಿ ನೀಡಿದೆ, ವಿನಾಶದ ದೃಶ್ಯವು ತೀವ್ರ ದುಃಖಕರವಾಗಿದೆ, ಘಟನೆ ಬಳಿಕ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ಹಾಗೂ ತಂಡವನ್ನೂ ಭೇಟಿ ಮಾಡಿದೆ. ಊಹಿಸಲೂ ಆಗದ ಈ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ನಮ್ಮ ಸಹಾನುಭೂತಿ ಇದೆ’ ಎಂಬುದಾಗಿ ಪ್ರಧಾನಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಮಾನಪತನ ಪ್ರಕರಣ ಹಿನ್ನೆಲೆಯಲ್ಲಿ ಶುಕ್ರವಾರ ಗುಜರಾತ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ಕುರಿತಂತೆ ಗುಜರಾತ್ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವಿಮಾನನಿಲ್ದಾಣ ಸಮೀಪದ ಗುಜ್ಸಾಯಿಲ್ ಕಟ್ಟಡದಲ್ಲಿ ಈ ಸಭೆ ನಡೆಯಿತು. ವಿಮಾನಪತನ ಪ್ರಕರಣ ಮುನ್ನ ಮತ್ತು ನಂತರದ ಹಲವು ವಿದ್ಯಮಾನಗಳ ಕುರಿತು ಪ್ರಧಾನಿ ಅವರಿಗೆ ಅಧಿಕಾರಿಗಳು ವಿವರಿಸಿದರು. ಅದಕ್ಕನುಗುಣವಾಗಿ ಅಧಿಕಾರಿಗಳಿಗೆ ಪ್ರಧಾನಿಯವರು ಕೆಲವು ಸೂಚನೆಗಳನ್ನು ನೀಡಿದರು.
ರೂಪಾಣಿ ಕುಟುಂಬಸ್ಥರಿಗೆ ಸಾಂತ್ವನ
ವಿಮಾನಪತನದಲ್ಲಿ ದುರಂತ ಸಾವಿಗೀಡಾದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರ ಮನೆಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ‘ವಿಜಯ್ ರೂಪಾಣಿಯವರನ್ನು ನಾನು ದಶಕಗಳಿಂದ ಬಲ್ಲೆ, ಆದರೆ ಇಂದು ಅವರು ನಮ್ಮೊಂದಿಗಿಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಾಗುತ್ತಿಲ್ಲ. ಕೆಲವು ಸವಾಲಿನ ಸಂದರ್ಭಗಳೂ ಸೇರಿದಂತೆ ಹಲವಾರು ಸಮಯಗಳಲ್ಲಿ ನಾವು ಹೆಗಲಿಗೆ ಹೆಗಲಾಗಿ ಒಟ್ಟಿಗೆ ಕೆಲಸ ಮಾಡಿದ್ದೆವು’ ಎಂದು ರೂಪಾಣಿ ಜತೆಗಿನ ಒಡನಾಟದ ಬಗ್ಗೆ ಪ್ರಧಾನಿ ಎಕ್ಸ್ನಲ್ಲಿ ಹೇಳಿಕೊಂಡಿದ್ದಾರೆ. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದ ಅವರು ವಿನಯವಂತ ಶ್ರಮಜೀವಿಯಾಗಿದ್ದರು. ಮೇಯರ್, ರಾಜ್ಯಸಭಾ ಸದಸ್ಯ, ಸಚಿವ, ರಾಜ್ಯ ಬಿಜೆಪಿ ಅಧ್ಯಕ್ಷ, ಮುಖ್ಯಮಂತ್ರಿ ಹೀಗೆ ತಮಗೆ ವಹಿಸಲಾಗಿದ್ದ ಪ್ರತಿ ಜವಾಬ್ದಾರಿಯನ್ನೂ ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು ಎಂದು ರೂಪಾಣಿಯವರನ್ನು ಪ್ರಧಾನಿ ಸ್ಮರಿಸಿದರು. ವಿಜಯ್ ರೂಪಾಣಿ ಪತ್ನಿ ಅಂಜಲಿ ರೂಪಾಣಿ ಅವರನ್ನೂ ಸಂತೈಸಿದರು.