More

  ಸಿದ್ದಾಪುರ ಗ್ರಾಪಂನಲ್ಲಿ ಅನುದಾನ ದುರುಪಯೋಗ ತನಿಖೆ ನಡೆಸಿ

  ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿಯ ಲೆಕ್ಕ ಪರಿಶೋಧನೆ ಹಾಗೂ ಜಮಾಬಂದಿ ಸಭೆ ಅಧ್ಯಕ್ಷೆ ಪ್ರೇಮಾ ಗೋಪಾಲ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.


  ಹಿಂದಿನ ಅಧ್ಯಕ್ಷೆ ರೀನಾ ತುಳಸಿ ಅವಧಿಯಲ್ಲಿ ಕೈಗೊಂಡಿದ್ದ ಸೋಲಾರ್ ಅಳವಡಿಕೆಗೆ ಹಾಗೂ ವಿವಿಧ ಕಾಮಗಾರಿಗಳ ಖರ್ಚು-ವೆಚ್ಚಗಳ ಬಗ್ಗೆ ಲೆಕ್ಕಪತ್ರ ಮಂಡಿಸಲಾಯಿತು. ಕಳೆದ ಆಡಳಿತ ಮಂಡಳಿ ಸೋಲಾರ್ ದುರಸ್ತಿ ಹಾಗೂ ಅಳವಡಿಕೆಗೆ ಮಾಡುವ ಸಂಬಂಧ ಗುತ್ತಿಗೆದಾರರಿಗೆ 8,45,921 ರೂ. ಪಾವತಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ನೋಡಲ್ ಅಧಿಕಾರಿಯನ್ನು ಸಾರ್ವಜನಿಕರು ಒತ್ತಾಯಿಸಿದರು.


  ಸೋಲಾರ್ ಅಳವಡಿಕೆಗೆ ಭಾರಿ ಮೊತ್ತದ ಹಣ ಖರ್ಚು ಮಾಡಿದರೂ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬಂದಿರುವುದಕ್ಕೆ ಆಕ್ಷೇಪಿಸಿದ ಗ್ರಾಮಸ್ಥರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


  ಕಸ ವಿಲೇವಾರಿ ಹಾಗೂ ಪೌರಕಾರ್ಮಿಕರ ಪರಿಕರ ಖರೀದಿಸಲು 10,21,726 ರೂ.ವೆಚ್ಚ ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಪಂಚಾಯಿತಿಯಲ್ಲಿ ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿದರು.


  ಲೆಕ್ಕ ಪತ್ರಗಳಲ್ಲಿ ಈ ಹಿಂದಿನ ಆಡಳಿತ ಮಂಡಳಿ ಭಾರಿ ಮೊತ್ತದ ಹಣವನ್ನು ದುರುಪಯೋಗ ಮಾಡಿದ್ದು ಈ ಸಂಬಂಧ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಮುಖಂಡ ರಮೇಶ್ ಒತ್ತಾಯಿಸಿದರು.


  ವಿರಾಜಪೇಟೆ ರಸ್ತೆಯ ಅಯ್ಯಪ್ಪ ದೇವಾಲಯದ ಮುಂಭಾಗದ ಅಮೃತಾ ಕೆರೆಯನ್ನು ಯಂತ್ರದ ಮೂಲಕ ಹೂಳು ತೆಗೆಸಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಪಾವತಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.


  ನೋಡಲ್ ಅಧಿಕಾರಿಯೂ ಆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕಿ ಕವಿತಾ ಮಾತನಾಡಿ, ಕಳೆದ ಸಾಲಿನ ಆಡಳಿತ ಮಂಡಳಿ ಅವಧಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ವ್ಯಕ್ತಪಡಿಸಿರುವುದರಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಮುಂದಿನ ಏಳು ದಿನಗಳೊಳಗಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು.


  ಗ್ರಾ.ಪಂ. ಉಪಾಧ್ಯಕ್ಷ ಪಳನಿ ಸ್ವಾಮಿ, ಮಾಜಿ ಅಧ್ಯಕ್ಷೆ ರೀನಾ ತುಳಸಿ ಅಭಿವೃದ್ಧಿ ಅಧಿಕಾರಿ ಶಫೀಕ್, ಕಾರ್ಯದರ್ಶಿ ಮೋಹನ್, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಧಿಕಾರಿ ಸತೀಶ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts