ಅಕ್ರಮಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಿ

ಯಳಂದೂರು: ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ವಿವೇಕಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಲ್ಲೇಶಪ್ಪ ಬಿಳಿಗಿರಿರಂಗನಬೆಟ್ಟದಲ್ಲಿ ರೈಸ್ ಪುಲ್ಲಿಂಗ್, ಕಾಡು ಪ್ರಾಣಿಗಳ ಬೇಟೆ ಸೇರಿ ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿರುವ ಶಂಕೆ ಇರುವುದರಿಂದ ಅವರ ವಿರುದ್ಧ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಳಿಗಿರಿರಂಗನಬೆಟ್ಟದ ಗ್ರಾಮಸ್ಥರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.

ಮಲ್ಲೇಶಪ್ಪ ಬೆಟ್ಟದಲ್ಲಿ ಹಲವು ವರ್ಷಗಳಿಂದಲೂ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಈಚೆಗೆ ರೈಸ್ ಪುಲ್ಲಿಂಗ್ ಹಾಗೂ ಕಾಡು ಪ್ರಾಣಿಗಳ ಬೇಟೆಯಲ್ಲಿ ಬಂಧಿಸಿರುವ ಆರೋಪಿಗಳು ಇವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು ಎಂಬುದನ್ನು ಸ್ವತಃ ಅವರೇ ಬಯಲು ಮಾಡಿದ್ದಾರೆ. ಹಾಗಾಗಿ ಕೂಡಲೇ ಅವರನ್ನು ವನ್ಯಜೀವಿ ಮಂಡಳಿ ಸದಸ್ಯ ಸ್ಥಾನದಿಂದ ವಜಾ ಮಾಡುವಂತೆ ಶಿಫಾರಸು ಮಾಡಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿದೆ. ಕಾರ್ಯಕಾರಿ ಸಮಿತಿ ಸದಸ್ಯರು, ಸಂಸ್ಥೆಯ ಪತ್ರ ವ್ಯವಹಾರಗಳು, ಸಂಸ್ಥೆಗೆ ವಿವಿಧ ರೂಪದಲ್ಲಿ ಬಂದಿರುವ ದೇಣಿಗೆ ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಬೇಕು. ಟ್ರಸ್ಟ್‌ನ ಹೆಸರಿನಲ್ಲಿರುವ ಅಕ್ರಮ ಆಸ್ತಿಗಳ ಬಗ್ಗೆ ತನಿಖೆಯಾಗಬೇಕು. ಇದಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಬೇಕು ಎಂದು ಆಗ್ರಹಿಸಿದರು.

ಬಿಳಿಗಿರಿರಂಗನಬೆಟ್ಟದ ಜಿಲ್ಲಾ ಬುಡಕಟ್ಟು ಸಂಘದ ಸಂಯೋಜಕ ಮಾದಪ್ಪ, ತಾಲೂಕು ಗಿರಿಜನ ಸಂಘದ ಅಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಬೇದೇಗೌಡ. ಗ್ರಾಪಂ ಮಾಜಿ ಅಧ್ಯಕ್ಷ ಶೇಷಾದ್ರಿ, ವೆಂಕಟೇಶ್, ಸಂತೋಷ್ ಇದ್ದರು.

Leave a Reply

Your email address will not be published. Required fields are marked *