ರಾಜ್ಯದಲ್ಲಿ ಹೂಡಿಕೆ ಕುರಿತು ಸಿಎಂ ಎಚ್ಡಿಕೆ ಜತೆ ಚರ್ಚಿಸಿದ ಚೀನಾ ನಿಯೋಗ

ಬೆಂಗಳೂರು: ಚೀನಾದ ಗುಝಾವ್ ಪ್ರಾಂತ್ಯದ ಸ್ಥಾಯಿ ಸಮಿತಿ ಸದಸ್ಯರಾದ ಮು. ಡಿಗಾಯ್ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಹೂಡಿಕೆಯ ಕುರಿತು ಚರ್ಚೆ ನಡೆಸಿತು.

ಭಾರತ ಮತ್ತು ಚೀನಾ ದೇಶಗಳ ನಡುವೆ ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಆರ್ಥಿಕತೆ, ನೆಟ್‍ವರ್ಕ್ ಭದ್ರತೆ, ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಇನ್ನಿತರ ವಿಷಯಗಳಲ್ಲಿ ಸಹಕಾರ ವೃದ್ಧಿಸುವ ಸಂಬಂಧ ಈ ನಿಯೋಗವು ಸಿಎಂ ಎಚ್ಡಿಕೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಕರ್ನಾಟಕವು ಭಾರತದಲ್ಲಿಯೇ ವಾಣಿಜ್ಯೋದ್ಯಮದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯದಲ್ಲಿ ಚೀನಾ ಹೂಡಿಕೆಗಳನ್ನು ಪ್ರೋತ್ಸಾಹಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ವಿಶ್ವದಲ್ಲಿ ಸ್ಟಾರ್ಟ್‍ಅಪ್‍ಗಳನ್ನು ಪ್ರಾರಂಭಿಸಲು ಇರುವ ಪ್ರಾಶಸ್ತ ಸ್ಥಳಗಳ ಪೈಕಿ ಕರ್ನಾಟಕ ಎರಡನೇ ಅತ್ಯುತ್ತಮ ರಾಜ್ಯ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ವಿಶ್ವದ ಪ್ರಮುಖ ಐದು ಅತ್ಯುತ್ತಮ ವ್ಯವಸ್ಥೆಯುಳ್ಳ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂದು ತಿಳಿಸಿದ ಎಚ್ಡಿಕೆ, ಕ್ಯಾಲಿಫೋರ್ನಿಯಾ ನಂತರ ಬೆಂಗಳೂರು ಸೆಮಿಕಂಡಕ್ಟರ್ ಕಂಪನಿಗಳ ಅತಿದೊಡ್ಡ ಕೇಂದ್ರವೂ ಹೌದು ಎಂದು ನಿಯೋಗಕ್ಕೆ ತಿಳಿಸಿದರು.
ಅಲ್ಲದೆ, ಕರ್ನಾಟಕದಲ್ಲಿ ದೊರೆಯುವ ಆರ್ಥಿಕ ಅವಕಾಶಗಳನ್ನು ಬಳಸಿಕೊಳ್ಳಲು ಹೂಡಿಕೆದಾರರಿಗೆ ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು.