ರೈತರಿಗೆ ಹೊಸ ಕೊಡುಗೆ | ಪುಷ್ಟಿದಾಯಕ ಆಹಾರ ಬೆಳೆಗೆ ಆದ್ಯತೆಗೆ ಸಲಹೆ
ನವದೆಹಲಿ: ಅಧಿಕ ಇಳುವರಿ ಕೊಡುವ ಹಾಗೂ ಯಾವುದೇ ಹವಾಮಾನಕ್ಕೂ ಹೊಂದಿಕೊಳ್ಳಬಲ್ಲ 109 ವೈವಿಧ್ಯಮಯ ಬೀಜ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದರು. ಇವು ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬೀಜಗಳಾಗಿದ್ದು ಉತ್ಪಾದಕತೆ ಹಾಗೂ ರೈತರ ಆದಾಯವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಬೆಳೆಗಳ ಪೌಷ್ಟಿಕತೆಯನ್ನು ಹೆಚ್ಚಿಸುವ ಸಾಮರ್ಥ್ಯದ (ಬಯೋಫೋರ್ಟಿಫೈಡ್) ಈ ಬೀಜಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಭಿವೃದ್ಧಿಪಡಿಸಿದೆ. 61 ಬೆಳೆಗಳಿಗೆ ಸಂಬಂಧಿಸಿದ ಈ ಬೀಜಗಳಲ್ಲಿ 34 ಹೊಲಗಳ ಬೆಳೆಗಳು ಮತ್ತು 27 ತೋಟಗಾರಿಕೆ ಬೆಳೆಗಳದ್ದಾಗಿದೆ. 2024-25ನೇ ಸಾಲಿನ ಬಜೆಟ್ನಲ್ಲಿ ಈ ಬೀಜಗಳ ಬಿಡುಗಡೆ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು.
ದೆಹಲಿಯ ಪುಸಾ ಕ್ಯಾಂಪಸ್ನ ಮೂರು ಪ್ರಾಯೋಗಿಕ ಕೃಷಿ ಕೇಂದ್ರಗಳಲ್ಲಿ ಬೀಜಗಳನ್ನು ಬಿಡುಗಡೆ ಮಾಡಿದ ಮೋದಿ, ರೈತರೊಂದಿಗೆ ಸಂವಾದವನ್ನೂ ನಡೆಸಿದರು. ಧಾನ್ಯಗಳು, ಸಿರಿ ಧಾನ್ಯಗಳು, ಮೇವು ಬೆಳೆಗಳು, ಎಣ್ಣೆ ಬೀಜಗಳು, ಕಾಳುಗಳು, ಕಬ್ಬು, ಹತ್ತಿ ಮತ್ತು ಫೈಬರ್ ಬೆಳೆಗಳ ಬೀಜಗಳು ಹೊಲಗಳಲ್ಲಿ ಬೆಳೆಯುವ ಫಸಲಿನ ಬೀಜಗಳಲ್ಲಿ ಸೇರಿವೆ. ವಿವಿಧ ಹಣ್ಣುಗಳು, ತರಕಾರಿಗಳು, ಪ್ಲಾಂಟೇಶನ್ ಬೆಳೆಗಳು, ಟ್ಯೂಬರ್ಗಳು, ಸಾಂಬಾರಗಳು, ಹಣ್ಣುಗಳು ಮತ್ತು ಔಷಧೀಯ ಸಸ್ಯಗಳು ತೋಟಗಾರಿಕೆಯ ಬೀಜಗಳಲ್ಲಿ ಸೇರಿವೆ.
ಯಾವ್ಯಾವ ಬೀಜಗಳು?
ಧಾನ್ಯಗಳ 23, ಭತ್ತದ ಒಂಬತ್ತು, ಗೋಧಿಯ ಎರಡು, ಬಾರ್ಲಿ, ಬೇಳೆ, ರಾಗಿ, ಛೀನಾ ಮತ್ತು ಸಾಂಬಾದ ತಲಾ ಒಂದು, ಮೆಕ್ಕೆಜೋಳದ ಆರು ಬೀಜ ತಳಿಗಳು ಪ್ರಧಾನಿ ಬಿಡುಗಡೆ ಮಾಡಿದ 109 ತಳಿಗಳಲ್ಲಿ ಒಳಗೊಂಡಿವೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಅರ್ಹಾರ್, ಹೆಸರುಕಾಳು, ಕಡ್ಲೆ (ತಲಾ 2), ಬಟಾಣಿ, ಸೆಣಬು (ತಲಾ 1), ಎಣ್ಣೆ ಬೀಜ, ಮೇವು ಮತ್ತು ಬ್ಬು (ತಲಾ 7), ಹತ್ತಿ (5), ಮಸೂರ (ಲೆಂಟಿಲ್-3) ಬೀಜ ಕೂಡ ಅವುಗಳಲ್ಲಿ ಸೇರಿವೆ ಎಂದು ಚೌಹಾಣ್ ಹೇಳಿದ್ದಾರೆ.
ರಾಜ್ಯದ ಹಲವು ತಳಿಗಳು
ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ 109 ಹೊಸ ಬೀಜ ತಳಿಗಳಲ್ಲಿ 13ನ್ನು ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಸಂಶೋಧಿಸಿ ಅಭಿವೃದ್ಧಿ ಪಡಿಸಿದ್ದಾಗಿವೆ. ಪುಷ್ಟಿದಾಯಕ ಆಹಾರ ಲಭ್ಯತೆಯನ್ನು ಖಾತರಿಪಡಿಸಲು ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ದೊಡ್ಡ ಕಾಣಿಕೆ ನೀಡಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಡಿ (ಐಸಿಎಆರ್) ಕಾರ್ಯನಿರ್ವಹಿಸುವ ಕೆಲವೇ ಸಂಸ್ಥೆಗಳಲ್ಲಿ ಐಐಎಚ್ಆರ್ ಕೂಡ ಒಂದಾಗಿದೆ. ಐಐಎಚ್ಆರ್ನ ಹೊಸ ಬೀಜ ತಳಿಗಳಲ್ಲಿ ಆಲ್ಪಾನ್ಸೋ ಮಾವಿನ ಹಣ್ಣಿಗೆ ಪರ್ಯಾಯವಾದ ಅರ್ಕಾ ಉದಯ್ ಮತ್ತು ಅರ್ಕಾ ಕಿರಣ್ ಎಂಬ ಪೇರಳೆ ಹಣ್ಣು ಸೇರಿವೆ ಎಂದು ಐಐಎಚ್ಆರ್ ಹಿರಿಯ ವಿಜ್ಞಾನಿ ಎಂ.ವಿ. ಧನಂಜಯ ತಿಳಿಸಿದ್ದಾರೆ. ಅರ್ಕಾ ವೈಭವ್, ಅರ್ಕಾ ಶ್ರೇಯಾ ಮತ್ತು ಅರ್ಕಾ ಅಮರ್ ಎಂಬ ತಳಿಗಳು ಪುಷ್ಪ ಕೃಷಿ ಕ್ಷೇತ್ರವನ್ನು ಕ್ರಾಂತಿಕಾರಕಗೊಳಿಸಲಿವೆ. ಪುತ್ತೂರಿನ ಎರಡು ಗೇರುಬೀಜದ ತಳಿಗಳೂ ಸೇರಿವೆ.
ಸುಸ್ಥಿರ ಕೃಷಿ ಪದ್ಧತಿ
ರೈತರ ಆದಾಯ ಹೆಚ್ಚಾಗಲು ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ತಾಪಮಾನ ಬದಲಾವಣೆಯನ್ನು ಎದುರಿಸುವಂಥ ವಿಧಾನಗಳನ್ನು ಅನುಸರಿಸುವುದು ಅಗತ್ಯ ಎಂದು ಪ್ರಧಾನಿ ಮೋದಿ ಸಲಹೆ ಮಾಡಿದರು. ಬಯೋಫೋರ್ಟಿಫೈಡ್ ಬೆಲೆಗಳ ತಳಿಗಳನ್ನು ಹೆಚ್ಚಾಗಿ ಉತ್ತೇಜಿಸಬೇಕೆಂದು ಹೇಳಿದ ಪ್ರಧಾನಿ, ಭಾರತದಲ್ಲಿ ಅಪೌಷ್ಟಿಕತೆಯನ್ನು ಎದುರಿಸಲು ಅವುಗಳನ್ನು ಶಾಲಾ ಬಿಸಿಯೂಟ ಯೋಜನೆ ಮತ್ತು ಅಂಗನವಾಡಿ ಸೇವೆ ಮುಂತಾದ ಸರ್ಕಾರಿ ಉಪಕ್ರಮಗಳಿಗೆ ಸಂರ್ಪಸ ಬೇಕೆಂದರು. ಸಿರಿಧಾನ್ಯಗಳನ್ನು ಬೆಳೆಸುವುದರ ಮಹತ್ವ ಮತ್ತು ಹೆಚ್ಚು ಪೌಷ್ಟಿಕ ಆಹಾರಗಳಿಗೆ ಆದ್ಯತೆ ನೀಡುವುದು ಅಗತ್ಯ ಎಂದು ಪ್ರಧಾನಿ ಪ್ರತಪಾದಿಸಿದರು. ಸಾವಯವ ಕೃಷಿಯಲ್ಲಿ ನಂಬಿಕೆ ಬೆಳೆಸುವುದು ಕೂಡ ಅಗತ್ಯ ಎಂದರು.
ಇರೋದು 4 ಜನ, 4 ಬಲ್ಬ್, 4 ಫ್ಯಾನ್… 20 ಲಕ್ಷ ರೂ. ಕರೆಂಟ್ ಬಿಲ್ ಪಡೆದ ಕುಟುಂಬ ಕಂಗಾಲು