Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕೊಡಗಿಗೆ ಯುದ್ಧೋಪಾದಿಯಲ್ಲಿ ಇಂಧನ

Tuesday, 11.09.2018, 3:04 AM       No Comments

ಮಾನವ ಜಗತ್ತಿನ ಬಹುತೇಕ ಎಲ್ಲ ಚಟುವಟಿಕೆಗಳೂ ಇಂಧನ ಆಧರಿಸಿರುವ ಈ ಸಮಯದಲ್ಲಿ ದೇಶದ ಬೊಕ್ಕಸಕ್ಕೂ ಆದಾಯ ತಂದುಕೊಡುವ ಪ್ರಮುಖ ಮೂಲವಾಗಿ ತೈಲೋದ್ಯಮ ರೂಪುಗೊಂಡಿದೆ. ಕ್ಷೇತ್ರದ ಗಾತ್ರ ಹೆಚ್ಚಾಗುತ್ತಿದ್ದಂತೆಯೇ ಇಂಡಿಯನ್ ಆಯಿಲ್ ಕಾರ್ಪೆರೇಷನ್ (ಐಒಸಿಎಲ್) ಅಂತಹ ಸಂಸ್ಥೆಗಳು ಸಾಮಾಜಿಕ ಕಾಳಜಿ ತೋರುವಲ್ಲೂ ದಾಪುಗಾಲಿಟ್ಟಿವೆ. ಇತ್ತೀಚೆಗಿನ ಕೊಡಗು ಹಾಗೂ ಕೇರಳ ನೆರೆ ಸಮಯದಲ್ಲಿ ಅತ್ಯವಶ್ಯಕ ಇಂಧನ, ಎಲ್​ಪಿಜಿ ಸರಬರಾಜು ಮಾಡುವಲ್ಲಿ ತೊಡಗಿಸಿಕೊಂಡಿದ್ದ ಐಒಸಿಎಲ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ವರದಾಚಾರಿ ಅವರು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 247 ಜತೆ ಮಾತನಾಡಿದ್ದಾರೆ. ಪರಿಹಾರ ಕಾರ್ಯದ ಜತೆಗೆ ಒಟ್ಟಾರೆ ಕ್ಷೇತ್ರದ ಬೆಳವಣಿಗೆ, ಭವಿಷ್ಯದತ್ತಲೂ ದೃಷ್ಟಿ ಹರಿಸಿದ್ದಾರೆ.

|ರಮೇಶ ದೊಡ್ಡಪುರ

ತೈಲ ಉದ್ಯಮದಲ್ಲಿ ಸಾಕಷ್ಟು ಆದಾಯವಿದೆ. ಇಲ್ಲಿಯವರೆಗಿನ ನಿಮ್ಮ ಪಯಣ ಹೇಗಿತ್ತು. ಬದಲಾವಣೆಗಳು ಹೇಗಾದವು?

ಎಲ್ಲ ರಾಜ್ಯಗಳಲ್ಲೂ ತೈಲದಿಂದಲೇ ಹೆಚ್ಚು ಆದಾಯ ಲಭಿಸುತ್ತದೆ. ಕರ್ನಾಟಕದಲ್ಲೇ ವ್ಯಾಟ್ ಮೂಲಕ ಪ್ರತಿ ತಿಂಗಳು 500-600 ಕೋಟಿ ರೂ. ಆದಾಯ ಇಂಡಿಯನ್ ಆಯಿಲ್​ನಿಂದಲೇ ಸರ್ಕಾರಕ್ಕೆ ಲಭಿಸುತ್ತದೆ. ಉಳಿದೆಲ್ಲ ತೈಲ ಕಂಪನಿಯೂ ಸೇರಿಸಿ ಒಟ್ಟಾರೆ ಈ ಕ್ಷೇತ್ರದಿಂದ ತಿಂಗಳಿಗೆ 1,000 ಕೋಟಿ ರೂ. ಮೀರುತ್ತದೆ. ಪಶ್ಚಿಮ ಘಟ್ಟ, ನದಿಗಳು ಹಾಗೂ ಅನೇಕ ಪ್ರವಾಸೋದ್ಯಮ ತಾಣಗಳಿಂದಾಗಿ ಕರ್ನಾಟಕ ಈ ಹಿಂದೆ ಸಾಕಷ್ಟು ಹಸಿರಿನಿಂದ ಕೂಡಿತ್ತು. ಮೊದಲು ವಿದ್ಯುತ್ ಹೆಚ್ಚಳವಾಗಿದ್ದ ರಾಜ್ಯದಲ್ಲಿ ಕೈಗಾರಿಕೆ ಬೆಳೆಯುತ್ತಿರುವಂತೆಯೇ ಇಂಧನ ಹಾಗೂ ಮೂಲಸೌಕರ್ಯ ಒತ್ತಡ ಹೆಚ್ಚಾಗಿದೆ. ಐಟಿ ಪ್ರಗತಿ ನಂತರವಂತೂ ಪ್ರತಿ ವ್ಯಕ್ತಿಯ ಖರ್ಚಿನ ಮೊತ್ತವೂ ಹೆಚ್ಚಾಗಿದೆ. ಇದೇ ರೀತಿ ಇಂಡಿಯನ್ ಆಯಿಲ್ ಪಯಣವೂ ಸಾಗಿದೆ. ಸಾವಿರಾರು ಕೋಟಿ ರೂ. ವಹಿವಾಟಿನಿಂದ ಲಕ್ಷ ಕೋಟಿ ರೂ.ವರೆಗೆ ವಿಸ್ತರಿಸಿದ್ದೇವೆ. ಇದೀಗ ಪರಿಸರ ಸಂರಕ್ಷಣೆ ದೃಷ್ಟಿಯಿಂದ ನವೀಕರಿಸಬಹುದಾದ ಇಂಧನದತ್ತ ಸಾಗುತ್ತಿದ್ದು, ತಿರುವೊಂದನ್ನು ಪಡೆಯುತ್ತಿದ್ದೇವೆ.

ತೈಲೋದ್ಯಮ, ದೇಶದ ಆರ್ಥಿಕತೆಗೆ ಇಂಡಿಯನ್ ಆಯಿಲ್ ಪಾತ್ರ ಎಷ್ಟಿದೆ?

ಇಂಧನ ಇಲಾಖೆಯಲ್ಲಿ ಅನೇಕ ತೈಲ ಕಂಪನಿಗಳಿದ್ದು, ಅದರಲ್ಲಿ ಐಒಸಿಎಲ್ ಪ್ರಮುಖ ಸಂಸ್ಥೆ. ಕರ್ನಾಟಕದಲ್ಲಿ ಎಲ್ಲ ಉತ್ಪನ್ನ ಸೇರಿಸಿ ಪ್ರತಿ ವರ್ಷ 6-8 ದಶಲಕ್ಷ ಟನ್ ಬಳಕೆ ಆಗುತ್ತಿದೆ. ಡೀಸೆಲ್ ಹೆಚ್ಚು ಬಳಕೆಯಾಗುತ್ತದೆ. ನಂತರದಲ್ಲಿ ಎಲ್​ಪಿಜಿ ಇದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಅನೇಕ ಬಡವರು, ಹಳ್ಳಿಗರಿಗೆ ಎಲ್​ಪಿಜಿ ನೀಡುವ ಯೋಜನೆ ಸಾಕಷ್ಟು ಜನರಿಗೆ ತಲುಪಿದೆ. ಕರ್ನಾಟಕದಲ್ಲೂ ಶೇ.80-90 ಜನರಿಗೆ ಪ್ರಯೋಜನವಾಗಿದೆ. ನಂತರದ ಸ್ಥಾನದಲ್ಲಿರುವುದು ಪೆಟ್ರೋಲ್ ಬಳಕೆ. ಚಿಕ್ಕಬಳ್ಳಾಪುರದ ವ್ಯಾಚಕರಹಳ್ಳಿ ಎಂಬ ಹಳ್ಳಿಯನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಲ್ಲಿ ಎಲ್ಲ ಮನೆಗಳಿಗೂ ಎಲ್​ಪಿಜಿ ಸಂಪರ್ಕ ನೀಡಿ ಹೊಗೆ ರಹಿತ ಗ್ರಾಮವಾಗಿಸಿದೆವು. ಇದರಿಂದ ಆರೋಗ್ಯಕರ ವಾತಾವರಣ ನಿರ್ವಿುಸಿತು. ಇದೇ ಕಾರ್ಯವನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡು, ಮಹಿಳಾ ಸಬಲೀಕರಣದ ಭಾಗವಾಗಿ ಉಜ್ವಲಾ ಯೋಜನೆ ಘೋಷಣೆ ಮಾಡಿದೆ.

ತೈಲದ ಬೇಡಿಕೆ ಹೆಚ್ಚಾದಂತೆ ಸರಬರಾಜು ಹೆಚ್ಚಾಗಿದ್ದು ಹೇಗೆ?

ತೈಲೋದ್ಯಮದಲ್ಲಿ ಸಾಗಣಿಕೆಯೇ ಅತಿ ದೊಡ್ಡ ಸವಾಲು. 2,500-3,000 ಪೆಟ್ರೋಲ್ ಪಂಪ್, ಸಾವಿರಾರು ಗ್ಯಾಸ್ ಏಜೆನ್ಸಿ ಕರ್ನಾಟಕದಲ್ಲಿವೆ. ಆದರೆ ಉತ್ಪಾದನೆ ಕೇಂದ್ರ ಎಲ್ಲ ಕಡೆ ಇಲ್ಲ. ಇದೆಲ್ಲ ಸವಾಲನ್ನು ಮೆಟ್ಟಿ ನಿಂತು ಅತಿ ಕಡಿಮೆ ದರದಲ್ಲಿ ಸಾಗಣೆ ಮಾಡುವುದೇ ನಮ್ಮ ಗುರಿ. ಜಾಗತೀಕರಣ ನಂತರ ವಿವಿಧ ತೈಲ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಇದರಿಂದ ಗ್ರಾಹಕರಿಗೆ ಉತ್ತಮ ಸೇವೆ ಲಭಿಸುತ್ತಿದೆ. ಗ್ರಾಹಕರು ಜಾಗೃತಿಯಾಗಿರುವ ಕಾರಣ ಕಲಬೆರಕೆ, ಕಡಿಮೆ ಪ್ರಮಾಣದ ಇಂಧನ ನೀಡುವ ಪ್ರಶ್ನೆಯೇ ಇಲ್ಲ ಎನ್ನಬಹುದು.

ಐಒಸಿಎಲ್ ಜತೆಗೆ ನಿಮ್ಮ ಪಯಣ ಹೇಗಿತ್ತು?

ಕೆಳಗಿನ ಹಂತದಲ್ಲಿ ಸಂಸ್ಥೆಗೆ ಪ್ರವೇಶ ಮಾಡಿದ್ದೆ. ಕಂಪನಿ ನೀತಿಗಳ ಕಾರಣದಿಂದಾಗಿ ಈ ಮಟ್ಟದಲ್ಲಿದ್ದೇನೆ. ಉದ್ಯೋಗಾವಕಾಶಗಳು ಹೆಚ್ಚಾಗಿರುವ ಈ ಕಾಲದಲ್ಲಿ, ನೇರವಾಗಿ ಉನ್ನತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಉದ್ಯೋಗಾವಕಾಶಗಳು ಹೆಚ್ಚಿಸುವ ಕಾರಣ ಅದಕ್ಕೆ ತಕ್ಕಂತೆ ನಾವೂ ಬದಲಾಗಬೇಕಾಗುತ್ತದೆ.

ನೆರೆ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಯಾವ ರೀತಿ ಸೇವೆ ಸಲ್ಲಿಸಿದೆ?

ಕೊಡಗಿನಲ್ಲಿ ತಕ್ಷಣಕ್ಕೆ ಸ್ಪಂದಿಸುವ ಅವಶ್ಯಕತೆ ನಮಗಿತ್ತು. ಆಹಾರ ಮತ್ತು ನೀರು ನೀಡುವುದು ಮೊದಲ ಕಾರ್ಯ. ಜಿಲ್ಲಾಧಿಕಾರಿಗಳ ನಿಕಟ ಸಂವಹನದಲ್ಲಿ ಅನೇಕ ಶಿಬಿರಗಳಿಗೆ ಉಚಿತವಾಗಿ ಎಲ್​ಪಿಜಿ ನೀಡಿದ್ದೇವೆ. ನಮ್ಮ ವಿತರಕರು, ಪೆಟ್ರೋಲ್ ಪಂಪ್ ಮಾಲೀಕರೂ ಉಚಿತವಾಗಿ, ಸಾಲದಲ್ಲಿ ಪೆಟ್ರೋಲ್, ಡೀಸೆಲ್ ನೀಡಿದ್ದಾರೆ. ಸುಮಾರು 25 ಅಧಿಕಾರಿಗಳು ಅಲ್ಲೆ ನೆಲೆಸಿ ಸಹಕರಿಸಿದರು. ವಿಶಾಲ್ ಇಂಡೇನ್ ಸಹಯೋಗದಲ್ಲಿ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಸಂತ್ರಸ್ತರಿಗೆ ಶಿಬಿರ ಸ್ಥಾಪಿಸಿದ್ದೆವು. ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಬೆಚ್ಚಗಿರಿಸುವ ಸಲುವಾಗಿ ನೀರು ಕಾಯಿಸಲು ಇಂಡೇನ್ ವಿತರಕರು ಬೇಡಿಕೆಗೆ ತಕ್ಕಂತೆ ಸಿಲಿಂಡರ್ ನೀಡಿದ್ದಾರೆ. ಸೇನೆಯ ಬೇಸ್ ಕ್ಯಾಂಕ್​ಗಳಿಗೆ ಸಿಲಿಂಡರ್ ಸರಬರಾಜು ಮಾಡಲಾಗಿದೆ. ತುರ್ತು ಪರಿಸ್ಥಿತಿ ನಂತರ ಕೊಡಗನ್ನು ಮರುಸ್ಥಾಪಿಸಲೂ ನಮ್ಮ ಕೊಡುಗೆ ನೀಡುತ್ತೇವೆ.

ಕರ್ನಾಟಕಕ್ಕೆ ಇಂಡಿಯನ್ ಆಯಿಲ್ ಯಾವ ದೂರದೃಷ್ಟಿ ಇರಿಸಿಕೊಂಡಿದೆ?

ಎಲ್ಲ ಮನೆಗಳಿಗೂ ಎಲ್​ಪಿಜಿ ಸಂಪರ್ಕ ಮೊದಲ ಗುರಿ. ಆರೋಗ್ಯ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಭವಿಷ್ಯದಲ್ಲಿ ನಗರ ಪ್ರದೇಶದಲ್ಲಿ ಕೊಳವೆ ಮೂಲಕ ಎಲ್​ಪಿಜಿ ಸರಬರಾಜು ಆಗುತ್ತಿದೆ. ರಸ್ತೆಗೆ ಬಿಟುಮಿನ್ ಅಳವಡಿಸಲು ಸಹಕಾರ ನೀಡಿ ಮೂಲಸೌಕರ್ಯಕ್ಕೂ ಕೊಡುಗೆ ನೀಡುತ್ತಿದ್ದೇವೆ. ಎಲ್ಲ ಪೆಟ್ರೋಲ್ ಪಂಪ್​ನಲ್ಲೂ ಸೌರಫಲಕ ಅಳವಡಿಸುವ ಯೋಜನೆ ಇದೆ. ಮುಂದಿನ ಒಂದು ವರ್ಷದಲ್ಲಿ ಇದು ಜಾರಿಯಾಗಲಿದೆ. ಪೆಟ್ರೋಲ್ ಪಂಪ್​ಗಳು ವಿದ್ಯುತ್ ಸ್ವಾವಲಂಬಿಯಾಗುವ ಜತೆಗೆ ಅವಶ್ಯಕತೆಯಿರುವ ಹಳ್ಳಿ, ರೈತರಿಗೆ ವಿದ್ಯುತ್ ಲಭಿಸುತ್ತದೆ. 2 ವರ್ಷದಲ್ಲಿ ನಮ್ಮ ಎಲ್ಲ ಪಂಪ್​ಗಳಲ್ಲೂ ಸೌರ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವತ್ತಲೂ ಗಮನ ನೀಡುತ್ತಿದ್ದೇವೆ.

ಮುಂದಿನ ವರ್ಷಗಳಲ್ಲಿ ಯಾವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ?

ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಸಾಕಷ್ಟು ಕೆಲಸ ನಡೆಯುತ್ತಿದೆ. ಪ್ರತಿ ಲೀಟರ್ ಕಚ್ಚಾತೈಲದಿಂದ ಹೆಚ್ಚೆಚ್ಚು ಇಂಧನ ಪಡೆಯಲು ನಿರಂತರ ಸಂಶೋಧನೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಒಂದು ತೈಲ ಸಂಸ್ಕರಣ ಘಟಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲು ಮುಂದಾಗಿದ್ದೇವೆ. ಕರ್ನಾಟಕದಲ್ಲಿ ಇಂಧನ ಸರಬರಾಜಿಗೆ ಪೈಪ್​ಲೈನ್​ನತ್ತ ಹೆಚ್ಚು ಗಮನ ನೀಡುತ್ತಿದ್ದೇವೆ. ಟ್ಯಾಂಕರ್​ನಲ್ಲಿ ಸಾಗಿಸಿದರೆ ಅದಕ್ಕೂ ಡೀಸೆಲ್ ಬೇಕಾಗುತ್ತದೆ. ಹೀಗಾಗಿ ಪೈಪ್​ಲೈನ್​ಗೆ ಹೆಚ್ಚು ಆಸಕ್ತಿ ಹೊಂದಿದ್ದೇವೆ.

ತೈಲೋದ್ಯಮದಲ್ಲಿ ಭವಿಷ್ಯದಲ್ಲಿ ಯಾವ ರೀತಿ ಬೆಳವಣಿಗೆಗಳು ಆಗಬಹುದು?

ನಾವು ಭಾರತದ ಶಕ್ತಿ ಎಂದು ಇಂಡಿಯನ್ ಆಯಿಲ್ ವಿಷನ್ ಸ್ಟೇಟ್​ವೆುಂಟ್​ನಲ್ಲಿ ತಿಳಿಸಿದ್ದೇವೆ. ಕಾಲಕ್ಕೆ, ಅವಶ್ಯಕತೆಗೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ರೂಪವನ್ನು ಬದಲಾಯಿಸಿಕೊಂಡು ಸೇವೆ ಸಲ್ಲಿಸತ್ತಲೇ ಇರುತ್ತೇವೆ.

ಪರಿಹಾರ ವಸ್ತುಗಳನ್ನು ಕೊಂಡೊಯ್ದ ವಾಹನಗಳಿಗೂ ಇಂಧನ ಬೇಕಾಗುತ್ತದೆ. ಅದಕ್ಕೆ ಹೇಗೆ ಸ್ಪಂದಿಸಿದಿರಿ?

ರಸ್ತೆ, ಭೂಮಿಯೇ ಕುಸಿದಿರುವ ಕಾರಣ ವಾಹನ ಸಂಚಾರವೂ ದುಸ್ತರವಾಗಿತ್ತು. ಕಚೇರಿಯಲ್ಲೂ ಸಂವಹನಕ್ಕೆ ಮೂರು ಸಮಿತಿ ರಚಿಸಿಕೊಂಡು ಸಂತ್ರಸ್ತರನ್ನು ತಲುಪುವ ಕಾರ್ಯ ಮಾಡಿದೆವು. ಒಟ್ಟಾರೆ ಈ ತುರ್ತು ಪರಿಸ್ಥಿತಿ ಕಾರ್ಯದಲ್ಲಿ 75 ಸಾವಿರ ಲೀಟರ್ ಪೆಟ್ರೋಲ್, 1 ಲಕ್ಷ ಲೀಟರ್ ಡೀಸೆಲ್, 1 ಲಕ್ಷ ಲೀಟರ್ ಸೀಮೆಎಣ್ಣೆ, 75 ಸಾವಿರ ಎಲ್​ಪಿಜಿ ಸಿಲಿಂಡರ್​ಗಳನ್ನು ಸರಬರಾಜು ಮಾಡಿದ್ದೇವೆ. ಕೇರಳ ನೆರೆ ಪರಿಸ್ಥಿತಿ ನಿರ್ವಹಿಸಲು ನಮ್ಮ ಮೈಸೂರು ಬಾಟ್ಲಿಂಗ್ ಘಟಕ ಸಾಕಷ್ಟು ಶ್ರಮಿಸಿದ್ದು, ಕಣ್ಣೂರಿಗೆ 56 ಹಾಗೂ ವೈನಾಡಿಗೆ 26 ಟ್ರಕ್ ಲೋಡ್ ಎಲ್​ಪಿಜಿ ಸರಬರಾಜು ಮಾಡಿದೆ. ಕಾಫಿ ಪ್ಲಾಂಟೇಷನ್, ಮನೆ, ಶಾಲೆ ಎಲ್ಲವೂ ಹಾಳಾಗಿರುವುದನ್ನು ಕಂಡರೆ ಬೇಸರವಾಗುತ್ತದೆ. ಇನ್ನಷ್ಟು ಸೇವೆ ಮಾಡುವ ಅವಶ್ಯಕತೆ ಇದೆ.

ಸಿಎಸ್​ಆರ್​ನಡಿ ಇಂಡಿಯನ್ ಆಯಿಲ್ ಯಾವ ರೀತಿ ಕೆಲಸ ಮಾಡುತ್ತಿದೆ?

ಸಿಎಸ್​ಆರ್​ಗೆ ನಿರ್ದಿಷ್ಟ ನೀತಿ ರೂಪಿತವಾಗುವ ಮುನ್ನವೇ ಇಂಡಿಯನ್ ಆಯಿಲ್ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿತ್ತು. ಹೆಣ್ಣು ಮಕ್ಕಳ ಶಾಲೆ, ಕುಡಿಯುವ ನೀರು, ಆಸ್ಪತ್ರೆಗಳಿಗೆ ಆಂಬುಲೆನ್ಸ್ ನೀಡುವುದು ಸೇರಿ ಎಲ್ಲ ತೈಲ ಕಂಪನಿಗಳೂ ಕೆಲಸ ಮಾಡುತ್ತಿವೆ. ಈ ವರ್ಷ ಪ್ರವಾಸೋದ್ಯಮದತ್ತ ಹೆಚ್ಚು ಗಮನ ನೀಡುತ್ತಿದ್ದೇವೆ. ಜತೆಗೆ ವನ್ಯಜೀವಿಯತ್ತಲೂ ಗಮನ ಹರಿಸಿದ್ದೇವೆ. ಕೊಕ್ಕರೆ ಬೆಳ್ಳೂರನ್ನು ದತ್ತು ಪಡೆದಿದ್ದೇವೆ. ಮುಂದೆ ರಂಗನತಿಟ್ಟನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇವೆ. ಹೆಚ್ಚೆಚ್ಚು ಜನ ಆಗಮಿಸಿದಂತೆ ಸ್ಥಳೀಯ ಅರ್ಥಿಕತೆಗೂ ಸಹಕಾರವಾಗುತ್ತವೆ. ಅನೇಕರಿಗೆ ಉದ್ಯೋಗ ಸಿಗುತ್ತದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕುಡಿಯುವ ನೀರು ನೀಡುವ ಕೆಲಸ ಮಾಡುತ್ತಿದ್ದೇವೆ. ಸಾಮಾಜಿಕ ಕಾರ್ಯದಲ್ಲಿ ಇಂಡಿಯನ್ ಆಯಿಲ್​ಗೆ ಹೆಮ್ಮೆ ಇದೆ.

ಇಂಧನ ದರ ಪ್ರತಿದಿನ ಹೆಚ್ಚಳವಾಗಲು ಪ್ರಮುಖ ಕಾರಣವೇನು?

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರವನ್ನು ಭಾರತ ನಿರ್ಧರಿಸಲು ಸಾಧ್ಯವಿಲ್ಲ. ಇರಾನ್ ಸಮಸ್ಯೆ ಸೇರಿ ಅನೇಕ ಕಾರಣಕ್ಕೆ ಏರಿಳಿತ ಆಗುತ್ತದೆ. ಡಾಲರ್ ಎದುರು ರೂಪಾಯಿ ಕುಸಿತದಿಂದ ಹೆಚ್ಚಿನ ದರವಾಗುತ್ತಿದೆ. ಕಚ್ಚಾ ತೈಲ ಪ್ರತಿ ಬ್ಯಾರೆಲ್​ಗೆ 40-45 ಡಾಲರ್​ನಿಂದ 70-75 ಡಾಲರ್ ಆಗಿದೆ. ನಿಗದಿಪಡಿಸಿರುವ ದರದಲ್ಲಿ ಜನರಿಗೆ ಇಂಧನ ನೀಡುತ್ತಿದ್ದೇವೆ. ದರ ಹೆಚ್ಚಳ ಶಾಶ್ವತವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಕಡಿಮೆಯೂ ಆಗಬಹುದು. ಸದ್ಯದ ಪರಿಸ್ಥಿತಿ ಗಮನದಲ್ಲಿರಿಸಿಕೊಂಡು ಸರ್ಕಾರ ಯಾವ ಕ್ರಮವನ್ನಾದರೂ ತೆಗೆದುಕೊಳ್ಳಬಹುದು. ಭವಿಷ್ಯದಲ್ಲಿ ಹೇಗೆ ಆಗುತ್ತದೆಂದು ಹೇಳಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *

Back To Top