ಬೆಂಗಳೂರು: ಸಭಾ ನಾಯಕರಾದವರು ಸ್ವಪ್ರೇರಣೆಯಿಂದ ವಿಶ್ವಾಸಮತ ಯಾಚನೆ ಪ್ರಸ್ತಾವನೆಯನ್ನು ಮಂಡಿಸಿ, ಚರ್ಚೆ ನಡೆಸುತ್ತಿರುವುದರಿಂದ ಈ ಹಂತದಲ್ಲಿ ಸದನದ ಕಾರ್ಯ ಕಲಾಪದಲ್ಲಿ ಹಸ್ತಕ್ಷೇಪ ನಡೆಸಲು ರಾಜ್ಯಪಾಲರಿಗೆ ಅವಕಾಶ ಇಲ್ಲ. ಈ ಕುರಿತು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠದ ಆದೇಶ ಇರುವುದಾಗಿ ಕಾನೂನು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಶ್ವಾಸಮತ ಯಾಚನೆ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ರಾಜ್ಯಪಾಲ ವಿ.ಆರ್. ವಾಲಾ ಅವರು ಶುಕ್ರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸುವಂತೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೀಡಿರುವ ಸೂಚನೆಯನ್ನು ಪ್ರಸ್ತಾಪಿಸಿದರು.
1935ರಲ್ಲಿ ಭಾರತ ಸರ್ಕಾರದ ಕಾಯ್ದೆ 63ರಲ್ಲಿ ಸದನಕ್ಕೆ ಸ್ವಇಚ್ಛೆ ಮೇರೆಗೆ ನಿರ್ದೇಶನಗಳನ್ನು ನೀಡಲು ಅವಕಾಶ ನೀಡಲಾಗಿತ್ತು. ಆದರೆ, ಭಾರತದ ಸಂವಿಧಾನದಲ್ಲಿ ಈ ಅಂಶವನ್ನು ಅಳವಡಿಸಿಕೊಳ್ಳುವಾಗ ಅದು ಪರಿಚ್ಛೇದ 175 ಆಗಿದ್ದು, ಇದರಲ್ಲಿ ಸ್ವ ಇಚ್ಛೆ ಮೇರೆಗೆ ರಾಜ್ಯಪಾಲರಿಗೆ ಸದನಕ್ಕೆ ನೀಡಲಿದ್ದ ಅವಕಾಶವನ್ನು ತೆಗೆದು ಹಾಕಲಾಗಿದೆ. ಅರುಣಾಚಲ ಪ್ರದೇಶದ ಪ್ರಕರಣದಲ್ಲಿ 2015ರ ಡಿಸೆಂಬರ್ 9ರಂದು ನೀಡಿದ್ದ ಆದೇಶದಲ್ಲಿ ಸಾಂವಿಧಾನಿಕ ಪೀಠ ಹೇಳಿರುವುದಾಗಿ ತಿಳಿಸಿದರು.
ಇದರರ್ಥದಲ್ಲಿ ರಾಜ್ಯಪಾಲರು ಸಚಿವ ಸಂಪುಟದ ಸಲಹೆ ಮೇರೆಗೆ ಸಂದೇಶ ಕಳುಹಿಸಲು ರಾಜ್ಯಪಾಲರಿಗೆ ಅವಕಾಶವಿದೆ. ಅದನ್ನು ಬಿಟ್ಟರೆ ಬೇರೆ ಸಂದೇಶ ಕಳುಹಿಸಲು ಅವಕಾಶವಿಲ್ಲ. ಸದನದ ಕಾರ್ಯಸೂಚಿ ಕುರಿತು ನಿರ್ಧರಿಸಲು ಅವರಿಗೆ ಅವಕಾಶವಿಲ್ಲ ಎಂದರು.
ಇದಕ್ಕೆ ಬಿಜೆಪಿಯ ಮಾಧುಸ್ವಾಮಿ ಮತ್ತು ಬಸವರಾಜ್ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರಿಗೆ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅಲ್ಪಮತಕ್ಕೆ ಕುಸಿದಿದೆ ಎಂಬ ಅನುಮಾನ ಮೂಡಿದಾಗ ಹೀಗೆ ಸೂಚನೆ ನೀಡಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ಅರುಣಾಚಲ ಪ್ರದೇಶ ಸರ್ಕಾರ ಅಂದು ಬಹುಮತ ಹೊಂದಿತ್ತು. ಆ ಸಂದರ್ಭದಲ್ಲಿ ಸಾಂವಿಧಾನಿಕ ಪೀಠ ಇಂಥ ಒಂದು ಆದೇಶ ನೀಡಿದೆ. ಆದರೆ, ಪ್ರಸಕ್ತ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಅನುಮಾನ ಮೂಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂಥ ಆದೇಶ ನೀಡಿದ್ದಾರೆ ಎಂದು ವಾದಿಸಿದರು. ಅಲ್ಲದೆ, ಕರ್ನಾಟಕ ರಾಜ್ಯದಲ್ಲೇ ಇಂಥ ಹಲವು ನಿದರ್ಶನಗಳಿರುವುದಾಗಿ ತಿಳಿಸಿದರು.