ವಂಚಕ ವಜ್ರೋದ್ಯಮಿ ನೀರವ್​ ಮೋದಿ ಸಹೋದರ ನೆಹಲ್​ ಮೋದಿ ವಿರುದ್ಧ ಇಂಟರ್​ಪೋಲ್​ ರೆಡ್​ಕಾರ್ನರ್​ ನೋಟಿಸ್​

ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಸೇರಿ ವಿವಿಧ ಬ್ಯಾಂಕ್​ಗಳಿಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚು ವಂಚಿಸಿ ಬ್ರಿಟನ್​ಗೆ ಪರಾರಿಯಾಗಿರುವ ವಜ್ರೋದ್ಯಮಿ ನೀರವ್​ ಮೋದಿ ಅವರ ಸಹೋದರ ನೆಹಲ್​ ಮೋದಿ ವಿರುದ್ಧ ಇಂಟರ್​ಪೋಲ್​ ರೆಡ್​ಕಾರ್ನರ್​ ನೋಟಿಸ್​ ಹೊರಡಿಸಿದೆ.

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ನಕಲಿ ಜಾಮೀನು ಪತ್ರಗಳನ್ನು ನೀಡಿ ಪಡೆದ ಹಣವನ್ನು ನಕಲಿ ಕಂಪನಿಗಳ ಮೂಲಕ ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ತೊಡಗಿಸಲು ನೀರವ್​ ಮೋದಿಗೆ ಸಹಕರಿಸಿದ ಆರೋಪದಲ್ಲಿ ನೆಹಲ್​ ಮೋದಿ ವಿರುದ್ಧ ರೆಡ್​ಕಾರ್ನರ್​ ನೋಟಿಸ್​ ನೀಡಲಾಗಿದೆ ಎನ್ನಲಾಗಿದೆ.

ಬೆಲ್ಜಿಯಂ ನಿವಾಸಿಯಾದ ನೆಹಲ್​ ನ್ಯೂಯಾರ್ಕ್​ನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಇದೀಗ ವಹಿವಾಟು ಸ್ಥಗಿತಗೊಳಿಸಿರುವ ಫೈರ್​ಸ್ಟಾರ್​ ಡೈಮಂಡ್ಸ್​ ಯುಎಸ್​ಎ ಸಂಸ್ಥೆಯಲ್ಲಿ ನೆಹಲ್​ ನಿರ್ದೇಶಕರಾಗಿದ್ದರು. ನೀರವ್​ ಮೋದಿ ವಂಚನೆ ಪ್ರಕರಣದ ತನಿಖೆಯಲ್ಲಿ ನೆಹಲ್​ ಭಾಗಿಯಾಗಿರುವ ಬಗ್ಗೆ ಖಚಿತ ಸುಳಿವು ದೊರೆತಿರುವ ಹಿನ್ನೆಲೆಯಲ್ಲಿ ಇಂಟರ್​ಪೋಲ್​ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಪಿಎನ್​ಬಿ ವಂಚಿಸಿದ ಬಳಿಕ ಬ್ರಿಟನ್​ಗೆ ವಲಸೆ ಹೋಗಿದ್ದ ನೀರವ್​ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಬ್ರಿಟನ್​ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸದ್ಯ ನೀರವ್​ ಮೋದಿ ಜೈಲಿನಲ್ಲಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *