ಹಾಸನದಲ್ಲಿ ಯೋಗ ನಡಿಗೆ ಜಾಗೃತಿ ಜಾಥಾವಿಜಯವಾಣಿ ಸುದ್ದಿಜಾಲ ಹಾಸನ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೋಮವಾರ ಹಮ್ಮಿಕೊಂಡಿದ್ದ ‘ಯೋಗ ನಡಿಗೆ’ ಜಾಗೃತಿ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪತಂಜಲಿ ಯೋಗ ಪರಿವಾರದಿಂದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಜಾಥಾ, ಹಾಸನಾಂಬ ಕಲಾಕ್ಷೇತ್ರ ತಲುಪಿ ಅಂತ್ಯವಾಯಿತು. ಬಿಎಂ ರಸ್ತೆ, ಎನ್‌ಆರ್ ವೃತ್ತ, ಹೇಮಾವತಿ ಪ್ರತಿಮೆ, ಆರ್‌ಸಿ ರಸ್ತೆ ಮೂಲಕ ಸಾಗಿದ ವಿದ್ಯಾರ್ಥಿಗಳು ಯೋಗ ಕುರಿತ ಘೋಷಣೆಗಳನ್ನು ಕೂಗಿದರು. ನೆರೆದಿದ್ದ ಜನರು ಮಕ್ಕಳ ಘೋಷಣೆಗಳಿಗೆ ಕಿವಿಯಾದರು. ಹಾಸನಾಂಬ ಕಲಾಕ್ಷೇತ್ರ ಆವರಣದಲ್ಲಿ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಪತಂಜಲಿ ಯೋಗ ಸಮಿತಿ ಜಿಲ್ಲಾ ಸಂರಕ್ಷಕ ಹರಿಹರಪುರ ಶ್ರೀಧರ್ ಮಾತನಾಡಿ, 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವವೇ ಸಜ್ಜಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಭಾರತೀಯ ಯೋಗ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.
ಜೂನ್ 21ರ ಬೆಳಗ್ಗೆ 7 ರಿಂದ 8ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ದಿನ ಆಚರಿಸಲಾಗುತ್ತಿದ್ದು, ಸಾರ್ವಜನಿಕರು ಭಾಗವಹಿಸಬೇಕು. ದೈಹಿಕ ಹಾಗೂ ಮಾನಸಿಕ ನೆಮ್ಮದಿಗೆ ಯೋಗ ಅತ್ಯವಶ್ಯಕ. ಮನಸ್ಸಿನ ಏಕಾಗ್ರತೆಗೆ ಧ್ಯಾನ ಹಾಗೂ ಯೋಗ ಪರಿಣಾಮಕಾರಿ ಅಸ್ತ್ರಗಳಾಗಿವೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್, ಸ್ವತಂತ್ರ ಹೊರಾಟಗಾರ ಎಚ್.ಎಂ. ಶಿವಣ್ಣ, ಪತಂಜಲಿ ಪರಿವಾರದ ಶೇಷಪ್ಪ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *