ಚಿಕ್ಕೋಡಿ: ರಾಜ್ಯಸಭೆ ಮಾಜಿ ಸದಸ್ಯ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 77ನೇ ಜನ್ಮದಿನ ನಿಮಿತ್ತ ಅಂತಾರಾಷ್ಟ್ರೀಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಜು. 31ರಂದು ಮಧ್ಯಾಹ್ನ 2 ಗಂಟೆಗೆ ಅಂಕಲಿಯ ಶ್ರೀಮತಿ ಶಾರದಾದೇವಿ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.
ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಕುಸ್ತಿ ಉತ್ತೇಜಿಸಲು ಹಾಗೂ ಗ್ರಾಮೀಣ ಭಾಗದ ಯುವಕರು ಆರೋಗ್ಯ ಬೆಳೆಸಿಕೊಳ್ಳಲು ಪ್ರೇರಣೆ ನೀಡಲು ಡಾ. ಕೋರೆ ಅವರ ಜನ್ಮದಿನ ನಿಮಿತ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಪಂದ್ಯಾವಳಿ ಉದ್ಘಾಟಿಸುವರು. ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ನವದೆಹಲಿ ಹಾಗೂ ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸ.ಸ.ಕಾ.ನಿ. ನಿರ್ದೇಶಕ ಅಮಿತ ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ದುರ್ಯೋಧನ ಐಹೊಳೆ, ರಾಜ್ಯ ಸೌಹಾರ್ದ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಆಗಮಿಸಲಿದ್ದಾರೆ ಎಂದು ತಿಳಿಸಿದರು.