ವಿನಾಶವಾಗದಿರಲಿ ವಿಸ್ಮಯ ಲೋಕ

ಸೃಷ್ಟಿಯ ಚಲನೆಗೆ, ಮನುಷ್ಯನ ಜೀವನಕ್ಕೆ ಅತ್ಯುಪಯುಕ್ತವಾಗಿರುವ ಜೀವ ವೈವಿಧ್ಯ ಲೋಕದಲ್ಲಿ ಎಣಿಸಲಾರದಷ್ಟು ವಿಸ್ಮಯ ಅಡಗಿದೆ. ಆದರೆ ಮನುಷ್ಯನ ದುರಾಸೆಯ ಫಲವಾಗಿ ಜೀವ ವೈವಿಧ್ಯತಾ ಅಗ್ರನೆಲೆಗಳು ದಾಳಿಗೊಳಗಾಗಿ ತತ್ತರಿಸುತ್ತಿವೆ. ಪರಿಸರ ಪ್ರೀತಿಯನ್ನು ಫೇಸ್​ಬುಕ್, ವಾಟ್ಸ್​ಆಪ್​ಗಳಿಗೆ ಸೀಮಿತಗೊಳಿಸದೇ, ಪ್ರಚಾರದ ಗೀಳನ್ನು ಬಿಟ್ಟು ದಿಟ್ಟತನದಿಂದ ಸಂರಕ್ಷಣೆಗೆ ಇಳಿದರೆ ಇವುಗಳ ಉಳಿವು ಸಾಧ್ಯ. ಜೀವವೈವಿಧ್ಯದ ರಕ್ಷಣೆಯಲ್ಲಿ ಯುವ ಜನರ ಪಾತ್ರ ಬಹು ಮುಖ್ಯ.

| ಡಾ.ಸಮದ್ ಕೊಟ್ಟೂರು

ತೃಣ ಅಣುವಿನಿಂದ ಹಿಡಿದು ಬೃಹತ್ ಗಾತ್ರದ ತಿಮಿಂಗಲಗಳವರೆಗೆ, ಪಾಚಿಯಿಂದ ಹಿಡಿದು ಗೊಂಡಾರಣ್ಯದವರೆಗೆ ಎಷ್ಟೊಂದು ವೈವಿಧ್ಯ ಇದೆ. ಇಡೀ ಭೂಗೋಳದಲ್ಲಿರುವ ಸಸ್ತನಿ, ಪಕ್ಷಿ, ಸರೀಸೃಪ, ಉಭಯವಾಸಿ, ಮೀನು, ಕೀಟ, ಸೂಕ್ಷ್ಮಾಣು ಜೀವಿಗಳ ಬಗ್ಗೆ ಅರಿಯುತ್ತಾ ಹೋದರೆ ಅದೊಂದು ಅನಂತ ವಿಸ್ಮಯವೇ ಸರಿ. ನಿಮಗೆ ಗೊತ್ತಾ? ತೋಳದ ಮೂಲದಿಂದ ಉಗಮವಾದ ನಾಯಿಗಳಲ್ಲಿಯೇ 340 ತಳಿಗಳಿವೆ! ಒಟ್ಟಾರೆ ಭೂಮಿಯ ಮೇಲೆ ಕಂಡು ಬರುವ ಎಲ್ಲಾ ವಿಧದ ಜೀವರಾಶಿಯ ಮೊತ್ತವನ್ನು ಜೀವ ವೈವಿಧ್ಯ ಎಂದು ವಾಖ್ಯಾನಿಸಬಹುದು. ಇಂದು ಜಗತ್ತಿನಲ್ಲಿ 20 ಲಕ್ಷದಿಂದ 1 ಕೋಟಿ ಪ್ರಭೇದಗಳಿದ್ದು ಅವುಗಳಲ್ಲಿ 17 ಲಕ್ಷ ಜೀವಿಗಳನ್ನು ಗುರುತಿಸಲಾಗಿದೆ. ಅಸ್ತಿತ್ವದಲ್ಲಿರುವ ಶೇ.80ಕ್ಕಿಂತ ಹೆಚ್ಚು ಪ್ರಭೇದಗಳನ್ನು ಇನ್ನೂ ಗುರುತಿಸಿ ಹೆಸರಿಸಬೇಕಾಗಿದೆ. ಆದರೆ ಇವುಗಳಲ್ಲಿ ಅನೇಕ ಜೀವಿಗಳು ನಾವು ಅರಿಯುವುದಕ್ಕಿಂತ ಮೊದಲೇ ವಿನಾಶ ವಾಗುತ್ತಿವೆ.

ಜೀವಿಗಳ ವಿನಾಶ ಒಂದು ಸಹಜ ಪ್ರಕ್ರಿಯೆ. ಅಸ್ತಿತ್ವಕ್ಕಾಗಿ ಹೋರಾಟ ಮತ್ತು ಪರಿಸರಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವ ಬಲಶಾಲಿಯ ಉಳಿವು ಎಂಬ ಚಾರ್ಲ್ಸ್ ಡಾರ್ವಿನ್ ಸಿದ್ಧಾಂತಕ್ಕೆ ತಕ್ಕಂತೆ ಜೀವಿಗಳು ವಿಕಾಸಗೊಳ್ಳುತ್ತಿವೆ.

ಜಾಗತಿಕ ಜೀವ ವೈವಿಧ್ಯ ಅಗ್ರತಾಣ: ನಾರ್ಮನ್ ಮೈಯರ್ ಎಂಬ ಪರಿಸರ ತಜ್ಞ ಜೀವ ವೈವಿಧ್ಯದ ಅಗ್ರ ನೆಲೆಗಳ ಕುರಿತು ನಡೆಸಿದ ಅಧ್ಯಯನಗಳ ಪ್ರಕಾರ ಜಗತ್ತಿನಲ್ಲಿ ಒಟ್ಟು 35 ಜೀವ ವೈವಿಧ್ಯತಾ ಅಗ್ರನೆಲೆಗಳಿದ್ದು, ಭಾರತದಲ್ಲಿ ಎರಡು ಪ್ರಮುಖ ನೆಲೆಗಳಿವೆ, ಅವುಗಳೆಂದರೆ, ಪಶ್ಚಿಮ ಘಟ್ಟಗಳು ಹಾಗೂ ಇಂಡೋ ಬರ್ವ ಪ್ರದೇಶ. ಇಲ್ಲಿ ಜೀವ ವೈವಿಧ್ಯ ದಟ್ಟಣೆ ಇದ್ದು ಅನೇಕ ಸಸ್ಯ, ಪ್ರಾಣಿ, ಅಕಶೇರುಕ, ಶಿಲೀಂಧ್ರ ಹಾಗೂ ಏಕಾಣುಜೀವಿಗಳು ಆವಾಸಸ್ಥಾನ ಬಿಟ್ಟರೆ ಬೇರೆಲ್ಲೂ ಕಾಣಸಿಗುವುದಿಲ್ಲ.

ಈ ಜೀವ ವೈವಿಧ್ಯ ಅಗ್ರ ನೆಲೆಗಳಲ್ಲಿ ಪತ್ತೆಮಾಡಿ ಗುರುತಿಸಬೇಕಾದ ಲಕ್ಷಾಂತರ ಪ್ರಭೇದದ ಜೀವರಾಶಿ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇಡೀ ಪ್ರಪಂಚದ ಎಲ್ಲಾ ಜೀವ ವೈವಿಧ್ಯ ಅಗ್ರನೆಲೆಗಳು ಮಾನವನ ದಾಳಿಗೊಳಗಾಗಿ ತತ್ತರಿಸುತ್ತಿವೆ.

ಇಡೀ ಮನುಕುಲದ ಆಹಾರಕ್ಕೆ ಮೂಲವಾಗಿರುವ ಕೃಷಿಯಲ್ಲಿ ಪರಾಗ ಸ್ಪರ್ಶ ಕ್ರಿಯೆ ಅತ್ಯಂತ ಪ್ರಮುಖ ಘಟ್ಟ. ಇದರಿಂದಲೇ ಬೆಳೆಗಳ ಸೃಷ್ಟಿ. ಈ ಕ್ರಿಯೆಯ ರೂವಾರಿಯಾಗಿರುವ ಜೇನ್ನೋಣಗಳನ್ನು ಕೀಟನಾಶಕ ಬಳಸಿ ನಾಶ ಮಾಡುತ್ತಿದ್ದೇವೆ! ಇಡೀ ಜಗತ್ತಿನ ಶೇ.30 ರಷ್ಟು ಜೇನ್ನೊಣಗಳು ಈಗಾಗಲೇ ನಾಶವಾಗಿವೆ. ಇದೇ ರೀತಿ ಮುಂದುವರಿಸಿದರೆ ಜೇನ್ನೊಣಗಳೇ ಇರುವುದಿಲ್ಲ. ಪರಿಣಾಮ? ಬಹು ಭೀಕರ. ಪರಾಗ ಸ್ಪರ್ಶವಿಲ್ಲದೇ ಕಾಳು ಬೆಳೆಯುವುದಿಲ್ಲ, ಹಣ್ಣು ಹಂಪಲು ಇಲ್ಲದಂತಾಗಿ ಮಾನವ ಹಸಿವಿನಿಂದ ಬಳಲಿ ಸಾಯುವುದು ಅನಿವಾರ್ಯ. ಕೃತಕ ಪರಾಗ ಸ್ಪರ್ಶ ಮಾಡಿದರೂ, ಆಹಾರದ ಬೆಲೆ ಗಗನಕ್ಕೇರಿ, ಹಸಿವಿನಿಂದ ಅಪಾರ ಜನ ಸಾವನ್ನಪ್ಪಬಹುದು.

ಮನುಷ್ಯನ ಅಭಿವೃದ್ಧಿ ಚಟುವಟಿಕೆಗಳೇ ಜೀವ ವೈವಿಧ್ಯಕ್ಕೆ ಮಾರಕವಾಗಿ ಪರಿಣಮಿಸಿವೆೆ. ಮೊದಲನೇ ಅತ್ಯುಗ್ರ ಅಪಾಯ – ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆ, ವನ್ಯಜೀವಿಗಳ ಅವಾಸಸ್ಥಾನದ ವಿನಾಶ ಹಾಗೂ ನಗರೀಕರಣ, ವಿದೇಶಿ ಕಳೆ ಸಸ್ಯಗಳ ದಾಳಿ, ಅತಿಯಾದ ಪ್ಲಾಸ್ಟಿಕ್ ಮಾಲಿನ್ಯ ಹಾಗೂ ಪರಿಸರ ನಾಶ ಇತ್ಯಾದಿ ಅಪಾಯಗಳು ಇಡೀ ಜೀವವೈವಿಧ್ಯಕ್ಕೇ ಕೊಳ್ಳಿ ಇಟ್ಟಿವೆ. ಇದರೊಂದಿಗೆ ಅತಿಯಾದ ಮೀನುಗಾರಿಕೆಯಿಂದಾಗಿ ಜಲಜೀವ ಜಾಲದ ವೈವಿಧ್ಯಕ್ಕೆ ಕಂಟಕ ಬಂದೊದಗಿದೆ. ವಿನಾಶ ಹೀಗೇ ಮುಂದುವರೆದರೆ, ಕೆಲವೇ ದಶಕಗಳಲ್ಲಿ ಮಾನವನಷ್ಟೇ ಅಲ್ಲ ಜೀವಜಾಲದ ಬದುಕೇ ದುಸ್ತರವಾಗಿ ಇಡೀ ಮನುಕುಲ ವಿನಾಶದಂಚಿಗೆ ತಲುಪುವ ಅಪಾಯವಿದೆ.

ಜೀವ ವೈವಿಧ್ಯದ ದಾಖಲಾತಿ: ಭಾರತೀಯ ಜೈವಿಕ ವೈವಿಧ್ಯ ನಿಯಮಗಳು 2005ರ ನಿಯಮ 21ರ ಮೇರೆಗೆ ಇಡೀ ದೇಶದ ಎಲ್ಲೆಡೆ ಜೀವ ವೈವಿಧ್ಯ ನಿರ್ವಹಣಾ ಸಮಿತಿಯನ್ನು ರಚಿಸಬೇಕಾಗಿದೆ. ಇದು ಜಿಲ್ಲಾ , ತಾಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಸ್ತರದ ಸಮಿತಿಗಳನ್ನು ರಚಿಸಿ ಆಯಾ ಪ್ರದೇಶದ ಜೈವಿಕ ವೈವಿಧ್ಯವನ್ನು ಹಾಗೂ ನೈಸರ್ಗಿಕ ಸಂಪನ್ಮೂಲವನ್ನು ದಾಖಲಿಸುವುದು ಅತ್ಯಂತ ಅವಶ್ಯಕ. ಜೈವಿಕ ವೈವಿಧ್ಯಕ್ಕೆ ಬಂದೊದಗಿರುವ ಅಪಾಯ, ಅದರ ವಿನಾಶವನ್ನು ತಡೆಗಟ್ಟುವ ತಂತ್ರ, ಮುಂದಿನ ಪೀಳಿಗೆಗೆ ಜೈವಿಕ ವೈವಿಧ್ಯವನ್ನು ಸಂರಕ್ಷಿಸುವ ವಿಧಾನವನ್ನು ಇಲ್ಲಿ ದಾಖಲಿಸಬೇಕಾಗಿದೆ.

ಭಾರತಕ್ಕೆ ಅತ್ಯಂತ ಮಹತ್ವದ ಸ್ಥಾನ

ಜಗತ್ತಿನ ಜೀವ ವೈವಿಧ್ಯ ತಾಣಗಳಲ್ಲಿ ಭಾರತಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಜಗತ್ತಿನ ಶೇ.10ರಷ್ಟು ಜೀವರಾಶಿ ಇಲ್ಲಿದೆ. ಇಂಡೋ ಹಿಮಾಲಯ ಪ್ರದೇಶ, ಇಂಡೋ ಬರ್ವ, ಸುಂದರ್​ಬನ, ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾ ಭಾರತದ ವ್ಯಾಪ್ತಿಯಲ್ಲಿ ಬರುವ ಜೀವವೈವಿಧ್ಯದ ಅಗ್ರನೆಲೆಗಳು. ಇಲ್ಲಿಯವರೆಗೆ 5,487 ಸಸ್ತನಿಗಳು, 9,990 ಪಕ್ಷಿಗಳು 8,734 ಸರೀಸೃಪಗಳು, 6,515 ಉಭಯವಾಸಿಗಳು, 31,153 ಪ್ರಭೇದದ ಮೀನುಗಳು ಈ ಭೂಮಿಯಲ್ಲಿ ಇರುವುದನ್ನು ಗುರುತಿಸಿ ಹೆಸರಿಸಲಾಗಿದೆ. ಆದರೆ ಇವುಗಳಿಗಿಂತ ದುಪ್ಪಟ್ಟು ಜೀವಿಗಳು ಇನ್ನೂ ನಮ್ಮ ಅರಿವಿಗೇ ಬಂದಿಲ್ಲ. ಇಡೀ ಪ್ರಾಣಿ ಜಗತ್ತಿನಲ್ಲೇ ಶೇ.80 ರಷ್ಟು ಇರುವ ಕೀಟಗಳಲ್ಲಿ ಇರುವ ವೈವಿಧ್ಯವಂತೂ ವಿಸ್ಮಯಕಾರಿ. ಸಸ್ಯಗಳಲ್ಲಿ 16,236 ಹೂಬಿಡುವ ಸಸ್ಯಗಳನ್ನು ಗುರುತಿಸಿದ್ದು ಅದಕ್ಕಿಂತ ದುಪ್ಪಟ್ಟು ಸಸ್ಯಗಳನ್ನು ಗುರುತಿಸಿ ಹೆಸರಿಸಬೇಕಾಗಿದೆ.

ಈ ದಿನಾಚರಣೆ ಆರಂಭವಾದ ಬಗೆ…

1993ರಲ್ಲಿ ವಿಶ್ವ ಸಂಸ್ಥೆಯು ಜೀವ ವೈವಿಧ್ಯದ ಕುರಿತ ಒಡಂಬಡಿಕೆಯನ್ನು ಅಂಗೀಕರಿಸಿದ ದಿನವಾದ ಡಿ. 29ರಂದು ‘ವಿಶ್ವ ಜೀವ ವೈವಿಧ್ಯ ದಿನ’ ಎಂದು ಆಚರಿಸಿತ್ತು. ನಂತರ 2000ನೇ ಸಾಲಿನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜೀವ ವೈವಿಧ್ಯ ಒಡಂಬಡಿಕೆಯ ಅಂಗೀಕಾರವಾದ ದಿನ ಮೇ 22ರಂದು ‘ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನ’ ಎಂದು ಆಚರಿಸಲು ತೀರ್ವನಿಸಿತು.

ಪ್ರತಿ ವರ್ಷ ಒಂದೊಂದು ಘೋಷವಾಕ್ಯವಿದ್ದು, ಈ ಬಾರಿಯ ಘೋಷವಾಕ್ಯ ‘ನಮ್ಮ ಜೀವ ವೈವಿಧ್ಯ; ನಮ್ಮ ಆಹಾರ, ನಮ್ಮ ಆರೋಗ್ಯ’. ಇದರ ಉದ್ದೇಶ, ಜನರಲ್ಲಿ ಜೀವ ವೈವಿಧ್ಯ ಹಾಗೂ ಅದರ ಆರೋಗ್ಯವನ್ನು ಆಧರಿಸಿದ ನಮ್ಮ ಆಹಾರದ ಮೂಲಗಳ ಅವಲಂಬನೆ, ಪೌಷ್ಟಿಕತೆ ಹಾಗೂ ಜನಾರೋಗ್ಯ ಕುರಿತು ಜಾಗೃತಿ ಮೂಡಿಸುವುದಾಗಿದೆ.

ಯುವಕರ ಪಾತ್ರ ಅತಿ ಮುಖ್ಯ

ಭಾರತದ ಜನಸಂಖ್ಯೆಯಲ್ಲಿ ಶೇ.41ರಷ್ಟು ಜನ 18 ವರ್ಷದೊಳಗಿ ನವರು, ಹಾಗೂ ಶೇ.35 ರಷ್ಟು 19 ರಿಂದ 44 ವಯಸ್ಸಿನವರಿದ್ದಾರೆ. ಹೆಚ್ಚು ಹೆಚ್ಚು ವಾಹನಗಳು, ಗ್ರಾಹಕ ಉತ್ಪನ್ನಗಳ ಬಳಕೆ ಇವರಿಂದ ದುಪ್ಪಟ್ಟಾಗಲಿದೆ. ಅದೇ ರೀತಿ ಮಾಲಿನ್ಯ ಸಹ. ಇಂದು ಅನೇಕ ಯುವಕರು ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದು, ಮಾಲಿನ್ಯದ ವಿರುದ್ಧದ ಧ್ವನಿ ಹಲವೆಡೆ ಮೊಳಗುತ್ತಿರುವುದು ಖುಷಿಯ ಸಂಗತಿಯೇ. ಅನೇಕ ಯುವಕ ಯುವತಿಯರು ಸಾಫ್ಟ್​ವೇರ್

ಉದ್ಯೋಗ ಬಿಟ್ಟು ಸಾವಯವ ಕೃಷಿಯತ್ತ ವಾಲುತ್ತಿದ್ದಾರೆ. ಇನ್ನು ಕೆಲವರು ನ್ಯಾಚುರಲಿಸ್ಟ್, ಪರಿಸರ ಸ್ವಯಂಸೇವಕರಾಗುತ್ತಿದ್ದಾರೆ. ಅನೇಕ ಯುವಕರು ರಜಾ ದಿನಗಳಲ್ಲಿ ವನ್ಯಜೀವಿ ತಾಣಗಳ ಹೊರಗೆ ವಾಹನ ದಟ್ಟಣೆ ತಡೆಯಲು, ಕಾಡಿನ ಬೆಂಕಿ ನಿಯಂತ್ರಿಸಲು ನೆರವಾಗುತ್ತಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆ ನಡೆಸುತ್ತಿರುವ ಇಕೋ ವಾಲಂಟೀರ್, ನ್ಯಾಚುರಲಿಸ್ಟ್ ತರಬೇತಿ ಶಿಬಿರಗಳಿಂದ ಸಾವಿರಾರು ಯುವಕ-ಯುವತಿಯರು ತರಬೇತಿ ಪಡೆಯುತ್ತಿದ್ದಾರೆ. ಆದರೆ ಬಹುತೇಕ ಯುವಜನರು ತಮ್ಮ ಪರಿಸರ ಪ್ರೀತಿಯನ್ನು ಬರೀ ಫೇಸ್​ಬುಕ್, ವಾಟ್ಸ್​ಆಪ್​ಗೆ ಸೀಮಿತಗೊಳಿಸಿ ಒಂದಿಷ್ಟು ಲೈಕ್ಸ್, ಕಮೆಂಟ್ ಸುತ್ತ ಗಿರಕಿ ಹೊಡೆಯುತ್ತಿರುವುದು ದುರಂತ. ಇದನ್ನು ಬಿಟ್ಟು ಜೀವ ವೈವಿಧ್ಯಗಳ ರಕ್ಷಣೆ ಮುಂದಾದರೆ, ಭವಿಷ್ಯ ಸುಂದರವಾಗಿರಲಿದೆ ಎಂಬುದನ್ನು ಅರಿಯಬೇಕಿದೆ.

ನಮ್ಮದೂ ಇರಲಿ ಅಳಿಲು ಸೇವೆ

 • ಕೀಟ ನಾಶಕಗಳ ಬಳಕೆ ನಿಲ್ಲಿಸಿ. ಇದರಿಂದ ಪರಾಗಸ್ಪರ್ಶ ಮಾಡುವ ಜೇನ್ನೊಣಗಳು ಹಾಗೂ ಇತರ ಕೀಟಗಳ ವಿನಾಶ ತಪ್ಪುವುದು. ರಾಸಾಯನಿಕ ಕೀಟನಾಶಕದ ಬದಲಾಗಿ ಜೈವಿಕ ಕೀಟನಾಶಕ ಅಥವಾ ನಿರ್ದಿಷ್ಟ ಕೀಟ ಹತೋಟಿಗೆ ಬಳಸುವ ಮೋಹಕ ಬಲೆಗಳನ್ನು ಬಳಸಿ.
 • ತೋಟದಲ್ಲಿ ಜೇನು ಕೃಷಿ ಮಾಡಿ, ಅದೇ ರೀತಿ ಚಿಟ್ಟೆಗಳನ್ನು ಆಕರ್ಷಿಸಲು ಅವುಗಳಿಗೆ ಇಷ್ಟವಾದ ಕಳೆ ಸಸ್ಯಗಳು ಹಾಗೂ ಸೂಕ್ತ ಗಿಡಗಳನ್ನು ಬೆಳೆಸಿ.
 • ಹಿತ್ತಲು ಅಥವಾ ಹೊಲಗದ್ದೆ, ತೋಟಗಳಲ್ಲಿ ಒಂದು ಮಿನಿ ವನ್ಯಧಾಮವನ್ನು ಸಾಧ್ಯವಾದರೆ ಸೃಷ್ಟಿಸಿ. ಉದಾಹರಣೆಗೆ ಮನೆಯ ಬಾಲ್ಕನಿಯಲ್ಲಿ ಒಂದು ಗುಬ್ಬಿಗೂಡನ್ನು ನೇತು ಹಾಕಿದರೆ ಸಾಕು. ಅಲ್ಲೊಂದು ಗುಬ್ಬಿಗಳ ಸಂಸಾರ ಆರಂಭವಾಗುವುದು.
 • ನಿಮ್ಮ ಪರಿಸರದಲ್ಲಿರುವ ವನ್ಯಜೀವಿಗಳ ನೆಲೆ ಹಾಗೂ ನೈಸರ್ಗಿಕ ಆವಾಸಸ್ಥಾನವನ್ನು ಸಂರಕ್ಷಿಸಿ.
 • ಗಣಿಗಾರಿಕೆ, ಕಲ್ಲು ಮರಳು ಗಣಿಗಾರಿಕೆ, ಒತ್ತುವರಿ, ಕಾಡಿನ ಬೆಂಕಿ, ಬೇಟೆ, ಅತಿಯಾದ ಜಾನುವಾರುಗಳಿಂದ ಕಾಡನ್ನು ರಕ್ಷಿಸಿ.
 • ಸಂಪನ್ಮೂಲಗಳ ಬಳಕೆಯನ್ನು ತಗ್ಗಿಸಿ, ಇದರಿಂದ ಪರಿಸರ ಮಾಲಿನ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ವಿನಾಶ ತಪ್ಪುವುದು.
 • ಪುನರ್ಬಳಕೆ ಮತ್ತು ಮರು ಉತ್ಪತ್ತಿ ಮಾಡುವುದರಿಂದ ಪರಿಸರದ ಮೇಲಿನ ಒತ್ತಡ ಕಡಿಮೆಯಾಗುವುದು.
 • ಪೆಟ್ರೋಲಿಯಂ ಮೂಲದ ಇಂಧನಗಳಾದ ಅಡುಗೆ ಅನಿಲ, ವಾಹನಗಳ ಇಂಧನ ಬಳಕೆ ಕಡಿಮೆ ಮಾಡಿ, ಇದಕ್ಕೆ ಬದಲಾಗಿ ಸೌರ ವಿದ್ಯುತ್, ಗೋಬರ್ ಗ್ಯಾಸ್​ನಂತಹ ಶುದ್ಧ ಇಂಧನಗಳನ್ನು ಬಳಸಿ.
 • ವಿದೇಶಿ, ದೂರದ ಊರಿನಿಂದ ಬರುವ ಆಹಾರ ಮೂಲ ಗಳ ಬದಲಾಗಿ, ಸ್ಥಳೀಯ ಆಹಾರ ಮೂಲವನ್ನೇ ಬಳಸಿ.
 • ಸಾವಯವ ಮೂಲದ ಆಹಾರವನ್ನು ಬಳಸುವುದರಿಂದ ಶೇ.100 ರಷ್ಟು ಕೀಟನಾಶಕಗಳಿಂದ ಮುಕ್ತರಾಗುತ್ತೀರಿ.
 • ಪರಿಸರ, ವನ್ಯಜೀವಿ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಪರಿಸರ ಮಾಲಿನ್ಯದ ಕುರಿತು ಜನ ಜಾಗೃತಿ ಮೂಡಿಸಿ.

One Reply to “ವಿನಾಶವಾಗದಿರಲಿ ವಿಸ್ಮಯ ಲೋಕ”

Leave a Reply

Your email address will not be published. Required fields are marked *