ವಿಶ್ವಕಪ್​ಗೆ ಬರಬೇಡಿ, ಬಂದರೆ ಜೈಲೇ ಗತಿ: ಫಿಕ್ಸರ್​ಗಳಿಗೆ ಐಸಿಸಿ ಕಟ್ಟುನಿಟ್ಟಿನ ಎಚ್ಚರಿಕೆ

ಲಂಡನ್: ವಿಶ್ವದ ಎಲ್ಲ ಕ್ರೀಡೆಗಳಿಗೂ ಇರುವಂಥ ಫಿಕ್ಸಿಂಗ್​ನ ಶಾಪ ಕ್ರಿಕೆಟ್​ಗೂ ಇದೆ. ಹೊಸ ಹೊಸ ಪ್ರಕಾರದ ಫಿಕ್ಸಿಂಗ್​ನ ನಡುವೆಯೂ ಕ್ರಿಕೆಟ್​ನಲ್ಲಿ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಐಸಿಸಿ ಪ್ರತಿ ಬಾರಿ ಹೊಸ ಪ್ರಯತ್ನಗಳಿಗೆ ಕೈ ಹಾಕುತ್ತಲೇ ಇರುತ್ತದೆ. ಈ ಬಾರಿ ವಿಶ್ವಕಪ್​ಗೂ ಮುನ್ನ ಶಂಕಿತ ಫಿಕ್ಸರ್​ಗಳಿಗೆ ದೊಡ್ಡ ಮಟ್ಟದ ಎಚ್ಚರಿಕೆಯನ್ನು ನೀಡಿದೆ. ಶಂಕಿತ ಫಿಕ್ಸರ್​ಗಳು ಯಾರೂ ವಿಶ್ವಕಪ್​ಗೆ ಬರಬೇಡಿ, ಇಂಗ್ಲೆಂಡ್​ಗೆ ಬಂದು ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದು ಗೊತ್ತಾದಲ್ಲಿ ಜೈಲೇ ಗತಿ ಎಂದು ಎಚ್ಚರಿಸಿದೆ.

ಇದೇ ಮೊದಲ ಬಾರಿಗೆ ವಿಶ್ವಕಪ್​ನಲ್ಲಿ ಭಾಗವಹಿಸಲಿರುವ 10 ತಂಡಗಳಿಗೂ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳನ್ನು ನೇಮಿಸುವಂತೆ ಐಸಿಸಿ ಸೂಚಿಸಿದೆ. ಅದಲ್ಲದೆ, ಕಾನೂನಿನ ಮೂಲಕವೂ ಎಚ್ಚರಿಕೆ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ, ಈವರೆಗೂ ತನ್ನಲ್ಲಿರುವ ಶಂಕಿತ ಫಿಕ್ಸರ್​ಗಳ ಮಾಹಿತಿಯನ್ನು ಬ್ರಿಟನ್​ನ ರಾಷ್ಟ್ರೀಯ ಅಪರಾಧ ಕೇಂದ್ರಕ್ಕೆ ನೀಡಿದ್ದು, ಇಂಗ್ಲೆಂಡ್​ಗೆ ಇವರು ಕಾಲಿಡದಂತೆ ತಡೆಯಲು ಪ್ರಯತ್ನಿಸಿದೆ.

ಆಯಾ ತಂಡಗಳಲ್ಲಿರುವ 10 ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳೊಂದಿಗೆ ಭ್ರಷ್ಟಾಚಾರ ನಿಗ್ರಹ ಘಟಕವನ್ನೂ ವಿಶ್ವಕಪ್​ಗಾಗಿ ಐಸಿಸಿ ಆರಂಭಿಸಿದ್ದು, ಇಬ್ಬರು ಅಗ್ರ ತನಿಖಾಧಿಕಾರಿಗಳು ಹಾಗೂ ಇನ್ನೊಬ್ಬ ಸಾಕ್ಷ್ಯ ವಿಶ್ಲೇಷಕ ಇರಲಿದ್ದಾರೆ. ಆರೂವರೆ ವಾರಗಳ ಕಾಲ ನಡೆಯಲಿರುವ 48 ಪಂದ್ಯಗಳಲ್ಲೂ ಇವರ ಸೇವೆ ಇರಲಿದೆ. ಕ್ರಿಕೆಟ್​ನ ಶ್ರೇಷ್ಠ ಟೂರ್ನಿಯಾಗಿರುವ ಏಕದಿನ ವಿಶ್ವಕಪ್ ಟೂರ್ನಿಯ 2011ರ ಫೈನಲ್ ಪಂದ್ಯವೇ ವಿಶ್ವದಲ್ಲಿ 220 ಕೋಟಿ ಪ್ರೇಕ್ಷಕರಿಂದ ವೀಕ್ಷಣೆಗೆ ಒಳಗಾಗಿತ್ತು. ಇಂಥ ಮಹತ್ವದ ಟೂರ್ನಿಯ ವೇಳೆ ಫಿಕ್ಸಿಂಗ್​ನಂಥ ಯಾವುದೇ ಘಟನೆಗಳು ವರದಿ ಕೂಡ ಆಗಬಾರದು ಎಂದು ಎಚ್ಚರಿಕೆ ವಹಿಸಲಾಗಿದೆ.

ಕೆಟ್ಟ ರೀತಿಯಲ್ಲಿ ಆಯೋಜನೆ ಮಾಡುವ ಕ್ರಿಕೆಟ್ ಟೂರ್ನಿಗಳಲ್ಲಿ ಇಂಥ ಘಟನೆಗಳು ನಡೆಯುತ್ತವೆ. ಇದಕ್ಕೆ ಹಿಂದಿನ ಘಟನೆಗಳೇ ಸಾಕ್ಷಿ. ಆದರೆ, ವಿಶ್ವಕಪ್ ಹಾಗಲ್ಲ. ಅತ್ಯಂತ ಶಿಸ್ತುಬದ್ಧವಾಗಿ ಸಂಘಟಿಸಲಾಗಿರುತ್ತದೆ. ಐಸಿಸಿ ಕೂಡ ಎಚ್ಚರಿಕೆ ವಹಿಸಿದ್ದು, ಆಟಗಾರರಿಗೂ ಮಾಹಿತಿ ನೀಡಲಾಗಿದೆ. ಹೋಟೆಲ್, ಮೈದಾನ ಸೇರಿದಂತೆ ಎಲ್ಲ ಕಡೆಯಲ್ಲೂ ನಮ್ಮ ಅಧಿಕಾರಿಗಳು ಇರುತ್ತಾರೆ. ದಿನದ ಎಲ್ಲ ಸಮಯದಲ್ಲೂ ಆಟಗಾರರಿಗೆ ಲಭ್ಯವಿರುತ್ತಾರೆ. ಈಗಾಗಲೇ ನಮ್ಮ ಅಧಿಕಾರಿಗಳಿಗೆ ಎಲ್ಲ ತಂಡದ ಆಟಗಾರರೊಂದಿಗೆ ಉತ್ತಮ ಬಾಂಧವ್ಯವೂ ಇದೆ. ಟೀಮ್ ಮ್ಯಾನೇಜ್​ವೆುಂಟ್ ಹಾಗೂ ಕೋಚ್​ಗಳಿಗೆ ಈ ಬಗ್ಗೆ ಮತ್ತೊಮ್ಮೆ ವಿವರಣೆ ನೀಡುತ್ತೇವೆ.

| ಅಲೆಕ್ಸ್ ಮಾರ್ಷಲ್ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯ ವ್ಯವಸ್ಥಾಪಕ

ಮೈದಾನದಿಂದ ಆಚೆಗೆ

ಈಗಾಗಲೇ ಕೆಲ ಶಂಕಿತ ಫಿಕ್ಸರ್​ಗಳಿಗೆ ನೇರ ಎಚ್ಚರಿಕೆಯನ್ನು ಐಸಿಸಿ ನೀಡಿದೆ. ಯಾವುದೇ ಕಾರಣಕ್ಕೂ ಮೈದಾನದಲ್ಲಿ ನೀವು ಕಾಣಿಸಿಕೊಳ್ಳಬಾರದು. ಹಾಗೇನಾದರೂ ಕಾಣಿಸಿಕೊಂಡಲ್ಲಿ ಯಾವುದೇ ಎಚ್ಚರಿಕೆಯೂ ಇಲ್ಲದೆ ಮೈದಾನದಿಂದ ಹೊರಹಾಕಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ಎಲ್ಲ ತಂಡದ ಸಿಬ್ಬಂದಿಗೂ ಮಾಹಿತಿ

ಮೇ 23ರಂದು ವಿಶ್ವಕಪ್​ಗೆ ಎಲ್ಲ ತಂಡಗಳು ಹಾಗೂ ಸಿಬ್ಬಂದಿ ಅಂತಿಮವಾಗಲಿದ್ದು, ಐಸಿಸಿ ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಮುಂದಿನ ವಾರ ಈ ಸಿಬ್ಬಂದಿಗೆ ಐಸಿಸಿ ಕಾರ್ಯಾಗಾರವನ್ನು ಏರ್ಪಡಿಸಿದ್ದು, ತನ್ನಲ್ಲಿರುವ ಶಂಕಿತ ಫಿಕ್ಸರ್​ಗಳ ಮಾಹಿತಿ, ಚಿತ್ರವನ್ನು ತೋರಿಸಲಿದೆ. ಟೂರ್ನಿಯ ಹಂತದಲ್ಲಿ ಇವರಲ್ಲಿ ಯಾರಾದರೂ ಸಂಪರ್ಕ ಮಾಡಲು ಯತ್ನಿಸಿದಲ್ಲಿ ಕೂಡಲೇ ತಿಳಿಸಬೇಕು ಎಂದು ಹೇಳಲಿದೆ. ಈ ಬಾರಿಯ ವಿಶ್ವಕಪ್ ಯಾವ ಫಿಕ್ಸಿಂಗ್​ನ ಆರೋಪಗಳಿಲ್ಲದೆ ನಡೆಯುವ ವಿಶ್ವಾಸದಲ್ಲಿ ಐಸಿಸಿ ಇದ್ದು, ಹೆಚ್ಚಿನ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.

ಟಿ20 ಲೀಗ್​ಗಳ ಮೇಲೆ ಕಣ್ಣು

ಏಕದಿನ ಮಾದರಿಯ ಟೂರ್ನಿಯಲ್ಲಿ ಫಿಕ್ಸಿಂಗ್ ಮಾಡು ವುದು ಬಹಳ ಕಷ್ಟ ಎಂದು ಫಿಕ್ಸರ್​ಗಳಿಗೂ ಅರಿವಾಗಿದೆ. ಆ ಕಾರಣಕ್ಕೆ ಅವರು ಟಿ20 ಲೀಗ್​ಗಳತ್ತ ಕಣ್ಣು ಇಟ್ಟಿದ್ದಾರೆ. ಟಿ20 ಲೀಗ್​ಗಳ ವೇಳೆ ಅಷ್ಟಾಗಿ ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳು ಇರುವುದಿಲ್ಲ ಎಂದು ಐಸಿಸಿ ಹೇಳಿದೆ.