More

    ಬಹಿರಂಗ ಸಮಸ್ಯೆಗಳ ಪರಿಹಾರಕ್ಕೆ ಅಂತರಂಗ ದರ್ಶನ

    ಬಹಿರಂಗ ಸಮಸ್ಯೆಗಳ ಪರಿಹಾರಕ್ಕೆ ಅಂತರಂಗ ದರ್ಶನಶಾಶ್ವತವಾದ ಸುಖ-ಶಾಂತಿಗಳು ಮಾನವನು ತನ್ನ ದೃಷ್ಟಿಯನ್ನು ಅಂತರಂಗದೆಡೆಗೆ ತಿರುಗಿಸಿದಾಗ ಮಾತ್ರ ಲಭ್ಯವಾಗುತ್ತವೆ. ಆದರೆ ಸನಾತನ ಧರ್ಮ ಬಾಹ್ಯ ಜೀವನವನ್ನು ಕಡೆಗಣಿಸುವುದಿಲ್ಲ, ಬದಲಿಗೆ ಅಂತರಂಗ-ಬಹಿರಂಗ ಜೀವನಗಳ ಸಮನ್ವಯವನ್ನು ಸಾರುತ್ತದೆ. ಬಹಿರಂಗದ ಸವಾಲುಗಳಿಗೆ ಪರಿಹಾರವನ್ನು ಅಂತರಂಗದಲ್ಲಿ ಕಂಡುಕೊಳ್ಳಬೇಕೆಂಬುದು ಅದರ ಮೂಲಮಂತ್ರ.

    ಕಳೆದ ಎರಡು ವರ್ಷಗಳಿಂದ ಜಗತ್ತಿನ ಬಹುತೇಕ ಎಲ್ಲ ದೇಶಗಳನ್ನೂ ವ್ಯಾಪಿಸಿದ ಕೋವಿಡ್ ಸಾಂಕ್ರಾಮಿಕ ಪಿಡುಗು ಎಲ್ಲ ರಂಗಗಳ ಮೇಲೆ ಪ್ರಭಾವ ಬೀರಿರುವುದು ಮಾತ್ರವಲ್ಲದೆ, ಮಾನವ ಜನಾಂಗದ ಅಂತಃಸತ್ವವನ್ನೂ ಪರೀಕ್ಷೆಗೊಡ್ಡಿದೆ. ವೈಯಕ್ತಿಕ ಹಾಗೂ ಸಾಮೂಹಿಕ ಜೀವನಗಳಲ್ಲಿ ಹಲವು ರೀತಿಯ ಗೊಂದಲಗಳನ್ನುಂಟುಮಾಡಿ ಲಕ್ಷಾಂತರ ಜನರ ಪ್ರಾಣಹರಣ ಮಾಡಿದ್ದು ಮಾತ್ರವಲ್ಲದೆ, ಈ ಸರ್ವವ್ಯಾಪಿ ಸಾಂಕ್ರಾಮಿಕ ವ್ಯಾಧಿ ಸಮಾಜಗಳ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗಳನ್ನು ಕದಡಿದೆ. ತಿಂಗಳುಗಳಗಟ್ಟಳೆ ಜನರ ಜೀವನವು ತಮ್ಮ ತಮ್ಮ ಮನೆಗಳಿಗೆ ಸೀಮಿತವಾಗುವಂತೆ ಮಾಡಿ ಕೌಟುಂಬಿಕ ಜೀವನಗಳಲ್ಲಿ ಎಂದೂ ಕಾಣದ ಬದಲಾವಣೆಗಳನ್ನು ತಂದಿದೆ. ಪ್ರಿಯವಾದ ಕುಟುಂಬದ ಸದಸ್ಯರನ್ನು, ಬಂಧು-ಮಿತ್ರರನ್ನು ಈ ಅವಧಿಯಲ್ಲಿ ಕಳೆದುಕೊಂಡವರು ಅಸಂಖ್ಯಾತ. ಜೀವನ ನಿರ್ವಹಣೆಗೆ ಆಧಾರವಾದ ಧನಸಂಚಯನ ಮಾಡುವವರನ್ನು ಕಳೆದುಕೊಂಡ ಕುಟುಂಬಗಳು ಅಪರಿಮಿತ. ಹಲವು ದೇಶಗಳ ಆರ್ಥಿಕ ವ್ಯವಸ್ಥೆಯ ಬುನಾದಿಯನ್ನು ಅಲುಗಾಡಿಸಿದ ಈ ಪಿಡುಗು ಮಾನವರ ಜೀವನಗಳನ್ನು ಮುಗ್ಗಟ್ಟಿಗೆ ದೂಡಿ ಸಂಕಷ್ಟಕ್ಕೀಡುಮಾಡಿದೆ; ಮಕ್ಕಳ ಶಿಕ್ಷಣ ವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡಿ ಅವರ ಜೀವನಗಳ ಮೇಲೆ ಸರಿಪಡಿಸಲು ಸಾಧ್ಯವಿಲ್ಲದ ಕುಂದನ್ನುಂಟುಮಾಡಿದೆ. ಇವುಗಳೆಲ್ಲದರ ಜೊತೆಗೆ ಮಾನವ ಅಂತರಂಗದಲ್ಲಿರುವ ಸಹಜ ‘ಬದುಕುಳಿಯುವ ಪ್ರವೃತ್ತಿ’ಯಿಂದಾಗಿ (Survival Instinct) ಇಡೀ ಜಗತ್ತು ಬೆಚ್ಚಿಬೀಳುವಂತೆ ಮಾಡಿದೆ. ಇಂತಹ ಸನ್ನಿವೇಶದಲ್ಲಿ ‘ಮುಂದೇನು?’ ಎಂಬ ಪ್ರಶ್ನೆ ಭೂತಾಕಾರವಾಗಿ ಎದ್ದು ನಿಂತಿದೆ. ಇಂತಹ ವಿಷಮ ಪರಿಸ್ಥಿತಿಯಿಂದ ಹೊರಬರುವುದು ಹೇಗೆ? ಇದಕ್ಕೆ ಸನಾತನ ಧರ್ಮ ನೀಡುವ ಪರಿಹಾರವೇನಾದರೂ ಇದೆಯೇ? ಈ ಲೇಖನದಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸೋಣ.

    ಬಾಹ್ಯ ಜೀವನದಲ್ಲಿ ಎದುರಾಗುವ ಸವಾಲು-ಸಮಸ್ಯೆಗಳಿಗೆ ಪರಿಹಾರವನ್ನು ಬಾಹ್ಯ ಜಗತ್ತಿನಲ್ಲಿ ಮಾತ್ರ ಹುಡುಕುವುದರಿಂದ ಸಿಕ್ಕುವುದಿಲ್ಲ; ನಮ್ಮ ಅಂತರಂಗದ ಜಗತ್ತಿನ ಕಡೆಗೂ ದೃಷ್ಟಿಯನ್ನು ಹಾಯಿಸಬೇಕೆಂಬುದು ಸನಾತನ ಧರ್ಮದ ಮೂಲಭೂತ ಮಾರ್ಗದರ್ಶನ. ಇದನ್ನೇ ಕಠೋಪನಿಷತ್ತಿನಲ್ಲಿ ಯಮದೇವನು ಎಳೆಯ ವಯಸ್ಸಿನ ಸತ್ಯಾನ್ವೇಷಕನಾದ ನಚಿಕೇತನಿಗೆ ಸೂತ್ರರೂಪದಲ್ಲಿ ತಿಳಿಸಿದ್ದಾನೆ.

    ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಃ

    ತಸ್ಮಾತ್ ಪರಾನ್ ಪಶ್ಯತಿ ನಾಂತರಾತ್ಮನ್ |

    ಕಶ್ಚಿದ್ಧೀರಃ ಪ್ರತ್ಯಗಾತ್ಮಾನಮೈಕ್ಷತ್

    ಆವೃತ್ತಚಕ್ಷುರಮೃತತ್ವಮಿಚ್ಛನ್ || 2.1.1 ||

    ‘ಸ್ವಯಂಭುವಾದ ಭಗವಂತನು ಇಂದ್ರಿಯಗಳನ್ನು ಸದಾ ಹೊರಗೆ ಹೋಗುವಂತೆ ನಿರ್ವಿುಸಿದ್ದಾನೆ. ಆದ್ದರಿಂದ ಮನುಷ್ಯನು ಹೊರಗೆ ಮಾತ್ರ ನೋಡುತ್ತಾನೆಯೇ ಹೊರತು ತನ್ನ ಅಂತರಂಗದಲ್ಲಿಯೇ ಇರುವ ಅಮೃತಾತ್ಮನನ್ನು ನೋಡುವುದಿಲ್ಲ. ಮೃತ್ಯುವಿನಿಂದ ಪಾರಾಗಿ ಅಮೃತತ್ವವನ್ನು ಪಡೆಯಬೇಕೆಂದು ಬಯಸಿದ ಧೀರನು ಮಾತ್ರ ತನ್ನ ದೃಷ್ಟಿಯನ್ನು ಒಳಗೆ ತಿರುಗಿಸಿ ಅಲ್ಲಿಯೇ ಪರಮಾತ್ಮನನ್ನು ಕಂಡುಕೊಳ್ಳುತ್ತಾನೆ’.

    ಬಹಿಮುಖವಾಗಿ ಹೋಗುವುದೇ ಮಾನವನ ಇಂದ್ರಿಯಗಳ ಸಹಜ ಸ್ವಭಾವ. ಆದ್ದರಿಂದ ತನ್ನ ಸುಖ-ಸಂತೋಷ-ಭದ್ರತೆಗಳಿಗಾಗಿ ಅವನು ಹೊರಗಿನ ಜಗತ್ತಿನ ಭೋಗ-ಭಾಗ್ಯಗಳನ್ನು ಹಾಗೂ ಬಂಧು-ಮಿತ್ರರನ್ನು ಆಶ್ರಯಿಸುತ್ತಾನೆ. ಆದರೆ ಅವನ ಬಾಹ್ಯ ಜಗತ್ತಿನ ಗಳಿಕೆಯೆಲ್ಲವೂ ಅಶಾಶ್ವತ; ಇದರಿಂದಾಗಿ ಹೊರಗಿನ ಜಗತ್ತನ್ನು ಮಾತ್ರ ನಂಬಿಕೊಂಡವನ ಜೀವನ ದುಃಖ-ದುರಂತಗಳಲ್ಲಿ ಪರ್ಯವಸಾನಗೊಳ್ಳುತ್ತದೆ. ಶಾಶ್ವತವಾದ ಸುಖ-ಶಾಂತಿಗಳು ಮಾನವನು ತನ್ನ ದೃಷ್ಟಿಯನ್ನು ಅಂತರಂಗದೆಡೆಗೆ ತಿರುಗಿಸಿದಾಗ ಮಾತ್ರ ಲಭ್ಯವಾಗುತ್ತವೆ. ಆದರೆ ಸನಾತನ ಧರ್ಮ ಬಾಹ್ಯ ಜೀವನವನ್ನು ಕಡೆಗಣಿಸುವುದಿಲ್ಲ, ಬದಲಿಗೆ ಅಂತರಂಗ-ಬಹಿರಂಗ ಜೀವನಗಳ ಸಮನ್ವಯವನ್ನು ಸಾರುತ್ತದೆ. ಬಹಿರಂಗದ ಸವಾಲುಗಳಿಗೆ ಪರಿಹಾರವನ್ನು ಅಂತರಂಗದಲ್ಲಿ ಕಂಡುಕೊಳ್ಳಬೇಕೆಂಬುದು ಅದರ ಮೂಲಮಂತ್ರ.

    ಕೋವಿಡ್ ಸಾಂಕ್ರಾಮಿಕ ವ್ಯಾಧಿಯಿಂದ ಗೊಂದಲಮಯವಾದ ಪ್ರಪಂಚದಲ್ಲಿಯೂ ಈ ಸೂತ್ರವನ್ನೇ ಅನ್ವಯಿಸಬೇಕು. ಈ ಪಿಡುಗು ಜಗತ್ತಿನ ಸಂಕಷ್ಟಗಳಿಗೆ ಕಾರಣವಾಗಿರಬಹುದು, ಆದರೆ ಎಲ್ಲ ಕಾಲಗಳಲ್ಲಿಯೂ ಮಾನವನ ಜೀವನಸಾಗರದಲ್ಲಿ ಸುಖ-ದುಃಖಗಳು ಮತ್ತು ಜನನ-ಮರಣಗಳು ತರಂಗಗಳಿದ್ದಂತೆ. ಎಂದಾದರೂ ತರಂಗಗಳಿಲ್ಲದ ಸಾಗರವನ್ನು ನೋಡಲು ಸಾಧ್ಯವೇ? ಅದೇ ರೀತಿಯಲ್ಲಿ ದ್ವಂದ್ವಮಯವಾದ ಬಾಹ್ಯ ಜೀವನವನ್ನು ಮಾತ್ರ ನಂಬಿಕೊಂಡವರಿಗೆ ದುಃಖ-ನಿರಾಶೆಗಳು ಎಂದೆಂದೂ ಕಟ್ಟಿಟ್ಟ ಬುತ್ತಿ. ಇದನ್ನೇ ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು, ‘ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಮ್ ಈ ನಿತ್ಯವೂ, ಅಸುಖಕರವೂ ಆದ ಲೋಕದಲ್ಲಿರುವ ನೀನು, ನನ್ನನ್ನು ಭಜಿಸಿ ಧ್ಯಾನಿಸು’ (9.33) ಎಂದು ಬೋಧಿಸಿದ್ದಾನೆ. ಭಗವದ್ಗೀತೆಯಲ್ಲಿ ಹಲವು ಸಂದರ್ಭಗಳಲ್ಲಿ ಗೀತಾಚಾರ್ಯನು ಉಪದೇಶಿಸಿರುವಂತೆ, ತಾನೆಂದರೆ ಎಲ್ಲರ ಅಂತರಂಗದಲ್ಲಿರುವ ಪರಮ ಸುಖ-ಶಾಂತಿ ಸ್ವರೂಪನಾದ ದಿವ್ಯಾತ್ಮನೇ. ಶ್ರೀಕೃಷ್ಣನೆಂದರೆ ಒಂದು ದೇಹಕ್ಕೆ ಸೀಮಿತವಾದವನಲ್ಲ. ಮಾನವನು ತನ್ನ ದೃಷ್ಟಿಯನ್ನು ಬಾಹ್ಯ ಜಗತ್ತಿನಿಂದ ಅಂತರಂಗದ ಜಗತ್ತಿಗೆ ತಿರುಗಿಸಬೇಕೆಂಬುದೇ ಭಗವದ್ಗೀತೆಯ ಸಾರಸರ್ವಸ್ವ.ಈ ಜಗತ್ತಿನಲ್ಲಿ ಜನಿಸಿದ ಪ್ರತಿ ಜೀವಿಯೂ ಸದಾಕಾಲ ಎರಡು ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತಾನೆ. ಮೊದಲನೆಯದು ದುಃಖನಿವೃತ್ತಿಯಾದರೆ, ಎರಡನೆಯದು ಸುಖಪ್ರಾಪ್ತಿ. ಆದರೆ ಈ ಗುರಿಗಳನ್ನು ತಲುಪಲು ಸರಿಯಾದ ಮಾರ್ಗವೇನೆಂಬುದನ್ನು ತಿಳಿಯದೆ ಮಾನವನು ಹೊರಗಿನ ಜಗತ್ತಿನಲ್ಲಿ ದುಃಖವನ್ನುಂಟುಮಾಡುವ ವಸ್ತು-ವ್ಯಕ್ತಿ-ವಿಷಯಗಳಿಂದ ದೂರವಾಗಲು ಪ್ರಯತ್ನಿಸುತ್ತಾನೆ ಹಾಗೂ ಸದಾಕಾಲ ಸುಖವನ್ನು ನೀಡುವ ಸನ್ನಿವೇಶಗಳನ್ನು ಅನ್ವೇಷಿಸುತ್ತಾನೆ. ಆದರೆ ಹೊರಗಿನ ಜಗತ್ತಿನಿಂದ ಬರುವ ಸುಖ ಅಲ್ಪ ಹಾಗೂ ಕ್ಷಣಿಕ; ದುಃಖ ಮಾತ್ರ ಅಪಾರ. ಇಂತಹ ದ್ವಂದ್ವಮಯ ಜೀವನ ಕೊನೆಗೆ ಮರಣದಲ್ಲಿ ಅಂತ್ಯವಾಗುತ್ತದೆ. ಇದು ಇಹ ಜೀವನದ ಸಹಜ ಸತ್ಯ ಸ್ಥಿತಿ. ಆದ್ದರಿಂದಲೇ ಇಂತಹ ಸುಖ-ದುಃಖಗಳ ಚಕ್ರದಿಂದ ಪಾರಾಗಲು ಸನಾತನ ಧರ್ಮದ ಋಷಿ-ಮುನಿಗಳು ಮಾನವನನ್ನು ಅಂತರಂಗದ ಪಥವನ್ನು ಪ್ರವೇಶಿಸಲು ಪ್ರೇರೇಪಿಸುತ್ತಾರೆ. ಅವನ ಒಳಗೇ ಇರುವ ಅನಂತ ಸುಖ-ಶಾಂತಿ-ಆನಂದಗಳ ಆಗರವಾದ ಪರಮಾತ್ಮನನ್ನು ಅರಿಯಲು ಪ್ರೋತ್ಸಾಹಿಸುತ್ತಾರೆ.

    ಹಲವರು ಸನಾತನ ಧರ್ಮದ ಈ ಬೋಧನೆಯನ್ನು ತಪ್ಪಾಗಿ ಗ್ರಹಿಸಿ, ಅಂತರಂಗದ ಸಾಧನೆಯೆಂದರೆ ಸಮಾಜದಿಂದ ನಿರ್ಗಮಿಸಿ ನಿವೃತ್ತರಾಗಬೇಕೆಂದು ತಿಳಿಯುತ್ತಾರೆ. ಇದು ಸರಿಯಲ್ಲ. ಅಂತರಂಗದಲ್ಲಿ ಶಾಂತಿಯನ್ನರಸಲು ಮನೆ-ಮಠಗಳನ್ನು ಬಿಟ್ಟು ಏಕಾಂತ ಜೀವನಕ್ಕೆ ತೆರಳಬೇಕಾಗಿಲ್ಲ. ಇದು ಬಹುತೇಕ ಮಂದಿಗೆ ಸಾಧ್ಯವೂ ಅಲ್ಲ, ಅಗತ್ಯವೂ ಇಲ್ಲ. ತಾವು ಇದ್ದಲ್ಲಿಯೇ ಇದ್ದುಕೊಂಡು ಕರ್ತವ್ಯಗಳನ್ನು ನಿರ್ವಹಿಸುತ್ತ ಶಾಶ್ವತವಾದ ಸುಖ-ಶಾಂತಿ ಪಡೆಯಬಹುದು. ಇದಕ್ಕೆ ಬೇಕಾಗಿರುವುದು ಜೀವನ ದೃಷ್ಟಿಕೋನದಲ್ಲಿ ಪರಿವರ್ತನೆ ಮಾತ್ರ. ಅಂತರಂಗ-ಬಹಿರಂಗ ಜೀವನಗಳ ಸಮನ್ವಯವೇ ಸನಾತನ ಧರ್ಮದ ಬುನಾದಿ. ಇನ್ನೂ ಕೆಲವರು ಜೀವನದಲ್ಲಿ ಶಾಂತಿಯನ್ನು ಸಾಧಿಸಲು ಯೋಗ-ಪ್ರಾಣಾಯಾಮಗಳನ್ನು ಆಶ್ರಯಿಸಬೇಕೆಂದು ತಿಳಿಯುತ್ತಾರೆ. ಇಂತಹ ಸಾಧನೆಗಳಲ್ಲಿ ತೊಡಗಿರುವ ಸಮಯದಲ್ಲಿ ಮಾತ್ರ ಅಲ್ಪ-ಸ್ವಲ್ಪ ಶಾಂತಿ ಸಮಾಧಾನಗಳಿರುತ್ತವೆ. ಅವುಗಳಿಂದ ಹೊರಗೆ ಬಂದ ಕೂಡಲೇ ಮನಸ್ಸು ದ್ವಂದ್ವಮಯವಾದ ಬಾಹ್ಯ ಜಗತ್ತಿಗೆ ಧಾವಿಸಿ ಪುನಃ ಅಶಾಂತಿಗೊಳಗಾಗುತ್ತದೆ. ಇಂತಹ ಸಾಧನೆಗಳು ಮನಸ್ಸನ್ನು ಸ್ವಲ್ಪ ಮಟ್ಟಿಗೆ ಉಪಶಮನಗೊಳಿಸಲು ಸಹಾಯಕವಾಗುತ್ತವೆಂಬುದು ನಿಜ. ಆದರೆ ಸನಾತನ ಧರ್ಮ ಹೇಳುವಂತೆ ಮಾನವನಿಗೆ ಶಾಶ್ವತವಾದ ಸುಖ-ಶಾಂತಿಗಳು ಲಭಿಸುವುದು ತನ್ನ ಸತ್ಯಸ್ವರೂಪವಾದ ದಿವ್ಯತೆಯನ್ನು ಅರಿತು ಅನುಭವಿಸಿದಾಗ ಮಾತ್ರ. ಋಗ್ವೇದದ ಪುರುಷಸೂಕ್ತದಲ್ಲಿ ಹೇಳಿರುವಂತೆ,

    ವೇದಾಹಮೇತಂ ಪುರುಷಂ ಮಹಾಂತಂ

    ಆದಿತ್ಯವರ್ಣಂ ತಮಸಃ ಪರಸ್ತಾತ್

    ತಮೇವಂ ವಿದ್ವಾನ್ ಅಮೃತ ಇಹ ಭವತಿ

    ನಾನ್ಯಃ ಪಂಥಾ ವಿದ್ಯತೇ ಅಯನಾಯ

    ‘ತಮಸ್ಸಿನ ಆಚೆಗೆ ಸೂರ್ಯನಂತೆ ಹೊಳೆಯುತ್ತಿರುವ ಪರಮ ಪುರುಷನನ್ನು ನಾನು ಅರಿತಿರುವೆನು. ಅವನನ್ನು ಅರಿತವನು ಮಾತ್ರ ಮೃತ್ಯುವನ್ನು ದಾಟುವನು. ಮೃತ್ಯುವನ್ನು ಗೆಲ್ಲಲು ಇದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ’. ಆದ್ದರಿಂದ ಜೀವನದಲ್ಲಿ ಹೊರಗಿನ ಜಂಜಾಟಗಳನ್ನು ಗೆಲ್ಲಲು ಮಾನವನು ತನ್ನ ಒಳಹೊಕ್ಕು ಅಂತರಂಗದಲ್ಲಿರುವ ಪರಮಾತ್ಮನನ್ನು ಅರಿಯಬೇಕು. ಇದು ನಮಗೆ ಪರಿಪೂರ್ಣ ಸ್ವಾತಂತ್ರ್ಯ ಹಾಗೂ ಅನಂತ ಸುಖವನ್ನು ನೀಡಬಲ್ಲದು. ಸೀಮಿತವಾದ ಇಂದ್ರಿಯಗಳ ಮೂಲಕ ಈ ಅಶಾಶ್ವತ ಜಗತ್ತಿನಲ್ಲಿ ಅನಂತ ಸುಖವನ್ನು ಪಡೆಯಲು ಹೇಗೆ ತಾನೇ ಸಾಧ್ಯ? ಅಂತರಂಗದಲ್ಲಿರುವ ನಿತ್ಯನಾದ ಪರಮಾತ್ಮನನ್ನು ಅರಿತಾಗ ಮಾತ್ರ ಇದು ಸಾಧ್ಯವಾಗುತ್ತದೆ.

    ಕೋವಿಡ್ ವ್ಯಾಧಿ ಸುಭದ್ರ ಜೀವನ ನಿರ್ವಹಣೆಗೆ ಅಗತ್ಯವಾದ ಹೆಚ್ಚಿನ ಬೆಂಬಲ-ವ್ಯವಸ್ಥೆಗಳನ್ನು ಹಾಳುಗೆಡವಿರುವ ಸನ್ನಿವೇಶಗಳಲ್ಲಿ ಬಹಳ ಜನರು ಶಾಂತಿ, ನೆಮ್ಮದಿಗಾಗಿ ಅಂತರಂಗವನ್ನು ಆಶ್ರಯಿಸಲೇ ಬೇಕಾಯಿತು. ಈ ಅವಧಿಯಲ್ಲಿ ಹಲವು ಜನರು ಅಧ್ಯಾತ್ಮದೆಡೆಗೆ ದೃಷ್ಟಿಯನ್ನು ತಿರುಗಿಸಿರುವುದು ಮಾನವ ಜನಾಂಗಕ್ಕೆ ವರವೇ ಸರಿ. ಜೀವನದ ಸಂಕಷ್ಟಗಳಿಂದ ನಿರಾಶೆಯ ಕೂಪದಲ್ಲಿ ಮುಳುಗುತ್ತಿರುವ ಹೃದಯಕ್ಕೆ, ‘ನಾನು ಕೇವಲ ದೇಹ, ಮನಸ್ಸುಗಳ ಸಂಕೀರ್ಣವಲ್ಲ, ನನ್ನ ಸತ್ಯ ಸ್ವರೂಪವು ನಿತ್ಯವಾದ ದಿವ್ಯಾತ್ಮವೇ ಆಗಿದೆ’ ಎಂಬ ಅರಿವು-ವಿಶ್ವಾಸಗಳು ನವೋತ್ಸಾಹವನ್ನು ತುಂಬುವ ಸಂಜೀವಿನಿಯಿದ್ದಂತೆ.

    ಅಷ್ಟಾವಕ್ರಗೀತೆಯಲ್ಲಿ ಅಷ್ಟಾವಕ್ರ ಋಷಿ ಹೇಳಿರುವಂತೆ,

    ಮಯ್ಯನಂತಮಹಾಂಭೋಧೌ ಜಗದ್ವೀಚಿಃ ಸ್ವಭಾವತಃ |

    ಉದೇತು ವಾಸ್ತಮಾಯಾತು ನ ಮೇ ವೃದ್ಧಿರ್ನ ಚ ಕ್ಷತಿಃ || 15.11 ||

    ‘ನನ್ನ ಅನಂತ ಪ್ರಜ್ಞಾಸಾಗರದಲ್ಲಿ ಈ ಜಗತ್ತು ಸಹಜವಾದ ತರಂಗವಿದ್ದಂತೆ. ಅದು ಎದ್ದರೂ, ಬಿದ್ದರೂ ನನಗೆ ಅದರಿಂದ ಯಾವ ವೃದ್ಧಿಯೂ ಇಲ್ಲ, ಕ್ಷಯವೂ ಇಲ್ಲ’. ಸಾಗರದಲ್ಲಿ ಆವಿರ್ಭಾವವಾಗಿ ಅಂತ್ಯವಾಗುವ ತರಂಗಗಳಿಂದ ಸಾಗರಕ್ಕೆ ಯಾವುದೇ ಲಾಭ-ನಷ್ಟಗಳಿಲ್ಲವಷ್ಟೆ. ಅದೇ ರೀತಿಯಲ್ಲಿ ತಾನು ಪರಮ ಪ್ರಜ್ಞಾ ಸ್ವರೂಪನೆಂದು ಅರಿತವನಿಗೆ ದ್ವಂದ್ವಮಯವಾದ ಈ ಜಗತ್ತಿನ ಸುಖ-ದುಃಖಗಳು ಕೆಲಕಾಲ ಬಂದು ಹೋಗುವ ಅಲೆಗಳಿದ್ದಂತೆ. ಅಂತರಂಗದ ಆಧ್ಯಾತ್ಮಿಕ ಪಥವು ಮಾನವನಿಗೆ ಬಾಹ್ಯ ಜಗತ್ತಿನಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲದ ಸನ್ನಿವೇಶಗಳಲ್ಲಿ ಶಾಂತಿಯನ್ನು ನೀಡುತ್ತದೆ. ಜೀವನದಲ್ಲಿ ಅನಿವಾರ್ಯ ಬದಲಾವಣೆಗಳನ್ನು ಸಂತೋಷವಾಗಿ ಒಪ್ಪಿಕೊಳ್ಳುವ ಮನೋಭಾವ ಸಹಜವಾಗಿ ಬರುತ್ತದೆ.

    ಕೋವಿಡ್ ಪಿಡುಗಿನ ದುಷ್ಪರಿಣಾಮಗಳನ್ನು ಸಹಿಸಿಕೊಳ್ಳಲು ಹಾಗೂ ನಿವಾರಿಸಲು ಸನಾತನ ಧರ್ಮ ಬಹು ವ್ಯವಹಾರ್ಯ ವಿಧಾನಗಳನ್ನು ತೋರಿಸಿಕೊಡುತ್ತದೆ. ದ್ವಂದ್ವಮಯ ಜೀವನದ ಏರುಪೇರುಗಳಲ್ಲಿ ‘ತಾನು ಸತ್ಯವೂ ನಿತ್ಯವೂ ಆದ ಚೇತನ ಸ್ವರೂಪವೇ ಆಗಿದ್ದೇನೆ’ ಎಂಬುದರ ಅರಿವು ಹಾಗೂ ಅಗತ್ಯವಾದಾಗ ಮನಸ್ಸು ಮತ್ತು ಇಂದ್ರಿಯಗಳನ್ನು ಅಂತಮುಖ ಮಾಡುವ ಸಾಮರ್ಥ್ಯ ಅಪಾರವಾದ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಗಂಡಾಂತರಕಾರಿ ಪರಿಸ್ಥಿತಿಯಲ್ಲಿ ತನ್ನ ಅಂಗಗಳನ್ನು ಒಳಗೆ ಸೆಳೆದುಕೊಳ್ಳುವ ಸಾಮರ್ಥ್ಯವಿರುವುದರಿಂದ ಆಮೆ ಅಪಾಯದಿಂದ ಪಾರಾಗುತ್ತದೆ. ಇದನ್ನೇ ಭಗವದ್ಗೀತೆಯಲ್ಲಿ ಹೇಳಿರುವಂತೆ,

    ಯದಾ ಸಂಹರತೇಚಾಯಂ ಕೂಮೊಂಗಾನೀವ ಸರ್ವಶಃ |

    ಇಂದ್ರಿಯಾಣೀಂದ್ರಿಯಾರ್ಥೆಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ || 2.58 ||

    ‘ಆಮೆಯು ಹೊರಗಿರುವ ತನ್ನ ಅಂಗಾಂಗಗಳನೆಲ್ಲ ಹೇಗೆ ಒಳಗೆ ಸೆಳೆದುಕೊಳ್ಳುವುದೋ ಹಾಗೆಯೇ ಸ್ಥಿತಪ್ರಜ್ಞನು ತನ್ನ ಇಂದ್ರಿಯಗಳನ್ನು ವಿಷಯವಸ್ತುಗಳಿಂದ ಒಳಗೆ ಸೆಳೆದುಕೊಳ್ಳುತ್ತಾನೆ’. ಹೊರಗಿನ ದುಃಖ ದುಮ್ಮಾನಗಳಿಂದ ಪಾರಾಗಲು ಒಳಗೆ ಹೋಗುವುದೇ ದಾರಿಯೆಂದು ಸನಾತನ ಧರ್ಮವು ಸಾರುತ್ತದೆ.

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts