ಅದಮ್ಯ ಚೇತನ ಅನಂತಕುಮಾರ್​ ಅವರ ಬಗೆಗಿನ ಕೌತುಕಗಳಿವು

ಬೆಂಗಳೂರು: ರಾಜ್ಯ ಮತ್ತು ಕೇಂದ್ರದ ನಡುವೆ ಕೊಂಡಿಯಂತಿದ್ದ, ರಾಜ್ಯದಿಂದ ಬೆಳೆದು ಹೋಗಿ ರಾಷ್ಟ್ರ ಮಟ್ಟದ ಬಿಜೆಪಿಯಲ್ಲಿ ಅಗ್ರಮಾನ್ಯರೆನಿಸಿಕೊಂಡಿದ್ದ ಅನಂತಕುಮಾರ್​ ಅವರು ರಾಜಕಾರಣದಲ್ಲಿ ಹಂತ ಹಂತವಾಗಿ ಮೇಲೇರಿದವರು. ಅನಂತಕುಮಾರ್​ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ ಎಂದೇ ನಂಬಲಾಗಿದ್ದರೂ, ಅವರು ಬೆಳೆದದ್ದು ಮಾತ್ರ ಹುಬ್ಬಳ್ಳಿಯಲ್ಲಿ. ವ್ಯಾಸಂಗ ಮಾಡಿದ್ದೂ ಅಲ್ಲೇ. ಆದರೆ, ರಾಜಕೀಯವಾಗಿ ನೆಲೆ ಕಂಡುಕೊಂಡಿದ್ದು ಮಾತ್ರ ಬೆಂಗಳೂರಿನಲ್ಲಿ. ಅವರ ಬಗೆಗೆ ಹಲವು ಕೌತುಕಗಳಿವೆ. ಇಲ್ಲಿದೆ ಕೆಲವೊಂದಿಷ್ಟು ಮಾಹಿತಿ.

 1. ಅನಂತಕುಮಾರ್​ ಅವರ ಹುಟ್ಟಿದ ದಿನಾಂಕ ದಾಖಲೆಗಳ ಪ್ರಕಾರ 1959 ಜುಲೈ 22. ಆದರೆ, ಕುಟುಂಬದ ಮಾಹಿತಿಯಂತೆ ಅವರು ಜನಿಸಿದ್ದು 1959 ಸೆ.22ರಂದು ಎನ್ನಲಾಗಿದೆ.
 2. ಅವರು ಹುಟ್ಟಿದ್ದು ಬೆಂಗಳೂರಿನಲ್ಲೇ ಎನ್ನಲಾಗುತ್ತಿದೆ. ಆದರೆ, ಶಿಕ್ಷಣ ಪಡೆದಿದ್ದು ಮಾತ್ರ ಬೇರೆ ಊರುಗಳಲ್ಲಿ ಹುಬ್ಬಳ್ಳಿಯ ಕೆ.ಎಸ್.ಆರ್ಟ್ಸ್​​​ ಕಾಲೇಜಿನಲ್ಲಿ ಬಿಎ, ಮೈಸೂರಿನ ಜೆಎಸ್​​​ಎಸ್​​ ಲಾ ಕಾಲೇಜಿನಲ್ಲಿ LLM ಪದವಿ ಪಡೆದುಕೊಂಡರು.
 3. ವಿದ್ಯಾರ್ಥಿ ದಿಸೆಯಲ್ಲಿಯೇ ಆರ್​ಎಸ್​ಎಸ್​ ಮತ್ತು ವಿದ್ಯಾರ್ಥಿ ಪರಿಷದ್​ ಜತೆಗೆ ನಂಟು ಹೊಂದಿದ್ದ ಅನಂತ್​ಕುಮಾರ್​ ಅವರು ಜೆಪಿ ಚಳವಳಿಯಲ್ಲಿ ಭಾಗವಹಿಸಿ 40 ದಿನಗಳ ಕಾಲ ಸೆರೆವಾಸವನ್ನೂ ಅನುಭವಿಸಿದ್ದರು.
 4. ಅನಂತ್​ಕುಮಾರ್​ ಎಂದರೆ ರಾಷ್ಟ್ರ ರಾಜಕಾರಣವಷ್ಟೇ ನಮ್ಮ ಕಣ್ಣಮುಂದೆ ತೆರದುಕೊಳ್ಳುತ್ತದೆ. ಆದರೆ, 2003ರಲ್ಲಿ ಅವರು ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿಯೂ ನೇಮಕವಾಗಿದ್ದರು. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸಂಘಟಿಸುವತ್ತ ಅವರು ಹೆಚ್ಚಿನ ಗಮನ ಹರಿಸಿದ್ದರು. 2004ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅತಿದೊಡ್ಡ ಪಕ್ಷವಾಗಿಯೂ ಹೊರಹೊಮ್ಮಿತ್ತು.
 5. ಈ ವರೆಗೆ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ್ ಅವರು ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದು 1996ರಲ್ಲಿ.
 6. ಲಾಲ್ ಕೃಷ್ಣ ಅದವಾನಿ ಅವರ ನೀಲಿಗಣ್ಣಿನ ಹುಡುಗ ಎಂಬುದು ಅನಂತ​ಕುಮಾರ್​ ಅವರಿಗೆ ಇದ್ದ ವಿಶೇಷಣ. ವಾಜಪೇಯಿ ಮನಗೆದ್ದಿದ್ದ ಅನಂತ್​ಕುಮಾರ್​ 1998ರಲ್ಲಿ ಕಿರಿಯ ಯವಸ್ಸಿನಲ್ಲೇ ಕೇಂದ್ರ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು.
 7. ಅನಂತ್​ಕುಮಾರ್​ ಸೋಲಿಲ್ಲದ ಸರದಾರ.
 8. ಬೆಂಗಳೂರು ದಕ್ಷಿಣ ಕೇತ್ರವನ್ನು ಪ್ರತಿನಿಧಿಸುತ್ತಿದ್ದ ಅನಂತ್​ಕುಮಾರ್​ ಅವರು 1996ರಿಂದ ಈ ವರೆಗೆ ಅದೇ ಕ್ಷೇತ್ರದಿಂದ 6 ಬಾರಿ ಆಯ್ಕೆಯಾಗಿದ್ದಾರೆ. (1996 98, 99, 2004, 2009, 2013)
 9. ಅವರು ತಮ್ಮ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ ಗುಂಡೂರಾವ್​ ಪತ್ನಿ ವರಲಕ್ಷ್ಮೀ ಗುಂಡೂರಾವ್​ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು.
 10. ಅನಂತ್​ ಕುಮಾರ್​ 6 ಬಾರಿ ಗೆದ್ದಿರುವುದು ಘಟಾನುಘಟಿ ನಾಯಕರ ವಿರುದ್ಧವೇ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್​, ಮಾಜಿ ಸಚಿವ ಎಂ ಕೃಷ್ಣಪ್ಪ, ಕೃಷ್ಣಬೈರೇಗೌಡ, ನಂದನ್​ ನೀಲೇಕಣಿ ವಿರುದ್ಧ ಅವರು ಸ್ಪರ್ಧಿಸಿ ಗೆದ್ದಿದ್ದರು.
 11. ದೇವೇಗೌಡರು 1996ರಲ್ಲಿ ಪ್ರಧಾನ ಮಂತ್ರಿಯಾದ ಹೊತ್ತಿನಲ್ಲಿ ಅನಂತ್​ಕುಮಾರ್​ ಅವರು ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದರು.
 12.  ವಿಶ್ವಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಅನಂತ್​ಕುಮಾರ್​. 2015ರ ಅಕ್ಟೋಬರ್​ 15ರಂದು ವಿಶ್ವಸಂಸ್ಥೆಯ 67ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಅನಂತ್ ಕುಮಾರ್ ಕನ್ನಡದಲ್ಲಿ ಭಾಷಣ ಆರಂಭಿಸಿದ್ದರು. ‘ಸನ್ಮಾನ್ಯ ಅಧ್ಯಕ್ಷರೇ ಮತ್ತು ವಿಶ್ವದ ನನ್ನ ಪ್ರೀತಿಯ ಸಹೋದರ, ಸಹೋದರಿಯರೇ ನಿಮ್ಮೆಲ್ಲರಿಗೂ ನನ್ನ ಮುಂಜಾನೆಯ ಶುಭಾಶಯಗಳು…’ ಎಂದು ಅನಂತ್​​​ಕುಮಾರ್​​ ಭಾಷಣ ಆರಂಭಿಸಿದ್ದರು.
 13. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂದಿನ ರೂವಾರಿ ಅನಂತ್​ಕುಮಾರ್​.
 14. ಭಾರತದಲ್ಲಿ ನೀಮ್​ ಗೊಬ್ಬರವನ್ನು ಜನಪ್ರಿಯಗೊಳಿಸಿದವರು ಇವರೇ. ನೀಮ್​ ಗೊಬ್ಬರದಿಂದ ವಾರ್ಷಿಕ 10,000 ಕೋಟಿ ಸಬ್ಸಿಡಿಯನ್ನು ಭಾರತ ಸರ್ಕಾರಕ್ಕೆ ಉಳಿಸಿಕೊಟ್ಟಿದ್ದರು.
 15. ಕನ್ನಡ, ಹಿಂದಿ, ಇಂಗ್ಲಿಷ್​ನಲ್ಲಿ ಪ್ರಭುತ್ವ ಹೊಂದಿದ್ದ ಅನಂತ್​ಕುಮಾರ್​ ಅವರು, ಅದ್ಭುತ ವಾಕ್​ಪಟುತ್ವ ಹೊಂದಿದ್ದರು.ವಾಜಪೇಯಿ, ಎಲ್​.ಕೆ.ಅಡ್ವಾಣಿ ಕರ್ನಾಟಕಕ್ಕೆ ಬಂದರೆ ಅವರ ಭಾಷಣಗಳನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದ ಮಾಡುತ್ತಿದ್ದವರು ಅನಂತ್​ಕುಮಾರ್​.
 16. ರಾಮಜನ್ಮಭೂಮಿಯ ಹೋರಟಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಪ್ರತಿನಿಧಿಯಾಗಿದ್ದರು.
 17. ರಾಜಕಾರಣದಲ್ಲಿ ಮಹತ್ತರ ಸ್ಥಾನಕ್ಕೇರಿದ್ದ ಅನಂತ್​ಕುಮಾರ್​ ಅವರು ತಮ್ಮ ಕಡೇಯ ಹುಟ್ಟು ಹಬ್ಬವನ್ನು ನ್ಯೂಯಾರ್ಕ್​ನ ಆಸ್ಪತ್ರೆಯಲ್ಲಿಯೇ ಆಚರಿಸಿಕೊಂಡಿದ್ದರು.
 18. ಸಾಮಾಜ ಸೇವೆಗಾಗಿಯೇ ಅವರು ಅದಮ್ಯ ಚೇತನ ಎಂಬ ಹೆಸರಿನ ಸಂಘವನ್ನು ಹುಟ್ಟು ಹಾಕಿದ್ದರು. ಈ ಸಂಘದ ಅನ್ನಪೂರ್ಣ ಯೋಜನೆಯ ಮೂಲಕ ಸಾವಿರಾರು ಮಕ್ಕಳಿಗೆ ಪೌಷ್ಟಿಕತೆ ನೀಗಿಸಿದ್ದರು.