ಹಾನಗಲ್ಲ: ವಿವಿಧ ಜಿಲ್ಲೆಗಳಲ್ಲಿ ಸರಗಳ್ಳತನ ಕೃತ್ಯದಲ್ಲಿ ಪಾಲ್ಗೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಾನಗಲ್ಲ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ 1,14,000 ರೂ. ಮೌಲ್ಯದ ಚಿನ್ನದ ಆಭರಣ ಹಾಗೂ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಹಿರಿಯೂರಿನ ಮೃತ್ಯುಂಜಯನಗರ ನಿವಾಸಿ ಗುರುಪ್ರಸಾದ ನಾಗರಾಜಪ್ಪ ಮರಾಠಿ(24) ಬಂಧಿತ. ಈತನ ವಿರುದ್ಧ ಚಿತ್ರದುರ್ಗ, ತುಮಕೂರು, ಗದಗ, ಬಳ್ಳಾರಿ, ಹಾವೇರಿ ಜಿಲ್ಲೆಗಳು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ, ಕೊಲೆ, ಸುಲಿಗೆ, ಮನೆ ಕಳವು, ದೇವಸ್ಥಾನ ಕಳವು ಸೇರಿದಂತೆ ಒಟ್ಟು 35ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈತ ಶ್ರೀಕಾಂತ ಗುಡಗೂರ (ಜೈಲ್ ವಾರ್ಡನ್) ಎಂಬ ವ್ಯಕ್ತಿಯೊಂದಿಗೆ ತನ್ನ ಸಹೋದರನ ಕೊಲೆ ಮಾಡಿರುವ ಆರೋಪವನ್ನೂ ಎದುರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ. 9ರಂದು ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಕುಮಾರನಗರದ ರಸ್ತೆಯಲ್ಲಿ ತೆರಳುತ್ತಿದ್ದ ಮಹಿಳೆಯೋರ್ವಳ 1,14,000 ರೂ. ಮೌಲ್ಯದ ಮಾಂಗಲ್ಯಸರ ಕಿತ್ತು ಪರಾರಿಯಾದ ಘಟನೆ ನಡೆದಿತ್ತು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವ ಮಹಿಳೆಯ ಮಾಂಗಲ್ಯಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಪ್ರಕರಣವನ್ನು ಭೇದಿಸಲು ಪೊಲೀಸರ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡ ಬುಧವಾರ ಬೆಳಗ್ಗೆ ಹಾವೇರಿಯ ದನದ ಮಾರುಕಟ್ಟೆ ಬಳಿ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದು, ಇನ್ನುಳಿದ ಪ್ರಕರಣಗಳ ಕುರಿತು ತನಿಖೆ ಕೈಗೊಂಡಿದ್ದಾರೆ.
ಎಸ್ಪಿ ಅಂಶುಕುಮಾರ, ಶಿಗ್ಗಾಂವಿ ಡಿಎಸ್ಪಿ ಕೆ.ವಿ. ಗುರುಶಾಂತಪ್ಪ ಮಾರ್ಗದರ್ಶನದಲ್ಲಿ ಸಿಪಿಐ ಎನ್.ಎಚ್.ಆಂಜನೇಯ, ಪಿಎಸ್ಐಗಳಾದ ಸಂಪತ್ಕುಮಾರ ಆನೆಕಿವಿ, ದೀಪಾಲಿ ಗುಡೋಡಗಿ, ಸಿಬ್ಬಂದಿಗಳಾದ ಎಸ್.ಬಿ.ಕೂಸನೂರ, ಎನ್.ಎಚ್.ಡೋಲೆ, ಈರಣ್ಣ ಲಂಗೋಟಿ, ಬಾಹುಬಲಿ ಉಪಾಧ್ಯ, ಎಲ್.ಎಲ್.ಪಾಟೀಲ, ಇಲಿಯಾಸ್ ಶೇಖಸನದಿ, ಆನಂದ ಐ. ಪಾಟೀಲ, ಅನಿಲ ಮಡಿವಾಳರ, ಭೀಮಣ್ಣ ಗೋಡಿಹಾಳ, ಸಂತೋಷ ಮ್ಯಾಗೇರಿ, ಆನಂದ ಸಿ. ಪಾಟೀಲ, ಬಿ.ವಿ.ಹುರಕಡ್ಲಿ ಕಾರ್ಯಾಚರಣೆಯ ತಂಡದಲ್ಲಿದ್ದರು.