ಓದು ನಿಲ್ಲಿಸದವರಿಂದ ಸಾಧನೆ

ಹುಬ್ಬಳ್ಳಿ: ಟೈಟಲ್ ಸ್ಪಾನ್ಸರ್ ಜಿಎಂ ಕಂಪನಿ, ವಿಜಯವಾಣಿ ಹಾಗೂ ದಿಗ್ವಿಜಯ 247 ಸುದ್ದಿವಾಹಿನಿ ಮಾಧ್ಯಮ ಸಹಯೋಗದಲ್ಲಿ ಜೈನ್ ಕಾಲೇಜ್ ವತಿಯಿಂದ ನಗರದ ಹೋಟೆಲ್ ನವೀನ್​ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರ ಕಾಲೇಜ್ ಯುವಜನ ಮೇಳ ‘ಕ್ಯಾವಲ್​ಕೇಡ್-18’ ಶನಿವಾರ ಸಂಜೆ ಅದ್ದೂರಿ ತೆರೆ ಕಂಡಿತು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಆಧ್ಯಾನ  ವರ್ಲ್ಡ್ ಸಂಸ್ಥಾಪಕ, ಪ್ರೇರಣಾದಾಯಕ ಮಾತುಗಾರ ವಿಕಾಸ್ ಜೈನ್ ಮಾತನಾಡಿ, ಕಾಲೇಜ್ ಅರ್ಧಕ್ಕೆ ಮೊಟಕುಗೊಳಿಸಿದರೂ ಓದುವುದನ್ನು ನಿಲ್ಲಿಸದವರು ಎತ್ತರ ಸ್ಥಾನಕ್ಕೇರಿದ್ದಾರೆ. ಹೆಚ್ಚು ಅಧ್ಯಯನ ಮಾಡಿದಷ್ಟು ಜ್ಞಾನ ವಿಸ್ತಾರಗೊಳ್ಳುತ್ತದೆ. ಆತ್ಮವಿಶ್ವಾಸ ವೃದ್ಧಿಯಾಗುತ್ತ ಹೋದಂತೆ ಗುರಿ ಸ್ಪಷ್ಟವಾಗಿ ತೋರುತ್ತದೆ. ಕೆಲವರು ಹೀಗೆ ಬೆಳೆದರೆ ಇನ್ನೂ ಕೆಲವರು ಸ್ವಯಂ ಸ್ಪೂರ್ತಿ ಪಡೆದು ಬೆಳೆದ ಉದಾಹರಣೆಗಳಿವೆ. ಇಂಥವರು ಈಗಿನ ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು. ನಾಯಕನಿಂದ ನಾಯಕನಾಗುವುದು ಹೇಗೆಂಬುದನ್ನು ತಿಳಿಯಬೇಕು. ಇದುವೇ ಗೆಲುವಿನ ಸೂತ್ರ ಎಂದರು. ಸಿಎಂಎಸ್ ಜೈನ್ ವಿವಿ ನಿರ್ದೇಶಕ ಡಾ. ದಿನೇಶ ನೀಲಕಂಠ, ಪ್ರಾಚಾರ್ಯು ಪ್ರೊ. ಮಾಯಾ ಕುಲ್ಹಳ್ಳಿ, ಪ್ರೊ. ತನುಜಾ, ವಿದ್ಯಾರ್ಥಿ ಪ್ರತಿನಿಧಿ ಪ್ರೀತಂ ಎಸ್. ಉಪಸ್ಥಿತರಿದ್ದರು.

ಎರಡು ಕಾಲೇಜ್​ಗೆ ಜನರಲ್ ಚಾಂಪಿಯನ್: ಅರ್ಖಿವಿಯೊ (ಬಿಕಾಂ) ಸ್ಪರ್ಧೆಯಲ್ಲಿ ಬೆಳಗಾವಿಯ ಗೋಗಟೆ ಕಾಲೇಜ್ ಆಫ್ ಕಾಮರ್ಸ್ ಹಾಗೂ ಪ್ರುಡೆನ್ಸ್ (ಬಿಬಿಎ) ಸ್ಪರ್ಧೆಯಲ್ಲಿ ಬೆಂಗಳೂರಿನ ಕ್ರೖೆಸ್ಟ್ ಕಾಲೇಜ್ ಜನರಲ್ ಚಾಂಪಿಯನ್ ಆಗಿ ಹೊರಹೊಮ್ಮಿದವು. ಬೆಸ್ಟ್ ಎಂಟರ್​ಪ್ರಿನರ್​ನಲ್ಲಿ ಬೆಂಗಳೂರಿನ ಕ್ರೖೆಸ್ಟ್ ಕಾಲೇಜ್​ಗೂ ಜನರಲ್ ಚಾಂಪಿಯನ್ ಬಹುಮಾನ ಲಭಿಸಿತು.

ಪ್ರಶಸ್ತಿ ಗರಿ: ಬಿ.ಕಾಂ ಫೆಸ್ಟ್ ಅರ್ಖಿವಿಯೊ-18ರ ನಿಮಿತ್ತ ಬೆಸ್ಟ್ ಸಿಇಒ, ಮಾರ್ಕೆಟಿಂಗ್, ಫೈನಾನ್ಸ್, ಎಚ್​ಆರ್​ಎಂ, ಅರ್ಥಶಾಸ್ತ್ರ, ಸೋಷಿಯಲ್ ನೆಟ್​ವರ್ಕ್ ಸೇರಿ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಸ್ಪರ್ಧೆಗಳು ನಡೆದು ಬಹುಮಾನ ವಿತರಿಸಲಾಯಿತು. ಬಿಬಿಎ ಫೆಸ್ಟ್ ಪ್ರುಡೆನ್ಸ್-18ರ ನಿಮಿತ್ತ ಸ್ಟಾರ್ಟ್ ಅಪ್ ಕಲ್ಚರ್, ನವೋದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ವಿಭಾಗಗಳಿಗೆ ಪ್ರಶಸ್ತಿ ಲಭಿಸಿತು.

ಮನೀಷ್ ತ್ಯಾಗಿ ಮಾತು ದಿಲ್​ಖುಷ್

ಹಾಸ್ಯ ಮಾತುಗಾರ ಮನೀಷ್ ತ್ಯಾಗಿ ಅವರು ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮಕ್ಕೆ ಫಿದಾ ಆಗದವರಿಲ್ಲ. ಅವರ ಪ್ರತಿ ಮಾತು, ಭಾವ-ಭಂಗಿಗಳಿಗೆ ವಿದ್ಯಾರ್ಥಿಗಳು ಬಿದ್ದು ಬಿದ್ದು ನಕ್ಕರು. ಒಂದು ಗಂಟೆ ನಡೆದ ಹಾಸ್ಯ ಕಾರ್ಯಕ್ರಮ ಎಲ್ಲರನ್ನೂ ಹಿಡಿದಿಟ್ಟಿತ್ತು.