ಲಾಭ ತಂದ ಸಮಗ್ರ ಬೇಸಾಯ

| ಕೆ.ಎನ್.ರಾಘವೇಂದ್ರ ಮಂಡ್ಯ 

ನಿರ್ದಿಷ್ಟ ಗುರಿ, ಅದನ್ನು ಸಾಧಿಸಲು ಶ್ರಮ ಹಾಕಿದರೆ ಕೃಷಿಯಲ್ಲಿ ಸಾಧನೆ ಮಾಡಬಹುದು ಎನ್ನುವುದಕ್ಕೆ ಶ್ರೀರಂಗಪಟ್ಟಣ ತಾಲೂಕು ಕಾರೇಕುರ ಗ್ರಾಮದ ಸುರೇಶ್ ಸಾಕ್ಷಿ. ಮೂಲತಃ ಮೈಸೂರು ಜಿಲ್ಲೆ ಕೆ.ಜಿ.ಕೊಪ್ಪಲು ಗ್ರಾಮದ ವಾಸಿಯಾಗಿರುವ ಸುರೇಶ್ ಅವರಿಗೆ ಬೋಗಾದಿಯಲ್ಲಿ ತೆಂಗಿನ ತೋಟವಿತ್ತು. ಅದನ್ನು ವಶಪಡಿಸಿಕೊಂಡ ಸರ್ಕಾರ ಒಂದೇ ದಿನಕ್ಕೆ ಅಲ್ಲಿನ ತೆಂಗಿನ ಮರಗಳನ್ನು ನಾಶಗೊಳಿಸಿತ್ತು. ಈ ನೋವನ್ನೇ ಸವಾಲಾಗಿ ಸ್ವೀಕರಿಸಿ ಈಗ ಮಾದರಿ ಕೃಷಿಕ ಎನಿಸಿದ್ದಾರೆ. ಸುರೇಶ್ ವಿದ್ಯಾಭ್ಯಾಸ ಹತ್ತನೇ ತರಗತಿಗೆ ಕೊನೆಗೊಂಡಿತ್ತು. ಮನಸ್ಸು ಕೃಷಿ ಕಡೆಗೆ ಇತ್ತು. ತೆಂಗಿನ ತೋಟವೂ ಕೈಬಿಟ್ಟಾಗ ಜಮೀನಿಗಾಗಿ ಹುಡುಕಾಟ ಪ್ರಾರಂಭಿಸಿ ಕೊನೆಗೆ ಅಜ್ಜಿ ಇದ್ದ ಕಾರೇಕುರಕ್ಕೆ ಬಂದು ಜಮೀನು ಖರೀದಿಸಿ ಕೃಷಿ ಪ್ರಾರಂಭಿಸಿದರು. ಒಂದೂವರೆ ಎಕರೆ ಜಮೀನು ಖರೀದಿಸಿದ್ದರೂ, ಅದು ಕೃಷಿಗೆ ಯೋಗ್ಯವಾದ ರೀತಿಯಲ್ಲಿ ಇರಲಿಲ್ಲ. ನಂತರ ಹಂತಹಂತವಾಗಿ ಜಮೀನನ್ನು ಅಭಿವೃದ್ಧಿಪಡಿಸಿಕೊಂಡು, ಏಲಕ್ಕಿ ಬಾಳೆ ಮತ್ತು ಟೊಮ್ಯಾಟೊ ಹಾಕಿ ಪ್ರಥಮ ಪ್ರಯತ್ನದಲ್ಲೇ ಭರ್ಜರಿ ಲಾಭ ಕಂಡರು.

ನಂತರ ತೋಟದ ಸುತ್ತ ಭದ್ರತೆ ಮಾಡಿಕೊಂಡು ವಿವಿಧ ಜಾತಿಯ ಹಣ್ಣು, ವಾಣಿಜ್ಯ ಬೆಳೆಯನ್ನು ಹಾಕಿದರು. ಕಾವೇರಿ ನೀರು ಬಂದರೆ ಮಾತ್ರ ಈ ಭಾಗದ ಬೆಳೆಗೆ ನೀರು. ಇನ್ನು ಅಂತರ್ಜಲದ ಪ್ರಮಾಣವೂ ಕಡಿಮೆ. ಆದ್ದರಿಂದ, ಬೋರ್​ವೆಲ್ ಕೊರೆಸಿ ಆ ನೀರಿನ ಜತೆಗೆ ಕಾವೇರಿ ನೀರನ್ನು ಬಳಸಿಕೊಂಡು ಬೇಸಾಯ ಮಾಡುತ್ತಿದ್ದಾರೆ. ಸದ್ಯ ಸುರೇಶ್ ತೋಟದಲ್ಲಿ ತೆಂಗು, ಸಪೋಟ, ಮಾವು, ಅಡಕೆ, ಲಿಚ್ಚಿ, ಚಿರ್ ನೆಲ್ಲಿ, ಸೀಬೆ, ಕಿತ್ತಳೆ, ಬಾದಾಮಿ, ಚಕೋತ, ಕಾಡು ಸಪೋಟ, ಚೆಕ್ಕೆ, ಮೆಣಸು, ನುಗ್ಗೆ, ಬಾಳೆ, ಏಲಕ್ಕಿ ಬೆಳೆ ಇವೆ. ಇದರ ಜತೆಗೆ ತೇಗ, ಸಿಲ್ವರ್ ಓಕ್, ಹರ್​ಕಲೇಸ್, ಬೇವು ಸೇರಿದಂತೆ ಹಲವು ಅರಣ್ಯ ಬೆಳೆ ಕೂಡ ಇವೆ.

ಕೋಳಿ ಸಾಕಣೆಗೆ ಸಕತ್ ಪ್ಲ್ಯಾನ್‌: ತೋಟದಲ್ಲಿ ಹಸುಗಳು, ಮೀನು, ಕೋಳಿ, ಮೊಲ, ಪಾರಿವಾಳ, ಲವ್ ಬರ್ಡ್ಸ್​ಗಳನ್ನೂ ಮೊದಲು ಸಾಕುತ್ತಿದ್ದರು. ಈಗ ಹಸುಗಳನ್ನು ಹೊರತುಪಡಿಸಿ ಉಳಿದ ಪ್ರಾಣಿಗಳನ್ನು ಮಾರಲಾಗಿದೆ. ಕೋಳಿ ಸಾಕಣೆಗೆ ಮಾಡಿರುವ ಯೋಜನೆ ಹೊಸತನದಿಂದ ಕೂಡಿದೆ. ಮೊದಲು ಕೃಷಿ ಹೊಂಡ ತೆಗೆಸಿ, ಅದರ ಮೇಲೆಯೇ ಕೋಳಿ ಸಾಕಣೆ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚು ನಾಟಿ ಕೋಳಿ, 50ಕ್ಕೂ ಹೆಚ್ಚು ಪಾರಿವಾಳ, ಲವ್ ಬರ್ಡ್ಸ್ ಇವೆ. ಸುರೇಶ್ ಅವರ ವಾರ್ಷಿಕ ಆದಾಯ 6 ಲಕ್ಷ ರೂ. ದಾಟಿದೆ. ನಿತ್ಯ ಮೈಸೂರಿನಿಂದ ಬಂದು ತೋಟದಲ್ಲಿ ಕೆಲಸ ಮಾಡಿ ವಾಪಸಾಗುತ್ತಾರೆ. ಆದ್ದರಿಂದ, ತೋಟದ ಮನೆಯಲ್ಲಿ ಒಂದು ಕುಟುಂಬವಿದ್ದು, ನಿರ್ವಹಣೆ ಮಾಡುತ್ತಿದ್ದಾರೆ. ಜತೆಗೆ ಸೋದರಮಾವ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಮಾರುಕಟ್ಟೆ ಸಮಸ್ಯೆ ಇಲ್ಲ: ತೋಟದಲ್ಲಿ ಬೆಳೆಯುವ ತರಕಾರಿ, ಹಣ್ಣುಗಳನ್ನು ಖುದ್ದಾಗಿ ಅಂಗಡಿಗಳಿಗೆ ಹೋಗಿ ಕೊಟ್ಟು ಬರುತ್ತಾರೆ. ಜತೆಗೆ ಮನೆ ಬಳಿಯೇ ಮಾರಾಟ ಮಾಡುತ್ತಾರೆ. ಇನ್ನು ಕೆಲವು ವೇಳೆ ವ್ಯಾಪಾರಿಗಳೇ ತೋಟಕ್ಕೆ ಬಂದು ಖರೀದಿ ಮಾಡುತ್ತಾರೆ. ಕೃಷಿ ಚಟುವಟಿಕೆಯಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಅದಕ್ಕಾಗಿ ತೋಟದಲ್ಲಿಯೇ ಗೊಬ್ಬರ ತಯಾರಿಸಲು ಬೇಕಿರುವ ಸೌಲಭ್ಯ ಮಾಡಿಕೊಂಡಿದ್ದಾರೆ. ತ್ಯಾಜ್ಯವಸ್ತುಗಳನ್ನು ಅದರಲ್ಲಿ ಹಾಕಿ ಗೊಬ್ಬರ ಸಿದ್ಧಪಡಿಸಲಾಗುತ್ತದೆ. ಹಸುವಿನ ಗಂಜಲ ಸಂಗ್ರಹಿಸಿ ಬೆಳೆಗೆ ಸಿಂಪಡಿಸಲಾಗುತ್ತಿದೆ. ಏಳು ವರ್ಷಗಳಲ್ಲಿ ಸುರೇಶ್ ಸರ್ಕಾರದಿಂದ ಸಿಗುವ ಸೌಲಭ್ಯವನ್ನೂ ಬಳಸಿಕೊಂಡಿದ್ದಾರೆ. ಒಂದೂವರೆ ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತೋಟವನ್ನು ವೀಕ್ಷಿಸಲು ಮಂಡ್ಯ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ರೈತರು, ಕೃಷಿ ಆಸಕ್ತರು ಬರುತ್ತಾರೆ.

ಚಿಕ್ಕ ವಯಸ್ಸಿನಿಂದಲೂ ಕೃಷಿಯ ಬಗ್ಗೆ ನನಗೆ ಆಸಕ್ತಿ. ಇದಕ್ಕೆ ಕುಟುಂಬದವರೂ ಸಹಕಾರ ನೀಡುತ್ತಿದ್ದಾರೆ. ಇದರಿಂದಾಗಿ ಕೃಷಿಯಲ್ಲಿ ಲಾಭ ಕಾಣಲು ಸಾಧ್ಯವಾಗುತ್ತಿದೆ.

| ಸುರೇಶ್ ಪ್ರಗತಿಪರ ರೈತ