ಘೊರ್ಪಡೆ ಪರಿವಾರದ ಸಮಗ್ರ ಕೃಷಿ

ಸಾವಯವ ಹಾಗೂ ವೈಜ್ಞಾನಿಕ ಪದ್ಧತಿಯೊಂದಿಗೆ ಸಮಗ್ರ ಕೃಷಿ ವಿಧಾನ ಅನುಸರಿಸಿ ಕೃಷಿಯಲ್ಲಿ ಮಾದರಿ ಸಾಧನೆ ಮಾಡಿದ್ದಾರೆ ಶಿರೋಳ ಗ್ರಾಮದ ರೈತ ಯಶವಂತ ಘೊರ್ಪಡೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 2018ನೇ ಸಾಲಿನ ‘ಶ್ರೇಷ್ಠ ತೋಟಗಾರಿಕೆ ರೈತ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

| ಮಹಾಂತೇಶ ಕುಳ್ಳೊಳ್ಳಿ ಹುಬ್ಬಳ್ಳಿ

‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎನ್ನುವ ಮಾತು ಎಲ್ಲರಿಗೂ ಗೊತ್ತು. ಈ ನಾಣ್ಣುಡಿಯಂತೆ ಅಲ್ಲಲ್ಲಿ ಒಂದಿಷ್ಟು ಕುಟುಂಬಗಳು ಒಟ್ಟಾಗಿ ಬಾಳುತ್ತಿರುವುದನ್ನು ಕಾಣಬಹುದು. ಇಂತಹ ಕುಟುಂಬಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಘೊರ್ಪಡೆ ಪರಿವಾರ ಉತ್ತಮ ಉದಾಹರಣೆ.

ಯಶವಂತ ಸದಾಶಿವ ಘೊರ್ಪಡೆ ಈ ಕುಟುಂಬದ ಯಜಮಾನರು (50). ಕಲಿತಿದ್ದು 7ನೇ ತರಗತಿ. ಕುಟುಂಬ ಸದಸ್ಯರ ಜತೆಗೆ ತಾವೂ ಬೆವರು ಹರಿಸಿ ದುಡಿಯುತ್ತಾರೆ. ಹೀಗಾಗಿಯೇ ಇವರಿಗೆ ಕೃಷಿಯಲ್ಲಿ ಖುಷಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.

ಚಿಕ್ಕವರಿರುವಾಗಲೇ ಕುಟುಂಬದ ಜವಾಬ್ದಾರಿ ಹೊತ್ತ ಅವರಿಗೆ ಆಗ ಇದ್ದದ್ದು 25 ಎಕರೆ. ಉತ್ತಮ ನೀರಾವರಿ ಮೂಲ ಇರಲಿಲ್ಲ. ಮಳೆಯಾಶ್ರಿತವಾಗಿ ಹಿರಿಯರು ಒಂದಿಷ್ಟು ದವಸ, ಧಾನ್ಯ ಬೆಳೆಯುತ್ತ ಬಂದಿದ್ದರು. ಆದರೆ ಮಳೆ ಕೈ ಕೊಟ್ಟ ವರ್ಷ ಬೆಳೆ ಬಾರದೆ ತೊಂದರೆ ಎದುರಿಸಬೇಕಾಗಿತ್ತು. ಬರಗಾಲದ ವರ್ಷಗಳಲ್ಲಂತೂ ಸಂಕಷ್ಟದ ಪರಿಸ್ಥಿತಿ. ಹೀಗಾಗಿ, ಕುಟುಂಬವನ್ನು ಆರ್ಥಿಕವಾಗಿ ಮೇಲೆತ್ತಬೇಕೆಂದು ಸಾವಯವ ಹಾಗೂ ವೈಜ್ಞಾನಿಕ ಕೃಷಿ ಕೈಗೊಳ್ಳಲು ಅವರು ಮುಂದಾದರು. ಸಾಂಪ್ರದಾಯಿಕ ಬೆಳೆಗಳಿಗೆ ಪರ್ಯಾಯವಾಗಿ ಕಬ್ಬು, ಅರಿಶಿಣ, ತರಕಾರಿ ಬೆಳೆಯತೊಡಗಿದರು. ಬಾಳೆ, ದಾಳಿಂಬೆ, ದ್ರಾಕ್ಷಿ, ಇತರ ಹಣ್ಣುಗಳನ್ನೂ ಬೆಳೆದರು. ಇವು ಭರ್ಜರಿ ಇಳುವರಿ ಜತೆ ಅಧಿಕ ಆದಾಯ ತಂದುಕೊಟ್ಟವು. ಯಶವಂತ ಅವರ ಮೂವರು ಸಹೋದರರೂ ಹಿರಿಯಣ್ಣನ ವೈವಿಧ್ಯಮಯ ಕೃಷಿ ಕಾರ್ಯಕ್ಕೆ ಸಾಥ್ ನೀಡಿದರು. ಕುಟುಂಬದ ಎಲ್ಲ 26 ಸದಸ್ಯರು ಕೃಷಿ ಕಾಯಕಕ್ಕೆ ಸಮರ್ಪಿಸಿಕೊಂಡರು. ಪರಿಣಾಮವಾಗಿ, ವರ್ಷದಿಂದ ವರ್ಷಕ್ಕೆ ಆದಾಯ ವೃದ್ಧಿಸಿತು. ಮತ್ತಷ್ಟು ಜಮೀನು ಖರೀದಿಸತೊಡಗಿದರು. ಇದರಿಂದ ಕುಟುಂಬದ ಜಮೀನು ಈಗ 103 ಎಕರೆಗೇರಿದೆ.

ಕೈ ಹಿಡಿದ ಸಮಗ್ರ ಕೃಷಿ: ಸಮಗ್ರ ಕೃಷಿ ಅನುಸರಿಸಿದರೆ, ಒಂದು ಬೆಳೆಯಲ್ಲಿ ಹಾನಿಯಾದರೂ ಮತ್ತೊಂದು ಬೆಳೆಯಲ್ಲಿ ಲಾಭ ಕಂಡು ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯ. ಒಂದಿಲ್ಲೊಂದು ಬೆಳೆಗಳಿಂದ ನಿರಂತರವಾಗಿ ಆದಾಯ ಬರುತ್ತದೆ. ಇಂತಹ ಬೇಸಾಯವನ್ನು ಘೊರ್ಪಡೆ ಕುಟುಂಬವು ವ್ಯವಸ್ಥಿತವಾಗಿ ಕೈಗೊಂಡಿದೆ. ಒಟ್ಟು 103 ಎಕರೆಯಲ್ಲಿ ವಿವಿಧ ಬೆಳೆಗಳಿಗೆ ಭೂಮಿ ವಿಂಗಡಿಸಿ ಬೆಳೆಯುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಳೆಯಾಶ್ರಿತ ಆಹಾರಧಾನ್ಯ, ನೀರಾವರಿ, ತೋಟಗಾರಿಕೆ ಬೆಳೆಗಳು ಸೇರಿವೆ. ಕೃಷಿಗೆ ಪೂರಕವಾಗಬಲ್ಲ ಹೈನುಗಾರಿಕೆ, ಮೀನುಗಾರಿಕೆ, ಆಡು ಮತ್ತು ಕೋಳಿ ಸಾಕಣೆ ಮೊದಲಾದ ಉಪಕಸುಬು ಕೈಗೊಂಡಿದ್ದಾರೆ. ಜಮೀನಿನ ಬದುಗಳಲ್ಲಿ 50 ತೆಂಗು, 100 ಮಾವು, ಹಲಸು, ಚಿಕ್ಕು, ಸಾಗವಾನಿ, ರಾಮಫಲ, ಪಪ್ಪಾಯ, ಬಾದಾಮಿ, ನುಗ್ಗೆ ಮೊದಲಾದ ಗಿಡಗಳನ್ನು ಬೆಳೆಸಿದ್ದಾರೆ. ಈ ಮೂಲಕ ಜಮೀನಿನ ಸಮರ್ಪಕ ಬಳಕೆ ಮಾಡಿಕೊಂಡಿದ್ದಾರೆ.

ಸಾವಯವ ಕೃಷಿಗೆ ಹೈನುಗಾರಿಕೆ ಆಧಾರ: ಸಾವಯವ ಕೃಷಿಯ ಅಗತ್ಯತೆ ಪೂರೈಸಿಕೊಳ್ಳಲು ಹೈನುಗಾರಿಕೆ ಕೈಗೊಂಡಿದ್ದಾರೆ. ಎರಡು ಎತ್ತು, ಎರಡು ಹೋರಿ, 12 ಎಮ್ಮೆ, 8 ಆಕಳು, 15 ಆಡು, 20 ಜವಾರಿ ಕೋಳಿ ಸಾಕಿದ್ದಾರೆ. ಈ ಜಾನುವಾರುಗಳ ಸತ್ವಯುತ ಕೊಟ್ಟಿಗೆ ಗೊಬ್ಬರದಿಂದ ಬೆಳೆಗಳು ಸಮೃದ್ಧತೆ ಕಂಡಿವೆ. ಮಳೆ ಹಾಗೂ ಬೋರ್​ವೆಲ್ ನೀರು ಸಂಗ್ರಹಿಸಲು 150 ಅಡಿ ಸುತ್ತಳತೆಯ ಮತ್ತು 25 ಅಡಿ ಆಳದ ಕೃಷಿ ಹೊಂಡ ಹಾಗೂ ಎರಡು ದೊಡ್ಡ ಬಾಂದಾರ್ ನಿರ್ವಿುಸಿದ್ದಾರೆ. ಕೃಷಿ ಹೊಂಡದಲ್ಲಿ ಮೀನು ಸಾಕಣೆ ಕೈಗೊಂಡಿದ್ದಾರೆ. ಇದರಿಂದ ನೀರು ಶುದ್ಧವಾಗಿರಲು ಸಹಕಾರಿಯಾಗಿದೆ. ಹನಿ ನೀರಾವರಿಗಾಗಿ ಅಳವಡಿಸಿದ ಪೈಪ್​ಗಳ ಮೂಲಕವೇ ಜಾನುವಾರುಗಳ ಸಗಣಿ, ಆಕಳುಗಳ ಗಂಜಲು, ಇತರ ಸಾವಯವ ದ್ರಾವಣಗಳನ್ನು ಮಿಶ್ರಣ ಮಾಡಿ ಎಲ್ಲ ಬೆಳೆಗಳಿಗೂ ಪೂರೈಸುತ್ತಿದ್ದಾರೆ. ಹೀಗಾಗಿ, ಉತ್ತಮ ಇಳುವರಿ ಬರುತ್ತಿದೆ.

ಆರ್ಥಿಕ ಬಲ ನೀಡಿದ ತೋಟಗಾರಿಕೆ ಬೆಳೆ: ತೋಟಗಾರಿಕೆ ಬೆಳೆಗಳು ಕಡಿಮೆ ನೀರಿನ ಬಳಕೆಯಿಂದ ಹೆಚ್ಚು ಆದಾಯ ನೀಡುತ್ತವೆ. ಹೀಗಾಗಿ, ಇವರು ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಹೆಚ್ಚು ಬೆಳೆಯಲು ಮುಂದಾಗಿದ್ದಾರೆ. ಬರಡು ಭೂಮಿಯಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಇವುಗಳಲ್ಲಿ ದ್ರಾಕ್ಷಿ, ದಾಳಿಂಬೆ ಪ್ರಮುಖ ಬೆಳೆ. ಪ್ರಾರಂಭದಲ್ಲಿ ನಾಲ್ಕು ಎಕರೆ ದ್ರಾಕ್ಷಿ ಬೆಳೆದರು. ಇದರಿಂದ ಉತ್ತಮ ಆದಾಯ ಕೈ ಸೇರಿದ್ದರಿಂದ 16 ಎಕರೆಗೆ ದ್ರಾಕ್ಷಿ ಬೆಳೆ ವಿಸ್ತರಿಸಿದ್ದಾರೆ. 10 ಎಕರೆಯಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಒಂದು ಎಕರೆಗೆ 3-4 ಟನ್​ದಷ್ಟು ಒಣದ್ರಾಕ್ಷಿ ಉತ್ಪಾದಿಸುತ್ತಾರೆ. ಕೆಜಿಗೆ 150-180 ರೂ. ದರ ಸಿಕ್ಕರೂ 7-8 ಲಕ್ಷ ರೂ. ಆದಾಯ ದೊರೆಯುತ್ತದೆ. ವೈನ್ ತಯಾರಿಕೆಗೆ ಬಳಕೆಯಾಗುವ ದ್ರಾಕ್ಷಿಯನ್ನು 6 ಎಕರೆಯಲ್ಲಿ ಬೆಳೆಯುತ್ತಿದ್ದಾರೆ. ಫಸಲು ಬರುವ ಮುನ್ನವೇ ಒಪ್ಪಂದ ಮಾಡಿಕೊಂಡು ನಾಸಿಕ್ ಮೂಲದ ಕಂಪನಿಯೊಂದಕ್ಕೆ ಕೆಜಿಗೆ 50 ರೂ. ನಂತೆ ದ್ರಾಕ್ಷಿ ಮಾರುತ್ತಾರೆ. 12 ಎಕರೆಯಲ್ಲಿ ದಾಳಿಂಬೆ ಬೆಳೆಯುತ್ತ ಬಂದಿದ್ದಾರೆ. 2 ಇದು ವರ್ಷದಲ್ಲಿ 3 ಬೆಳೆ ಬರುತ್ತದೆ. ಎಕರೆಗೆ 5 ಲಕ್ಷ ರೂ. ದಷ್ಟು ಆದಾಯ ಬರುತ್ತದೆ. 18 ಎಕರೆಯಲ್ಲಿ ಜಿ9 ತಳಿಯ ಬಾಳೆ ಬೆಳೆದಿದ್ದಾರೆ. ಕೆಜಿಗೆ 10-12 ರೂ. ದರ ಸಿಕ್ಕರೂ ಒಂದು ಎಕರೆಗೆ ಪ್ರತಿವರ್ಷ ಸುಮಾರು 5 ಲಕ್ಷ ರೂ. ಆದಾಯ ಕೈ ಸೇರುತ್ತಿದೆ. ಬಾಳೆಗೆ ಮಿಶ್ರಬೆಳೆಯಾಗಿ ಟೊಮ್ಯಾಟೊ, ಮೆಣಸಿನಕಾಯಿ, ಕಡಲೆ, ಕೊತ್ತಂಬರಿ, ತರಕಾರಿ ಬೆಳೆಯುತ್ತಾರೆ. 40 ಎಕರೆಯಲ್ಲಿ ಕಬ್ಬು ಬೆಳೆಯುತ್ತಾರೆ. ಎಕರೆಗೆ 80-90 ಟನ್​ದಷ್ಟು ಇಳುವರಿ ತೆಗೆಯುತ್ತಾರೆ. ಟನ್​ಗೆ 2500 ರೂ. ದರ ದೊರೆತರೂ ಎಕರೆಗೆ 2 ಲಕ್ಷ ರೂ. ಗಿಂತ ಹೆಚ್ಚು ಆದಾಯ ಸಿಗುತ್ತಿದೆ. 8 ಎಕರೆಯಲ್ಲಿ ಅರಿಶಿಣ ಬೆಳೆಯುತ್ತಾರೆ. ಎಕರೆಗೆ 35-40 ಕ್ವಿಂಟಾಲ್​ದಷ್ಟು ಉತ್ಪನ್ನ ಬರುತ್ತದೆ. ಕ್ವಿಂಟಾಲ್​ಗೆ 10-15 ಸಾವಿರ ರೂ. ದರ ಸಿಕ್ಕರೂ 4 ಲಕ್ಷ ರೂ.ಗಿಂತ ಅಧಿಕ ಆದಾಯವು ದೊರೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದಾಳಿಂಬೆಗೆ ಅಂಡಮಾರಿ ದುಂಡಾಣು ರೋಗ ಬಾಧಿಸುತ್ತಿದೆ. ಇದರ ನಿರ್ವಹಣೆ ಕಷ್ಟಕರವಾಗುತ್ತಿರುವುದರಿಂದ ಪರ್ಯಾಯವಾಗಿ ಶ್ರೀಗಂಧ, ಡ್ರ್ಯಾಗನ್ ಹಣ್ಣು ಬೆಳೆಯಲು ಮುಂದಾಗಿದ್ದಾರೆ.

ಸಾವಯವ ಕೃಷಿಯು ಭೂಮಿಯ ಫಲವತ್ತತೆ ಕಾಪಾಡಿಕೊಂಡು ಹೋಗಲು ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ, ಎಲ್ಲ ಬೆಳೆಗಳು ಅಧಿಕ ಇಳುವರಿ ನೀಡುತ್ತವೆ. ರೋಗ ಬಾಧೆಯೂ ಅಷ್ಟೊಂದು ಕಾಣಿಸುವುದಿಲ್ಲ. ನಮ್ಮ ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿ ಹಾಗೂ ಆಧುನಿಕ ಕೃಷಿ ವಿಧಾನದ ಹದವಾದ ಮಿಶ್ರಣವನ್ನು ನಾವು ಅಳವಡಿಸಿಕೊಂಡಿದ್ದೇವೆ. ಹನಿ ನೀರಾವರಿ ಮೂಲಕ ಹೆಚ್ಚು ತೋಟಗಾರಿಕೆ ಬೆಳೆ ಬೆಳೆಯಲು ಸಾಧ್ಯವಾಗಿದೆ. ಪ್ರತಿ ವರ್ಷ ಹೆಚ್ಚು ಆದಾಯ ಬರುತ್ತಿದೆ. ಮನೆ ಮಂದಿಯೆಲ್ಲ ಒಟ್ಟಾಗಿ ದುಡಿಯುತ್ತಿರುವುದರಿಂದ ಕೃಷಿಯಲ್ಲಿ ಪ್ರಗತಿ ಸಾಧ್ಯವಾಗಿದೆ.

| ಯಶವಂತ ಘೊರ್ಪಡೆ

ಕೃಷಿ ವೈಶಿಷ್ಟ್ಯಳು
#ಮೂರು ಎಕರೆ ಸಮಪಾತಳಿಯ ಕೃಷಿ ಹೊಂಡದಲ್ಲಿ ಮಳೆ ನೀರನ್ನು ನಿಲ್ಲಿಸಿ ಹನಿ ನೀರಾವರಿಗೆ ಬಳಸುತ್ತಾರೆ.

#ಕೃಷಿ ಹೊಂಡದಲ್ಲಿ ಮೀನುಗಾರಿಕೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿರುತ್ತಾರೆ.

#ಮುಧೋಳ ತಳಿಯ ನಾಯಿ ಸಾಕಣೆ (ಡೆಡ್ರಿನ್) ಮತ್ತು ನಾಯಿ ಮರಿಗಳ ಮಾರಾಟ.

#ಟ್ರ್ಯಾಕ್ಟರ್​ಗಳು, ಬಿತ್ತುವ ಯಂತ್ರ, ಸಿಂಪರಣೆ, ಮೇವು ಕತ್ತರಿಸುವ ಯಂತ್ರ, ರೋಟೋವೇಟರ್ ಯಂತ್ರ, ಧಾನ್ಯ ಸಂಸ್ಕರಣಾ ಯಂತ್ರ, ವಿದ್ಯುತ್ ಉತ್ಪಾದನಾ ಯಂತ್ರ ಬಳಕೆ ಮಾಡುತ್ತಾರೆ. ಇದರಿಂದ ವೆಚ್ಚದಲ್ಲಿ ಉಳಿತಾಯವಾಗಿದೆ.

# ಬಾಳೆ, ಅರಿಶಿಣ, ದಾಳಿಂಬೆ, ಕಬ್ಬು, ಗೋವಿನ ಜೋಳ ಅಂತರ ಹಾಗೂ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ.

# ಬಾಳೆ ಬೆಳೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ಇರಾನ್ ಹಾಗೂ ಇರಾಕ್ ದೇಶಗಳಿಗೆ ರಫ್ತು ಮಾಡುತ್ತಾರೆ.

# ದಾಳಿಂಬೆಯನ್ನು ಹೈದರಾಬಾದ್ ಮಾರುಕಟ್ಟೆಗೆ, ಒಣ ದ್ರಾಕ್ಷಿ ಮತ್ತು ಅರಿಶಿಣವನ್ನು ಮಹಾರಾಷ್ಟ್ರದ ಸಾಂಗ್ಲಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ರೈತರಿಗೂ ನೆರವು
ಘೊರ್ಪಡೆ ಕುಟುಂಬದವರು ಕೃಷಿ ಕ್ಷೇತ್ರದಲ್ಲಿ ಇತರ ರೈತರಿಗೂ ಸ್ಪೂರ್ತಿಯಾಗಿದ್ದಾರೆ. ಬೆಳೆಗಳನ್ನು ವೀಕ್ಷಿಸಲು ರೈತರು ಭೇಟಿ ನೀಡುತ್ತಾರೆ. ಅಂಥವರಿಗೆ ಸೂಕ್ತ, ಸಲಹೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತದೆ ಈ ಕುಟುಂಬ. (ರೈತ ಯಶವಂತ ಅವರ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ 9449478531)