ಸುಂಟಿಕೊಪ್ಪ: ಹಿರಿಯರು ನಿರ್ವಹಿಸಿಕೊಂಡು ಬಂದ ಕೃಷಿ ಹಾಗೂ ವಾರ್ಷಿಕ ಫಸಲನ್ನು ನಂಬಿಕೊಳ್ಳದೆ ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ಇಲ್ಲೊಬ್ಬ ರೈತ ಯಶ ಕಂಡಿದ್ದಾರೆ.

ಹೋಬಳಿ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮ್ಯಾಗಡೂರ್ ಗ್ರಾಮದ ನಿವಾಸಿ ಟಿ.ಕೆ.ಸಾಯಿಕುಮಾರ್ ಸಮಗ್ರ ಕೃಷಿಯಲ್ಲಿ ಯಶ ಕಾಣುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ವೃತ್ತಿ ಮತ್ತು ಪದವಿ ಪೂರ್ವ ಶಿಕ್ಷಣ ಪಡೆದ ಬಳಿಕ ಮರಳಿ ಮನೆಗೆ ಬಂದ ಟಿ.ಕೆ.ಸಾಯಿಕುಮಾರ್ ಕೃಷಿಯತ್ತ ಮುಖ ಮಾಡಿದರು. ಕೃಷಿ ವಿಷಯದಲ್ಲಿ ಪ್ರೊಫೆಸರ್ ಆಗಿರುವ ತಮ್ಮ ಸಂಬಂಧಿಯನ್ನು ಕೇರಳದ ತ್ರಿಶೂರ್‌ನಲ್ಲಿ ಭೇಟಿ ಮಾಡಿ ಕೃಷಿ ಕುರಿತು ಅಗತ್ಯ ಮಾಹಿತಿ ಪಡೆದ ಸಾಯಿಕುಮಾರ್ ಕೃಷಿ ಬಗ್ಗೆ ಒಲವು ಹೊಂದಿದರು. ಬಿ.ಇ. ಪದವಿ ಪಡೆದಿದ್ದರೂ ಉದ್ಯೋಗಕ್ಕಾಗಿ ಬೇರೆಡೆಗೆ ತೆರಳದೆ ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುವ ಮೂಲಕ ಅಭ್ಯುದಯ ಕಂಡುಕೊಂಡರು. ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಕಲ್ ಗ್ರಾಮದಲ್ಲಿ 13 ಎಕರೆ ಜಮೀನು ಖರೀದಿಸಿದ ಸಾಯಿಕುಮಾರ್, ಜೋಳ, ಹಲಸು, ಸಿಬ್ಬೆ, ಮಾವು ಸಪೋಟ ಹಾಗೂ ಸೂರ್ಯಕಾಂತಿ ಬೆಳೆ ಬೆಳೆದಿದ್ದಾರೆ.
ಸತತ 38 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಒಂದೇ ಬೆಳೆ ಅಥವಾ ವಾರ್ಷಿಕ ಫಸಲಿನೊಂದಿಗೆ ಅಲ್ಪಕಾಲದ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಯಶಸ್ಸು ಕಂಡಿದ್ದಾರೆ. ಪೂರ್ವಜರಿಂದ ಬಳುವಳಿಯಾಗಿ ಬಂದಿರುವ 25 ಎಕರೆ ಕೃಷಿ ಜಮೀನಿನಲ್ಲಿ ಪ್ರಸ್ತುತ ಕಾಫಿ, ಕರಿಮೆಣಸು, ಮಾವು, ಬಟರ್ ಫ್ರೂಟ್, ನುಗ್ಗೆಕಾಯಿ, ಮಾವಿನಕಾಯಿ, ಶುಂಠಿ ಹಾಗೂ ನಿಂಬೆಹಣ್ಣು ಬೆಳೆದಿದ್ದಾರೆ. ಗುಣಮಟ್ಟದ ಹಣ್ಣುಗಳನ್ನು ಮಾರುಗಟ್ಟೆಗೆ ಒದಗಿಸುವ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಅಲ್ಲದೆ ಬೇಡಿಕೆಗೆ ತಕ್ಕಂತೆ ಅಗತ್ಯತೆಗಳನ್ನು ಪೂರೈಸುವ ಇವರು ಇದೀ ತಮ್ಮದೆ ಆದ ಮಾರುಕಟ್ಟೆಯನ್ನೂ ನಿರ್ಮಿಸಿಕೊಂಡಿದ್ದಾರೆ.
ಕಾರ್ಮಿಕರ ಕೊರತೆ ನಡುವೆಯೂ ಸಾಯಿಕುಮಾರ್ ಬಂಗಾರದ ಮನುಷ್ಯನಂತೆ ಬಂಗಾರದ ಬೆಳೆ ತೆಗೆದಿದ್ದಾರೆ. ಕೃಷಿಯನ್ನು ಕಷ್ಟಪಡದೆ ಇಷ್ಟಪಟ್ಟು ಮಾಡಿದರೆ ಕೃಷಿ ಖುಷಿಯ ಕೆಲಸ ಎನ್ನುತ್ತಾರೆ. ಸಾಮಾನ್ಯವಾಗಿ ಕೃಷಿ ಲಾಭದಾಯಕವಲ್ಲ ಎಂದು ಯುವಜನತೆ ಪಟ್ಟಣ ಸೇರುತ್ತಿರುವ ಇಂತಹ ಸಂದರ್ಭದಲ್ಲಿ ಸಾಯಿಕುಮಾರ್ ಅನುಕರಣೀಯ ವ್ಯಕ್ತಿ ಎಂದರೆ ತಪ್ಪಾಗಲಾರದು.
ಮಾವು, ಬಟರ್ ಫ್ರೂಟ್, ನುಗ್ಗೆಕಾಯಿ, ಮಾವಿನಕಾಯಿ, ಶುಂಠಿ, ನಿಂಬೆಹಣ್ಣು ಸೇರಿದಂತೆ ಕೆಲವು ತರಕಾರಿ ಬೆಳೆಗಳಿಗೆ ಸಗಣಿ ಗೊಬ್ಬರ ಹಾಗೂ ಕಾಫಿ ಹೊಟ್ಟನ್ನು ಹಾಕಲಾಗುತ್ತದೆ. ಇದಕ್ಕಾಗಿ ಅಂದಾಜು ಲೋಡ್‌ಗೆ 5,000 ರೂ. ನಿಂದ 7,000 ರೂ.ವರೆಗೆ ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ ಇದನ್ನು ಹೆಚ್ಚಾಗಿ ಬಳಸುವ ಮೂಲಕ ಭೂಮಿಯ ಫಲವತ್ತತೆಯನ್ನೂ ಕಾಪಾಡಿಕೊಂಡಿದ್ದಾರೆ. ಈ ನಡುವೆ ಕಾರ್ಮಿಕರ ಸಮಸ್ಯೆ ಹೆಚ್ಚಾಗಿರುವುದು ಂದಡೆಯಾದರೆ ಕಾರ್ಮಿರ ವೇತನವೂ ದುಬಾರಿಯಾಗಿರುವುದು ಮತ್ತೊಂದೆಡೆ. ಇಂತಹ ಸಂದರ್ಭದಲ್ಲಿ ತೋಟದಲ್ಲಿ ವೈಜ್ಞಾನಿಕತೆಗೆ ಆದ್ಯತೆ ನೀಡುವ ಮೂಲಕ ಕೃಷಿ ಮಾಡಬೇಕು. ಕೆಲವೊಮ್ಮೆ ಕೃಷಿ ಆರ್ಥಿಕವಾಗಿ ನಷ್ಟ ಉಂಟು ಮಾಡಿದರೂ ಛಲ ಬಿಡದೆ ಇತರ ಕೃಷಿಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುತ್ತಾರೆ ಸಾಯಿಕುಮಾರ್.
ಭೂಮಿ ಮತ್ತು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಲಾಗಿದ್ದು, ಐಟಿಬಿಟಿ ಉದ್ಯೋಗಸ್ಥರಿಗಿಂತಲೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಐಟಿಬಿಟಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಟೆಕ್ಕಿಗಳ ಒತ್ತಡದ ಬುದುಕಿಗಿಂತಲೂ ಕೃಷಿ ಬದುಕು ಶ್ರಮಭರಿತ ಆಗಿದ್ದರೂ ಕೂಡ ಆರೋಗ್ಯ ಪೂರ್ಣವಾದದ್ದು ಎಂಬುದನ್ನು ನಿರೂಪಿಸಿದ್ದಾರೆ. ಇವರ ಕೃಷಿ ಕಾರ್ಯಕ್ಕೆ ಪತ್ನಿ ಹಾಗೂ ಇಬ್ಬರು ಪುತ್ರರು ಸಾಥ್ ನೀಡುತ್ತಿದ್ದಾರೆ.
ಕೃಷಿಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ಸಾಯಿಕುಮಾರ್ ತಮ್ಮನ್ನು ತೊಡಗಿಸಿಕೊಂಡಿದ್ದು, ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಗ್ರಾಮದಲ್ಲಿ ಆಯೋಜಿಸುವ ಮೂಲಕ ಕೃಷಿಕರಿಗೆ ನೆರವಾಗುತ್ತಿದ್ದಾರೆ. ಬೆಳೆ ನಷ್ಟ, ಕಾಲ ಕಾಲಕ್ಕೆ ನೀಡಬೇಕಾದ ಗೊಬ್ಬರ, ಮಣ್ಣಿನ ಫಲವತ್ತತೆ, ತೇವಾಂಶ ಕುರಿತು ಮಾಹಿತಿಯನ್ನು ಕೃಷಿಕರಿಗೆ ನೀಡುತ್ತಿದ್ದಾರೆ.
ಒಟ್ಟು 38 ಎಕರೆ ಜಮೀನಿದ್ದು ಜೋಳ, ಹಲಸು, ಸೀಬೆ, ಮಾವು, ಸಪೋಟ, ಬಟರ್ ಫ್ರೂಟ್, ನುಗ್ಗೆಕಾಯಿ, ಮಾವಿನಕಾಯಿ, ಶುಂಠಿ ಹಾಗೂ ನಿಂಬೆಹಣ್ಣು ಬೆಳೆಯಲಾಗಿದೆ. ಹವಾಮಾನ ವೈಪರೀತ್ಯದಿಂದ ಮಳೆ ಏರುಪೇರಾಗದೆ ಕಾಲ ಕಾಲಕ್ಕೆ ಮಳೆ ದೊರೆತರೆ ವಾರ್ಷಿಕವಾಗಿ 25ರಿಂದ 30 ಲಕ್ಷ ರೂ. ಆದಾಯ ಗಳಿಸಬಹುದು. ಇದು ನನ್ನ ಜೀವನದಲ್ಲಿ ಸಾಧ್ಯವಾಗಿದ್ದು, ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದೇನೆ.
ಟಿ.ಕೆ.ಸಾಯಿಕುಮಾರ್ ಕೃಷಿಕ
ಸಾಮಾನ್ಯವಾಗಿ ಒಂದೇ ಬೆಳೆ ಅಥವಾ ವಾರ್ಷಿಕ ಫಸಲನ್ನು ನಂಬಿದ ಸಂದರ್ಭದಲ್ಲಿ ಲಾಭ ಹಾಗೂ ನಷ್ಟವೆಂಬ ತೂಗುಯ್ಯಲೆಯಲ್ಲಿ ಕೃಷಿಕ ಇರಬೇಕಾಗುತ್ತದೆ. ಹಾಗಾಗಿ ಅಲ್ಪಕಾಲದ ಬೆಳೆಗಳನ್ನು ಬೆಳೆಯುವುದು ಉತ್ತಮ. ಇದಕ್ಕೆ ಸ್ಪಷ್ಟ ಉದಾಹರಣೆ ಸಾಯಿಕುಮಾರ್. ವೈಯಕ್ತಿಕ ಬೆಳವಣಿಗೆಗೆ ಸೀಮಿತಗೊಳ್ಳದೆ ಇತರ ಕೃಷಿಕರಿಗೂ ಸಹಕಾರಿಯಾಗುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದ್ದಾರೆ. ಕೃಷಿಯಿಂದ ಬಂದ ಲಾಭಾಂಶವನ್ನು ಶಿಕ್ಷಣ, ಆರೋಗ್ಯ, ಕ್ರೀಡಾ ಚಟುವಟಿಕೆ, ಸಾಮಾಜಿಕ ಚಟುವಟಿಕೆಗೆ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಆರ್.ಆರ್.ಮೋಹನ್,
ಕಂಬಿಬಾಣೆ ಗ್ರಾ.ಪಂ.ಸದಸ್ಯ