ದುಡಿಯುವ ಭರದಲ್ಲಿ ವಿಮೆ ಕಡೆಗಣಿಸಬೇಡಿ!

# ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವಾರ್ಷಿಕ 18 ಲಕ್ಷ ರೂ. ಆದಾಯ ಪಡೆಯುತ್ತಿದ್ದೇನೆ. ಮೂವರು ಮಕ್ಕಳು ಮತ್ತು ಪಾಲಕರು ನನ್ನ ಮೇಲೆ ಅವಲಂಬಿತರು. ಪತ್ನಿ ಸಣ್ಣ ಉದ್ಯೋಗದಲ್ಲಿದ್ದಾರೆ. 40 ಲಕ್ಷ ಮೊತ್ತದ ಇನ್ಶೂರೆನ್ಸ್ ಕವರೇಜ್ ಹೊಂದಿದ್ದೇನೆ. ನಾನು ಲೈಫ್ ಇನ್ಶೂರೆನ್ಸ್ ಕವರೇಜ್ ಪ್ರಮಾಣ ಹೆಚ್ಚಿಸಬೇಕೆ?

| ಅವಿನಾಶ್ ಶಿವಮೊಗ್ಗ

ನಿಮ್ಮ ಆದಾಯಕ್ಕೆ ಹೋಲಿಕೆ ಮಾಡಿ ನೋಡಿದಾಗ ನೀವು ಬಹಳ ಕಡಿಮೆ ಇನ್ಶೂರೆನ್ಸ್ ಕವರೇಜ್ ಹೊಂದಿದ್ದೀರಿ ಎಂದು ನಿಚ್ಚಳವಾಗಿ ಹೇಳಬಹುದು. ವಾರ್ಷಿಕ ಆದಾಯದ ಹತ್ತು ಪಟ್ಟು ಇನ್ಶೂರೆನ್ಸ್ ಕವರೇಜ್ ಹೊಂದಿರಬೇಕು ಎಂಬುದು ಮಾನದಂಡ. ನಿಮ್ಮ ವಿಚಾರಕ್ಕೆ ಬರುವುದಾದರೆ ನೀವು ಇನ್ನೂ ಹೆಚ್ಚು ಇನ್ಶೂರೆನ್ಸ್ ಕವರೇಜ್ ಹೊಂದುವುದು ಅಗತ್ಯ. ಸಾಕಷ್ಟು ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಇರುವುದರಿಂದ ಮತ್ತು ಅವಲಂಬಿತರು ಜಾಸ್ತಿ ಇರುವುದರಿಂದ ನೀವು ಕನಿಷ್ಠ 2 ರಿಂದ 2.5 ಕೋಟಿ ರೂಪಾಯಿ ಇನ್ಶೂರೆನ್ಸ್ ಕವರೇಜ್ ಹೊಂದುವುದು ಅಗತ್ಯ ಎನ್ನುವುದು ನನ್ನ ಸಲಹೆ. ನಿಮ್ಮ ಪತ್ನಿಯ ಹೆಸರಿನಲ್ಲೂ ಕೂಡ 50 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಟಮ್ರ್ ಇನ್ಶೂರೆನ್ಸ್ ಮಾಡಿಸುವುದು ಉತ್ತಮ. ನೆನಪಿನಲ್ಲಿಡಿ, ಇನ್ಶೂರೆನ್ಸ್ ನಿಮ್ಮನ್ನು ಶ್ರೀಮಂತರನ್ನಾಗಿಸುವುದಿಲ್ಲ ನಿಜ. ಆದರೆ ನಾವು ಬಡವರಾಗದಂತೆ ತಡೆಯುವ ಶಕ್ತಿ ಇನ್ಶೂರೆನ್ಸ್​ಗೆ ಇದೆ.

# ಐಟಿ ಕಂಪನಿಯಲ್ಲಿ ಕೆಲಸದಲ್ಲಿದ್ದೇನೆ. ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವಾಗ ಯಾವ ರೀತಿ ಶುಲ್ಕಗಳು ಅನ್ವಯಿಸುತ್ತವೆ? ಮಾಹಿತಿ ನೀಡಿ.

| ಮೋಹನ್​ಕುಮಾರ್ ಬೆಂಗಳೂರು

ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವಾಗ ಎಂಟ್ರಿ ಲೋಡ್, ಎಕ್ಸಿಟ್ ಲೋಡ್ ಮತ್ತು ವ್ಯವಹಾರ ನಿರ್ವಹಣಾ ಶುಲ್ಕಗಳು ಅನ್ವಯಿಸುತ್ತವೆ. ಎಂಟ್ರಿ ಲೋಡ್ ಅಂದ್ರೆ ಮ್ಯೂಚುವಲ್ ಫಂಡ್ ಆರಂಭಿಸುವಾಗ ಅನ್ವಯಿಸುವ ಶುಲ್ಕ. ಸಾಮಾನ್ಯವಾಗಿ ಎಂಟ್ರಿ ಲೋಡ್ ಶುಲ್ಕವನ್ನು ನೆಟ್ ಅಸೆಟ್ ವ್ಯಾಲ್ಯೂ (ಎನ್​ಎವಿ)ನಲ್ಲಿ ಮುರಿದುಕೊಳ್ಳಲಾಗುತ್ತದೆ. ಸೆಕ್ಯೂರಿಟೀಸ್ ಆಂಡ್ ಎಕ್ಸ್​ಚೇಂಚ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಎಂಟ್ರಿ ಲೋಡ್ ಶುಲ್ಕವನ್ನು ಕೈಬಿಡುವಂತೆ ಮ್ಯೂಚುವಲ್ ಫಂಡ್ ಕಂಪನಿಗಳಿಗೆ ಸೂಚಿಸಿದೆ. ಇನ್ನು ಎಕ್ಸಿಟ್ ಲೋಡ್ ಅಂದ್ರೆ ಮ್ಯೂಚುವಲ್ ಫಂಡ್​ನಿಂದ ಅವಧಿಗೆ ಮುನ್ನ ಹೊರಬರುವಾಗ ವಿಧಿಸಲಾಗುವ ಶುಲ್ಕ. ಈ ಶುಲ್ಕ ವಿಧಿಸುವ ವಿಚಾರದಲ್ಲಿ ಬೇರೆ ಬೇರೆ ಕಂಪನಿಗಳು ವಿಭಿನ್ನ ಮಾನದಂಡಗಳನ್ನು ಅನುಸರಿಸುತ್ತವೆ. ಅಸೆಟ್ ಮ್ಯಾನೇಜ್​ವೆುಂಟ್ ಕಂಪನಿಗಳು ಮ್ಯೂಚುವಲ್ ಫಂಡ್ ಆರಂಭಿಸುವಾಗ ಒಂದು ಬಾರಿ ವ್ಯವಹಾರ ನಿರ್ವಹಣಾ ಶುಲ್ಕವನ್ನು ಹೇರುತ್ತವೆ. ಇದಲ್ಲದೆ ಪೋರ್ಟ್ ಫೋಲಿಯೋ ನಿರ್ವಹಣೆಗಾಗಿ ಕಾಲ ಕಾಲಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ. ಮ್ಯೂಚುವಲ್ ಫಂಡ್ ನಿರ್ವಹಣೆಗೆ ಆಗುವ ಒಟ್ಟಾರೆ ವೆಚ್ಚವನ್ನು ಟೋಟಲ್ ಎಕ್ಸ್​ಪೆನ್ಸ್ ರೇಷಿಯೋ (ಒಟ್ಟಾರೆ ವೆಚ್ಚ ಅನುಪಾತ) ಆಧಾರದಲ್ಲಿ ಪರಿಗಣಿಸಲಾಗುತ್ತದೆ.

# ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಸಿನೆಸ್ ಮಾಡಲು ವೈಯಕ್ತಿಕ ಸಾಲ ತೆಗೆದುಕೊಳ್ಳುವ ಆಲೋಚನೆ ಇದೆ. ವೈಯಕ್ತಿಕ ಸಾಲ (ಪರ್ಸನಲ್ ಲೋನ್) ತೆಗೆದುಕೊಳ್ಳುವ ಮುನ್ನ ಪರಿಗಣಿಸಬೇಕಾದ ಅಂಶಗಳೇನು?

| ನಿತಿನ್ ರಾವ್ ಧಾರವಾಡ

ಬಿಸಿನೆಸ್ ಮಾಡಲು ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಸೂಕ್ತ ನಿರ್ಧಾರವಲ್ಲ. ವೈಯಕ್ತಿಕ ಸಾಲದ ಬಡ್ಡಿ ದರ ಶೇ. 12ರಿಂದ ಶೇ. 18 ರವರೆಗೂ ಇರುತ್ತದೆ. ತುರ್ತು ಅಗತ್ಯಗಳಿಗೆ ಮಾತ್ರ ವೈಯಕ್ತಿಕ ಸಾಲ ಪಡೆದುಕೊಳ್ಳಬೇಕು. ಸೂಕ್ತ ಸಂದರ್ಭದಲ್ಲಿ ವೈಯಕ್ತಿಕ ಸಾಲ ಪಡೆಯುವಾಗ ವಿವಿಧ ಬ್ಯಾಂಕ್​ಗಳ ಬಡ್ಡಿ ದರವನ್ನು ಅಳೆದು ತೂಗಿ ಕಡಿಮೆ ಬಡ್ಡಿದರಕ್ಕೆ ಸಾಲ ನೀಡುವ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ. ಬ್ಯಾಂಕ್ ಆಯ್ಕೆ ಬಳಿಕ ಮಾಸಿಕ ಕಂತು ಹೊರೆಯಾಗದಿಂತೆ ಬಡ್ಡಿದರವೂ ತೀರಾ ಹೆಚ್ಚಾಗದಂತೆ ಇಎಂಐ ನಿರ್ಧರಿಸಿಕೊಳ್ಳಿ. ಪರ್ಸನಲ್ ಲೋನ್ ನೀಡುವಾಗ ಮರೆಮಾಚಲಾಗಿರುವ (ಹಿಡನ್ ಚಾರ್ಜಸ್ ) ಶುಲ್ಕಗಳ ಬಗ್ಗೆ ನಿಖರ ಮಾಹಿತಿ ತಿಳಿಯಲು ಪೂರಕ ದಾಖಲೆಗಳನ್ನು ಓದಿಕೊಳ್ಳಿ.

# ನನಗೆ ಈಗ 60 ವರ್ಷ. ಪತ್ನಿ, ಕಳೆದ ವರ್ಷ ನಮ್ಮಿಬ್ಬರು ಮಕ್ಕಳಿಗೂ ಸೇರಿದಂತೆ ಖ್ಯಾತ ಕಂಪನಿಯಿಂದ 5 ಲಕ್ಷ ರೂ. ಕವರೇಜ್ ಇರುವ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಈಗ ಮಗಳು ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದು ಅಲ್ಲಿ ನನ್ನ ಮಗನಿಗೆ ಹೊರತುಪಡಿಸಿ ಉಳಿದ ಎಲ್ಲರಿಗೂ ಇನ್ಶೂರೆನ್ಸ್ ಕವರೇಜ್ ಇದೆ. ಹೀಗಿರುವಾಗ ಈಗಾಗಲೇ ನಾವು ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ರಿನಿವಲ್ ಮಾಡಬೇಕೆ? ಸೂಕ್ತ ಸಲಹೆ ನೀಡಿ.

| ರಾಜಶೇಖರ ಮೂರ್ತಿ ಮಡಿಕೇರಿ

ಖಂಡಿತವಾಗಿಯೂ ನೀವು ಮತ್ತು ನಿಮ್ಮ ಕುಟುಂಬದವರು ಸೇರಿ ಹೊಂದಿರುವ 5 ಲಕ್ಷ ರೂ. ಕವರೇಜ್ ಇರುವ ಹೆಲ್ತ್ ಇನ್ಶೂರೆನ್ಸ್ ರಿನಿವಲ್ ಮಾಡಿಸಬೇಕು. ನನ್ನ ತಿಳಿವಳಿಕೆಯ ಪ್ರಕಾರ ನಿಮ್ಮ ಮಗಳ ಕಂಪನಿಯಲ್ಲಿ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಅದರಿಂದ ನಿಮಗೆ ಅನುಕೂಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ನಿಮ್ಮ ಮಗಳ ಕಂಪನಿ ನೀಡಿರುವ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಜತೆ ಪ್ರತ್ಯೇಕವಾಗಿ ಈಗಾಗಲೇ ನೀವು ಹೊಂದಿರುವ ಆರೋಗ್ಯ ವಿಮೆಯನ್ನು ರಿನಿವಲ್ ಮಾಡಿಸುವುದು ಅಗತ್ಯ. ಕಾರ್ಪೆರೇಟ್ ಕಂಪನಿಗಳಿಗೆ ನೀಡುವ ಹೆಲ್ತ್ ಇನ್ಶೂರೆನ್ಸ್ ಕವರೇಜ್ ವ್ಯಾಪ್ತಿಗೆ ಒಳಪಡದ ಅನೇಕ ವೆಚ್ಚಗಳನ್ನು ಭರಿಸಲು ನಿಮ್ಮ ಕುಟುಂಬ ಪಡೆದಿರುವ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಸಹಕಾರಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದೆರಡು ವರ್ಷಕ್ಕೆ ಉದ್ಯೋಗ ಬದಲಿಸುವುದು ಸರ್ವೇ ಸಾಮಾನ್ಯ. ಗುಂಪು ವಿಮೆ ಒದಗಿಸಿರುವ ಕಂಪನಿ ತೊರೆದು ಬೇರೆ ಕಂಪನಿ ಸೇರುವ ಸಂದರ್ಭದಲ್ಲಿ ನಿಮ್ಮ ಮಗಳು ಮತ್ತು ನಿಮ್ಮ ಕುಟುಂಬದವರು ಆರೋಗ್ಯ ವಿಮೆಯ ರಕ್ಷಣೆಯಿಂದ ವಂಚಿತರಾಗಬಹುದು. ಆಗ ವೈಯಕ್ತಿಕವಾಗಿ ಮಾಡಿಸಿರುವ ಆರೋಗ್ಯ ವಿಮೆ ನಿಮ್ಮ ಮತ್ತು ಕುಟುಂಬದ ನೆರವಿಗೆ ಬರುತ್ತದೆ. ಇನ್ಶೂರೆನ್ಸ್ ಕಂತಿನ ಮೊತ್ತ ಕಡಿತಗೊಳಿಸಲು ಕಾರ್ಪೆರೇಟ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್​ಗಳಲ್ಲಿ ಇತ್ತೀಚೆಗೆ ಕೋ-ಪೇ (ಇಟಟಚಢ) ಎಂಬ ನಿಯಮ ರೂಢಿಯಲ್ಲಿದೆ. ಇದರಂತೆ, ಪೂರ್ವ ನಿರ್ಧಾರಿತ ಪ್ರಮಾಣಕ್ಕೆ ಅನುಗುಣವಾಗಿ ಚಿಕಿತ್ಸಾ ವೆಚ್ಚವನ್ನು ನೌಕರ (ಪಾಲಿಸಿದಾರ) ಹಾಗೂ ಕಂಪನಿಗಳು ಹಂಚಿಕೊಳ್ಳಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಇನ್ಶೂರೆನ್ಸ್ ಹೊಂದಿರುವ ನೌಕರ ಆಸ್ಪತ್ರೆ ಖರ್ಚಿನ ಶೇ. 15ರಿಂದ 30ರಷ್ಟು ಮೊತ್ತವನ್ನು ತನ್ನ ಜೇಬಿನಿಂದ ಪಾವತಿಸಬೇಕಾಗುತ್ತದೆ. ಆಗ ವೈಯಕ್ತಿಕ ಆರೋಗ್ಯ ವಿಮೆ ನೆರವಿಗೆ ಬರುತ್ತದೆ. ಪ್ರತ್ಯೇಕ ವಿಮೆ ಅತ್ಯಗತ್ಯ ಎನ್ನುವುದಕ್ಕೆ ಇನ್ನೊಂದು ಪ್ರಮುಖ ಕಾರಣ ಹೇಳ್ತೀನಿ. ವಯಸ್ಸಾದಂತೆ ಆರೋಗ್ಯ ವಿಮೆ ಕಂಪನಿಗಳು ಕೆಲವರಿಗೆ ಇನ್ಶೂರೆನ್ಸ್ ಕವರೇಜ್ ಕೊಡಲು ಮುಂದೆ ಬರುವುದಿಲ್ಲ. ಒಂದೊಮ್ಮೆ ಮುಂದೆ ಬಂದರೂ ಪ್ರೀಮಿಯಂ ಮೊತ್ತ ಜಾಸ್ತಿ ಇರುತ್ತದೆ. ನಿಯಮಿತವಾಗಿ ಒಂದು ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದರೆ ಇಂತಹ ಸಮಸ್ಯೆ ಎದುರಾಗುವುದಿಲ್ಲ.

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ – ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.

ಪ್ರಶ್ನೆ ಕಳಿಸಬೇಕಾದ ಇಮೇಲ್:  [email protected]