ಶಿವಮೊಗ್ಗ: ಅನಾರೋಗ್ಯದಿಂದ ಮೃತಪಟ್ಟ ಕೆಎಸ್‌ಐಎಸ್‌ಎಫ್ ನೌಕರನ ಕುಟುಂಬದ ಸದಸ್ಯರಿಗೆ ಬ್ಯಾಂಕ್ ಆಫ್ ಬರೋಡ ವೇತನ ಪ್ಯಾಕೇಜ್‌ನಡಿ 10 ಲಕ್ಷ ರೂ. ವಿಮೆ ಪರಿಹಾರದ ಚೆಕ್ ನೀಡಲಾಯಿತು.
ಪೊಲೀಸ್ ಇಲಾಖೆಯಡಿ ಕಾರ್ಯನಿರ್ವಹಿಸುವ ಶಿವಮೊಗ್ಗ ಕೆಎಸ್‌ಐಎಸ್‌ಎಫ್ (ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಮಾದಪ್ಪ ಯಾರಾಂಡೊಲಿ ಎಂಬುವವರು ಕಳೆದ ಜ.9ರಂದು ಮೃತಪಟ್ಟಿದ್ದರು. ಬ್ಯಾಂಕ್ ಆಫ್ ಬರೋಡದ ಶಿವಮೊಗ್ಗ ಬಸ್ ನಿಲ್ದಾಣದ ಶಾಖೆಯಲ್ಲಿ ವೇತನದ ಖಾತೆ ಹೊಂದಿದ್ದರು.
ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ 10 ಲಕ್ಷ ರೂ. ಪರಿಹಾರದ ಚೆಕ್ಕನ್ನು ಸಾಗರ್ ಸಹೋದರಿ ಭಾರತಿ ಒನಜೋಲ್ ಅವರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಮಾತನಾಡಿದ ಬ್ಯಾಂಕ್‌ನ ಕ್ಷೇತ್ರೀಯ ಪ್ರಬಂಧಕ ಪಂಕಜ್‌ಕುಮಾರ್ ಸುಮನ್, ಎಲ್ಲ ಸರ್ಕಾರಿ ನೌಕರರು, ಗುತ್ತಿಗೆ ನೌಕರರು, ಖಾಸಗಿ ಶಾಲೆ, ಕಾರ್ಖಾನೆ, ಸಾಫ್ಟ್‌ವೇರ್ ಕಂಪನಿಗಳಲ್ಲಿ ವೇತನ ಪಡೆಯುತ್ತಿರುವ ಯಾವುದೇ ದರ್ಜೆಯ ನೌಕರರು ಉಚಿತವಾಗಿ ಕನಿಷ್ಠ 40 ಲಕ್ಷ ರೂ.ನಿಂದ ಗರಿಷ್ಠ 1.20 ಕೋಟಿ ರೂ.ವರೆಗೆ ಅಪಘಾತ ವಿಮೆ ಪಡೆಯಬಹುದು ಎಂದು ತಿಳಿಸಿದರು.
ಬ್ಯಾಂಕ್ ಆಫ್ ಬರೋಡದೊಂದಿಗೆ ಭಾರತೀಯ ಸೇನೆ, ನೌಕಾ ದಳ, ವಾಯುದಳ, ಪೊಲೀಸ್ ಇಲಾಖೆ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್, ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ರೈಲ್ವೆ, ಹಿಮಾಚಲ ಪ್ರದೇಶ, ಗುಜರಾತ್ ಪೊಲೀಸ್ ಇಲಾಖೆ, ಉತ್ತರಾಖಂಡ ರಾಜ್ಯ ಸರ್ಕಾರಿ ಇಲಾಖೆ ವೇತನ ಒಪ್ಪಂದ ಮಾಡಿಕೊಂಡಿವೆ ಎಂದರು.
ಶಿವಮೊಗ್ಗ ಕೆಎಸ್‌ಐಎಸ್‌ಎಫ್ ಕಮಾಂಡೆಂಟ್ ಶಿವಪ್ರಕಾಶ್, ಬ್ಯಾಂಕ್‌ನ ಕ್ಷೇತ್ರೀಯ ಉಪಪ್ರಬಂಧಕ ಮಂಜುನಾಥ್ ಎಸ್. ಅಣಜಿ, ಮುಖ್ಯಪ್ರಬಂಧಕ ಎಸ್.ಯೋಗೇಶ್, ಶಾಖಾ ಪ್ರಬಂಧಕ ಧರ್ಮಲಿಂಗಂ ಇತರರಿದ್ದರು.