ಬತ್ತುತ್ತಿದ್ದ ಬಾವಿಯಲ್ಲಿ ದಿಢೀರ್ ಉಕ್ಕಿದ ನೀರು!

ಮೂಡುಬಿದಿರೆ: ಸುತ್ತಮುತ್ತಲಿನ ಬಾವಿಗಳೆಲ್ಲ ಬರಡಾಗುತ್ತಿದ್ದರೆ ಪಾಲಡ್ಕ ಗ್ರಾಮದ ಬಾವಿಯೊಂದರಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ದಿಢೀರ್ ಏರಿಕೆಯಾಗಿರುವ ಪ್ರಕೃತಿಯ ಈ ವಿಸ್ಮಯ ಕೌತುಕ ಮೂಡಿಸಿದೆ.

ಪಾಲಡ್ಕ ಸಂತ ಇಗ್ನೇಶಿಯಸ್ ಚರ್ಚ್ ಹಾಗೂ ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ಸಮೀಪವಿರುವ ಸತೂರ್ನಿ – ವೀಣಾ ಡಿಸಿಲ್ವ ದಂಪತಿ ಎರಡು ವರ್ಷ ಹಿಂದೆ 50 ಅಡಿ ಆಳದ ಬಾವಿ ತೋಡಿಸಿದ್ದರು. ಬಿಸಿಲಿನ ಬೇಗೆಗೆ ನೀರಿನ ಮಟ್ಟ ತೀರಾ ಕುಸಿಯುವುದರಲ್ಲಿತ್ತು. ಕೇವಲ ಮೂರು ರಿಂಗಿನ ಮಟ್ಟದಲ್ಲಿದ್ದ ನೀರು ಬುಧವಾರ ಮುಂಜಾನೆಯಿಂದ ಏಕಾಏಕಿ 19 ಅಡಿಗಳಷ್ಟು ಏರಿಕೆಯಾಗಿದೆ. ಗುರುವಾರ ಕೂಡ ನೀರು ಅಷ್ಟೇ ಮಟ್ಟದಲ್ಲಿದೆ. ಪರಿಸರದ ಇತರ ಬಾವಿಗಳಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದ್ದು, ಈ ಬಾವಿಯಲ್ಲಿ ಮಾತ್ರ ನೀರು ಹೆಚ್ಚಿರುವುದು ಅಚ್ಚರಿ. ಸ್ಥಳೀಯರು ಕುತೂಹಲದಿಂದ ನೋಡಲು ಬರುತ್ತಿದ್ದಾರೆ.

ಅಣೆಕಟ್ಟು ಪ್ರಭಾವ?: ಪುತ್ತಿಗೆ ಕಂಚಿಬೈಲು ಎರುಗುಂಡಿ ಎಂಬಲ್ಲಿ, ಪಾಲಡ್ಕ ಚರ್ಚ್‌ನ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಗ್ರಾಮಸ್ಥರ ನೆರವಿನಿಂದ ಕಂಚಿಬೈಲು ಅಣೆಕಟ್ಟು ಕೆಲಸ ಎರಡು ವರ್ಷ ಹಿಂದೆ ಪ್ರಾರಂಭಗೊಂಡಿತ್ತು. ಅಂದಿನ ಶಾಸಕ ಅಭಯಚಂದ್ರ ಜೈನ್ ನೀಡಿದ ಒಂದು ಕೋಟಿ ರೂ. ಅನುದಾನದಲ್ಲಿ ಅಣೆಕಟ್ಟು ನಿರ್ಮಾಣಗೊಂಡು ಜನವರಿಯಲ್ಲಿ ಈಗಿನ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದ್ದರು. ಪುತ್ತಿಗೆ, ಕಲ್ಲಮುಂಡ್ಕೂರು, ಪಾಲಡ್ಕ ಗ್ರಾಮದ ಕೃಷಿಕರ ನೀರಿನ ಕೊರತೆಯನ್ನು ನೀಗಿಸಲು ನಿರ್ಮಿಸಲಾದ ಅಣೆಕಟ್ಟುವಿನಿಂದಾಗಿ ತಮ್ಮ ಮನೆಯವ ಬಾವಿಯ ನೀರು ಏರಿಕೆಯಾಗಿರಬಹುದು ಎನ್ನುವುದು ಸತೂರ್ನಿ ಕುಟುಂಬದ ಸದಸ್ಯರ ಅಭಿಪ್ರಾಯ.

ನೀರು ಹಂಚುವ ಕಾಯಕ: ಸತೂರ್ನಿ ಡಿಸಿಲ್ವ ವಿದೇಶದಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗಷ್ಟೆ ಊರಿಗೆ ವಾಪಸ್ಸಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ದುಡಿದ ಹಣದ ಒಂದು ಪಾಲನ್ನು ಊರಿನ ನಿಶ್ಶಕ್ತ ಕುಟುಂಬಗಳಿಗೆ ದಾನ ಮಾಡುತ್ತಾರೆ. ತಮ್ಮ ಬಾವಿ ನೀರನ್ನೂ ಸ್ಥಳೀಯರಿಗೆ ಹಂಚುತ್ತಿದ್ದಾರೆ. ಈ ದಾನದ ಪುಣ್ಯದ ಫಲವಾಗಿ ದೇವರು ನೀರು ಹರಿಸಿದ್ದಾನೆ ಎನ್ನುವುದು ಕುಟುಂಬದ ಸದಸ್ಯರ ನಂಬಿಕೆ. ಈಗ ಬಾವಿ ಸಮೀಪವೇ ನೀರಿನ ದೊಡ್ಡಿ ನಿರ್ಮಿಸಿ ಜಾನುವಾರು ಮತ್ತು ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವ ಉದ್ದೇಶವಿದೆ ಎಂದು ಸತೂರ್ನಿ ಡಿಸಿಲ್ವ ಅವರ ಸಹೋದರ ಅಮಿತ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.