ಹನೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ತಹಸೀಲ್ದಾರ್ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಇದೇ ಪ್ರಥಮ ಬಾರಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಅರ್ಚಕರು ಮಂತ್ರ ಘೋಷದೊಂದಿಗೆ ಪೂಜೆ ನೆರವೇರಿಸಿದರು. ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಗಣೇಶ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು. ಪ್ರಸಾದ ಹಾಗೂ ಸಿಹಿ ವಿತರಿಸಲಾಯಿತು.
ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಮಾತನಾಡಿ, ದೇಶದೆಲ್ಲೆಡೆ ಗೌರಿ- ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಸಂಪ್ರದಾಯದಂತೆ ಪೂಜೆ ನೆರವೇರಿಸಿ ವಿಸರ್ಜಿಸಲಾಗುತ್ತದೆ. ತಾಲೂಕಿಗೂ ಒಳಿತಾಗಲಿ ಎನ್ನುವ ಸಲುವಾಗಿ ಇದೇ ಮೊದಲ ಬಾರಿಗೆ ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸೋಮವಾರ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.
ಆರ್‌ಐಗಳಾದ ಶಿವಕುಮಾರ್, ಶೇಷಣ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ವಿನೋದ್, ಕಾರ್ತಿಕ್, ಸಿಬ್ಬಂದಿ ಸಿದ್ದರಾಜು, ಶೇಖರಾಜು, ಪ್ರದೀಪ್, ಸೋಮಣ್ಣ, ಮುಖಂಡ ಸೋಮಶೇಖರ ಆರಾಧ್ಯ ಇತರರು ಇದ್ದರು.