ವಂಚಕನ ಪತ್ನಿಗೆ ಚಿನ್ನ ಒಪ್ಪಿಸಿದ್ದ ಇನ್​ಸ್ಪೆಕ್ಟರ್

ಬೆಂಗಳೂರು: ನಕಲಿ ಕ್ರೆಡಿಟ್ ಕಾರ್ಡ್ ಬಳಸಿ ವ್ಯಕ್ತಿಯೊಬ್ಬ ಖರೀದಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕೋರ್ಟ್ ಮೂಲಕವೇ ಆತನ ಪತ್ನಿಗೆ ಕೊಡಿಸಿದ್ದ ಪೊಲೀಸ್ ಇನ್​ಸ್ಪೆಕ್ಟರ್​ನ ವಂಚನೆಯನ್ನು ಬಯಲಿಗೆಳೆದಿರುವ ಹೈಕೋರ್ಟ್, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದೆ.

ಪ್ರಕರಣದ ಸಂಬಂಧ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ಖುದ್ದಾಗಿ ತನಿಖೆ ನಡೆಸಬೇಕು. ಇಲ್ಲವೇ ಅವರ ಸಕ್ಷಮ ಅಧಿಕಾರಿಗೆ ತನಿಖೆ ಜವಾಬ್ದಾರಿ ನೀಡಬೇಕು ಎಂದು ಸೂಚಿಸಿರುವ ಹೈಕೋರ್ಟ್, ಚಿನ್ನಾಭರಣಗಳನ್ನು ಕಳ್ಳನ ಪತ್ನಿಯಿಂದ ವಶಕ್ಕೆ ಪಡೆಯಬೇಕು ಎಂದು ಆದೇಶಿಸಿದೆ.

ಅಲ್ಲದೆ, ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮೇರೆಗೆ ಚಿನ್ನಾಭರಣಗಳನ್ನು ಪಡೆದ ಕಿರಣ್​ಕುಮಾರ್ ಎಂಬುವರಿಂದ ಹಿಂಪಡೆದು ತನಿಖೆ ನಡೆಸಿ, ಸಮಗ್ರ ತನಿಖಾ ವರದಿಯನ್ನು ಆ.31ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿದೆ.

ಚಿನ್ನ ಅಡವಿಟ್ಟಿದ್ದ ಆರೋಪಿ: 2011ರ ಆ.28ರಂದು ಜಯಕುಮಾರ್ ಎಂಬಾತನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸಿದ್ದ ಅಂದಿನ ಪೊಲೀಸ್ ಇನ್​ಸ್ಪೆಕ್ಟರ್ ನಂಜುಂಡೇಗೌಡ, ಆರೋಪಿ ಹೇಳಿಕೆ ಆಧರಿಸಿ ಮುತ್ತೂಟ್ ಫಿನ್ ಕಾರ್ಪ್​ನ ರಾಜಾಜಿನಗರ ಶಾಖೆಯಲ್ಲಿ ಅಡವಿಟ್ಟಿದ್ದ ಒಟ್ಟು 4,426 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದರು. ಸೆ.5ರಂದು ಮ್ಯಾಜಿಸ್ಟ್ರೇಟ್ ಕೊರ್ಟ್​ಗೆ ಅರ್ಜಿ ಸಲ್ಲಿಸಿದ್ದ ಮುತ್ತೂಟ್ ಕಂಪನಿ, ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಜಯಕುಮಾರ್ ಹಾಗೂ ಮೇಘರಾಜ್ ಎಂಬುವರು ನಮ್ಮಲ್ಲಿ ಅಡವಿಟ್ಟು ಸಾಲ ಪಡೆದಿದ್ದಾರೆ. ಹೀಗಾಗಿ ಅವುಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸಲು ಕೋರಿದ್ದರು. ಅದಕ್ಕೆ ಆಕ್ಷೇಪಿದ್ದ ನಂಜುಂಡೇಗೌಡ, ತನಿಖೆಗೆ ಅಗತ್ಯವಿರುವ ಕಾರಣ ಚಿನ್ನಾಭರಣ ನೀಡಬಾರದು ಎಂದು ಕೋರಿದ್ದರು. ಇದರಿಂದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು.

ಆರೋಪಿ ಪತ್ನಿಯಿಂದ ಅರ್ಜಿ: 2012ರ ಫೆ.13ರಂದು ಪ್ರಕರಣದ ಮೊದಲನೇ ಆರೋಪಿ ಜಯಕುಮಾರ್ ಪತ್ನಿ ಹೆಪ್ಸಿಬಾ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಅರ್ಜಿ ಸಲ್ಲಿಸಿ, ನಂಜುಂಡೇಗೌಡ ತಮ್ಮಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಹಿಂದಿರುಗಿಸುವಂತೆ ಕೋರಿದ್ದರು. ಆ ಅರ್ಜಿಗೆ ನಂಜುಂಡೇಗೌಡ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಹೀಗಾಗಿ, ನ್ಯಾಯಾಲಯ 30 ಲಕ್ಷ ರೂ. ಮೌಲ್ಯದ ಒಟ್ಟು 32 ಚಿನ್ನಾಭರಣಗಳನ್ನು ಹೆಪ್ಸಿಬಾ ವಶಕ್ಕೆ ನೀಡಲು ನಂಜುಂಡೇಗೌಡಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮುತ್ತೂಟ್ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.

ತನಿಖಾಧಿಕಾರಿ ಮೇಲೆ ಅನುಮಾನ

ಮುತ್ತೂಟ್ ಕಂಪನಿಗೆ ಚಿನ್ನಾಭರಣ ನೀಡಲು ಆಕ್ಷೇಪಿಸಿದ್ದ ಇನ್​ಸ್ಪೆಕ್ಟರ್ ನಂಜುಂಡೇಗೌಡ, ಹೆಪ್ಸಿಬಾ ಸುಪರ್ದಿಗೆ ನೀಡಲು ಮಾತ್ರ ಆಕ್ಷೇಪಿಸಿರಲಿಲ್ಲ ಎಂಬ ಅಂಶ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರಿಗೆ ಅನುಮಾನ ಮೂಡಿಸಿತ್ತು. ಇದರಿಂದ ತನಿಖಾಧಿಕಾರಿಯಾಗಿದ್ದ ನಂಜುಂಡೇಗೌಡ, ಜಯಕುಮಾರ್, ಹೆಪ್ಸಿಬಾ, ಚಿನ್ನಾಭರಣ ಬಿಡುಗಡೆಗೆ ಆದೇಶಿಸಿದ ವೇಳೆ ಮ್ಯಾಜಿಸ್ಟ್ರೇಟ್ ಕೊರ್ಟ್​ನಲ್ಲಿ ಸರ್ಕಾರಿ ಅಭಿಯೋಜಕರಾಗಿದ್ದ ಕಮಲಾ ಅವರನ್ನು ವಿಚಾರಣೆಗೆ ಕರೆಸಿದ್ದರು. ಆಭರಣ ಬಿಡುಗಡೆ ಕೋರಿ ಹೆಪ್ಸಿಬಾ ಸಲ್ಲಿಸಿದ್ದ ಅರ್ಜಿ ತಮಗೆ ಒದಗಿಸಿರಲಿಲ್ಲ ಎಂದು ಕಮಲಾ ಹೇಳಿದ್ದರು. ಮತ್ತೊಂದೆಡೆ ಹೆಪ್ಸಿಬಾ ಅರ್ಜಿಗೆ ವರದಿ ಸಲ್ಲಿಸಲು ಕೋರ್ಟ್ ನೀಡಿದ್ದ ಆದೇಶ ತೋರಿಸಲು ನಂಜುಂಡೇಗೌಡ ವಿಫಲರಾದರು. ಹೀಗಾಗಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿತು.

ಹೈಕೋರ್ಟ್ ಆದೇಶದಲ್ಲೇನಿದೆ?

2012ರ ಫೆ.13ರಂದು ಹೆಪ್ಸಿಬಾ ಸಲ್ಲಿಸಿದ್ದ ಅರ್ಜಿಯನ್ನು ಮಾ.26ರಂದು ವಿಚಾರಣೆ ನಡೆಸಲಾಗಿದೆ. ಆದರೆ, ಅಂದು ಅರ್ಜಿ ವಿಚಾರಣೆಗೆ ನಿಗದಿಯಾಗಿರಲಿಲ್ಲ.

ಅರ್ಜಿದಾರಳ ಪರ ವಕೀಲರು ಮನವಿ ಮಾಡಿದ ಕಾರಣ ಸರ್ಕಾರಿ ಅಭಿಯೋಜಕರಿಗೆ ನೋಟಿಸ್ ನೀಡದೆ ಅರ್ಜಿ ವಿಚಾರಣೆ ನಡೆಸಲಾಗಿದೆ. ತನಿಖಾಧಿಕಾರಿ ಸಹ ಸರ್ಕಾರಿ ಅಭಿಯೋಜಕರ ಗಮನಕ್ಕೆ ತಾರದೆ ಹೆಪ್ಸಿಬಾ ವಶಕ್ಕೆ ಚಿನ್ನಾಭರಣಗಳನ್ನು ನೀಡಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ಕೋರ್ಟ್​ಗೆ ವರದಿ ನೀಡಿದ್ದಾರೆ. ತನಿಖಾಧಿಕಾರಿ ತಮ್ಮಿಂದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ಹೆಪ್ಸಿಬಾ ಸುಳ್ಳು ಹೇಳಿದ್ದಾರೆ. ಆದ್ದರಿಂದ ಇದು ‘ರೂಪಿತ ಸಂಚು’ ಆಗಿದೆ. ಹೆಪ್ಸಿಬಾ ಜತೆ ಸೇರಿ ತನಿಖಾಧಿಕಾರಿ ನಂಜುಂಡೇಗೌಡ ಷಡ್ಯಂತ್ರ ರೂಪಿಸಿರುವ ಸಾಧ್ಯತೆಯಿದ್ದು, ಆ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ಹೈಕೋರ್ಟ್ ಆದೇಶಿಸಿದೆ.

Leave a Reply

Your email address will not be published. Required fields are marked *