500ಕ್ಕೂ ಹೆಚ್ಚು ಅಂಗವಿಕಲರ ತಪಾಸಣೆ

ಹುಣಸೂರು: ಪಟ್ಟಣದಲ್ಲಿ ಬುಧವಾರ ತಾಲೂಕಿನ ಅಂಗವಿಕಲರಿಗಾಗಿ ತಪಾಸಣೆ ಮತ್ತು ಸಾಧನ ಸಲಕರಣೆಗಳ ಮೌಲ್ಯಮಾಪನ ಶಿಬಿರ ನಡೆಯಿತು.

ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ಬೆಂಗಳೂರಿನ ಅಲಿಂಕೋ ಸಂಸ್ಥೆಯ ಸಹಯೋಗದಲ್ಲಿ ಶಿಬಿರ ಏರ್ಪಡಿಸಲಾಗಿತ್ತು. ವಿವಿಧ ಇಲಾಖೆಗಳಿಂದ ಗುರುತಿಸಲ್ಪಟ್ಟ ಮತ್ತು ಕಾರ್ಡ್ ಹೊಂದಿರುವ 500ಕ್ಕೂ ಹೆಚ್ಚು ಅಂಗವಿಕಲರು ತಪಾಸಣೆಗೆ ಒಳಗಾದರು.

ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕಾರ್ಯಕ್ರಮ ಸಂಚಾಲಕ ಅರ್ಜುನ್ ಮಾತನಾಡಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ತಾಲೂಕಿನಲ್ಲಿ 1500 ಅಂಗವಿಕಲರನ್ನು ಗುರುತಿಸಿ ಕಾರ್ಡ್ ಒದಗಿಸಲಾಗಿದೆ. ಕಾರ್ಡ್ ಹೊಂದಿಲ್ಲದವರೂ ಶಿಬಿರದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಅಂಗವೈಕಲ್ಯ ಕಂಡುಬಂದರೆ ಸೂಕ್ತ ತಪಾಸಣೆ ಮತ್ತು ಸಾಧನ ಸಲಕರಣೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಈ ಹಿಂದೆ ಸಾಧನ ಸಲಕರಣೆ ಪಡೆದಿದ್ದು, ಅವುಗಳು ದುರಸ್ತಿ ಹಂತ ತಲುಪಿದ್ದರೆ ಅಂಥವರಿಗೂ ಹೊಸ ಸಲಕರಣೆ ನೀಡಲಾಗುವುದು ಎಂದು ತಿಳಿಸಿದರು.

ಡಾ.ಸಚ್ಚಿದಾನಂದ, ಶಿಕ್ಷಣ ಇಲಾಖೆಯ ಬಿಐಇಆರ್‌ಟಿಗಳಾದ ಚಿಲ್ಕುಂದ ಮಹೇಶ್, ಸೋಮಶೇಖರ್, ತ್ರಿನೇಶ್, ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಬೋರಪ್ಪ, ರತ್ನ ಇತರರಿದ್ದರು.

ಕುಬ್ಜ ಸಹೋದರರ ಬೇಡಿಕೆ:
ಗಾಗೇನಹಳ್ಳಿ ಗ್ರಾಮದ ಅಂಗವಿಕಲ (ಕಬ್ಜ)ರಾದ ಶಿವಣ್ಣ ಮತ್ತು ಚಿಕ್ಕಬೋರ ಎಂಬುವರು ಶಿಬಿರದಲ್ಲಿ ಭಾಗವಹಿಸಿದ್ದರು. ತಮಗೆ ದೈಹಿಕ ನ್ಯೂನತೆ (ಎರಡೂ ಕೈ ಮತ್ತು ಕಾಲುಗಳು ಸಹಜವಾಗಿ ಬೆಳೆಯದೆ) ಇರುವುದರಿಂದ ಜೀವನ ನಿರ್ವಹಣೆಗೆ ತೊಡಕಾಗಿದೆ.

ಆದ್ದರಿಂದ ತಮಗೆ ಆರ್ಥಿಕ ಸಹಕಾರ ನೀಡಿದರೆ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದಾಗಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪುನರ್ವಸತಿ ಕೇಂದ್ರದ ಸಂಚಾಲಕ ಅರ್ಜುನ್, ಸಹಾಯಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.

Leave a Reply

Your email address will not be published. Required fields are marked *