ಸಚಿವರಿಂದ ಕಾನೂನು ಕಾಲೇಜು ಕಟ್ಟಡ ಪರಿಶೀಲನೆ

ಚಾಮರಾಜನಗರ: ಕಾನೂನು ವಿಶ್ವವಿದ್ಯಾಲಯದ ಸ್ಥಳೀಯ ತಪಾಸಣಾ ಸಮಿತಿಯು ಮಂಗಳವಾರ ನಗರದ ನೂತನ ಕಾನೂನು ಕಾಲೇಜು ಕಟ್ಟಡಕ್ಕೆ ಭೇಟಿ ನೀಡಿ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿತು.
ಮಂಗಳವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಜತೆಗೂಡಿ ಆಗಮಿಸಿದ ಸಮಿತಿಯ ಪದಾಧಿಕಾರಿಗಳು ಕಟ್ಟಡದ ಕುರಿತು ಕಾನೂನು ಕಾಲೇಜಿನ ಪ್ರಾಂಶುಪಾಲರಿಂದ ಮಾಹಿತಿ ಪಡೆದುಕೊಂಡರು. ನಂತರ ಕಟ್ಟಡದಲ್ಲಿರುವ ವಿವಿಧ ಕೊಠಡಿಗಳಿಗೆ ತೆರಳಿ ಪರಿಸ್ಥಿತಿಗಳನ್ನು ಅವಲೋಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಕಾನೂನು ಕಾಲೇಜು ಮಂಜೂರಾಗಿದ್ದು, ಕಳೆದ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 1 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಜಿಲ್ಲೆಗೆ ಕಾನೂನು ಕಾಲೇಜು ಮಂಜೂರಾಗಲು ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಶ್ರಮವೂ ಅಡಗಿದೆ ಎಂದರು.

ಕಾನೂನು ವಿಶ್ವವಿದ್ಯಾಲಯದ ಸ್ಥಳೀಯ ತಪಾಸಣಾ ಸಮಿತಿಯು ಭೇಟಿ ನೀಡಿ ಪರಿಶೀಲಿಸಿದ್ದು ಕಾಲೇಜು ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಯ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸಮಿತಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಆ ನಂತರ ಮುಂದಿನ ಆಗಸ್ಟ್ ತಿಂಗಳಲ್ಲಿ ಕಾಲೇಜು ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಕಾನೂನು ಕಾಲೇಜಿನ ಗ್ರಂಥಾಲಯಕ್ಕೆ 5 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಉಳಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದಲೂ ಅಗತ್ಯ ಅನುದಾನ ಕೊಡಿಸಲಾಗುವುದು. ಅಲ್ಲದೇ ಕಾಲೇಜಿಗೆ ಅಗತ್ಯವಿರುವ ಪೀಠೋಪಕರಣಗಳ ಖರೀದಿಗೂ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸ್ವಂತ ಕಟ್ಟಡ ನಿರ್ಮಾಣಕ್ಕೆ 25 ಎಕರೆ ಜಾಗ ಬೇಕು: ಕಾನೂನು ಕಾಲೇಜನ್ನು ತಾತ್ಕಾಲಿಕವಾಗಿ ಆರಂಭಿಸಲಾಗುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ 20-25 ಎಕರೆ ಜಾಗದ ಅವಶ್ಯಕತೆ ಇರುತ್ತದೆ. ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜಿನ ಬಳಿ ಜಾಗವನ್ನು ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಕಾನೂನು ಕಾಲೇಜಿನಲ್ಲಿ 5 ವರ್ಷಗಳ ಕೋರ್ಸ್ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ ಆರಂಭವಾಗುತ್ತಿರುವ ಕಾನೂನು ಕಾಲೇಜು ರಾಜ್ಯದಲ್ಲಿ 6ನೇ ಸರ್ಕಾರಿ ಕಾಲೇಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಕಾನೂನು ವಿಶ್ವವಿದ್ಯಾಲಯದ ಸ್ಥಳೀಯ ತಪಾಸಣಾ ಸಮಿತಿ ಅಧ್ಯಕ್ಷ ಸಿ.ಎಸ್.ಪಾಟೀಲ್ ಮಾತನಾಡಿ, ಕಾನೂನು ಕಾಲೇಜಿನ ಕುರಿತು ಪರಿಶೀಲಿಸಿದ್ದು ಈ ವರದಿಯನ್ನು ಬಾರ್ ಕೌನ್ಸಿಲ್‌ಗೆ ಸಲ್ಲಿಸಲಾಗುವುದು. ರಾಜ್ಯದಲ್ಲಿ 106 ಕಾನೂನು ಕಾಲೇಜುಗಳಿದ್ದು ಇದರಲ್ಲಿ 27 ಸರ್ಕಾರಿ ಅನುದಾನಿತ, 4 ವಿಶ್ವ ವಿದ್ಯಾಲಯದ ಕಾಲೇಜುಗಳಿವೆ. ಕಾಲೇಜಲ್ಲಿ 60 ವಿದ್ಯಾರ್ಥಿಗಳು ಕಲಿಯಲು ಅವಕಾಶವಿದೆ ಎಂದು ತಿಳಿಸಿದರು.

ಸಮಿತಿಯ ಸದಸ್ಯರಾದ ಬಿ.ಎಸ್.ರೆಡ್ಡಿ, ಸಂಯೋಜಕ ಸುನೀಲ್ ಬಾಗಡೆ, ಕಾಲೇಜಿನ ಪ್ರಾಂಶುಪಾಲ ಗೋಪಾಲ್, ತಾಪಂ ಸದಸ್ಯ ಮಹದೇವಶೆಟ್ಟಿ ಇತರರಿದ್ದರು.

Leave a Reply

Your email address will not be published. Required fields are marked *