ಮಹಾಲಿಂಗಪುರ: ದೇವರಾಜ ಅರಸು ವಸತಿ ಯೋಜನೆಯಡಿ ವಸತಿ ಇಲಾಖೆಯು ಕುಶಲಕರ್ಮಿ ನೇಕಾರರ ವಸತಿ ರಹಿತರಿಗೆ 2021-22ನೇ ಸಾಲಿನಲ್ಲಿ ಮಂಜೂರಾದ 100 ಮನೆಗಳಲ್ಲಿ 40ಕ್ಕೂ ಅಧಿಕ ನೇಕಾರರು ಮತ್ತು ಕುಶಲ ಕರ್ಮಿಗಳು ಅಲ್ಲದ ವ್ಯಕ್ತಿಗಳನ್ನು ಆಯ್ಕೆ ಮಾಡಿ ನೇಕಾರರಿಗೆ ಅನ್ಯಾಯ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ಅನರ್ಹ ಲಾನುಭವಿಗಳ ಪಟ್ಟಿ ರದ್ದುಗೊಳಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಕಾರ ವೃತ್ತಿ ಮಾಡದ ವ್ಯಕ್ತಿಗಳನ್ನು ಆಯ್ಕೆ ಮಾಡಿ ಬಡ ನೇಕಾರರಿಗೆ ಅನ್ಯಾಯ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಈಗಿನ ಆಯ್ಕೆ ಪಟ್ಟಿ ರದ್ದುಗೊಳಿಸಿ ಅರ್ಹ ನೇಕಾರರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.
ಪುರಸಭೆ ಸದಸ್ಯ ಪ್ರಲ್ಹಾದ ಸಣ್ಣಕ್ಕಿ ಮಾತನಾಡಿ, ಕುಶಲ ಕರ್ಮಿಗಳ ನೇಕಾರ ವಸತಿ ಯೋಜನೆಯ ಲಾನುಭವಿಗಳ ಆಯ್ಕೆಯಲ್ಲಿ ಭಾರಿ ಗೋಲ್‌ಮಾಲ್ ನಡೆದಿದೆ. ಸೌಜನ್ಯ ನೇಕಾರ ಸೊಸೈಟಿಯ ಜಿ.ಎಸ್. ಗೊಂಬಿ ಕನಿಷ್ಠ 8 ರಿಂದ 10 ಲಕ್ಷ ರೂ. ಲಂಚ ಪಡೆದು ನೇಕಾರರಲ್ಲದ 40ಕ್ಕೂ ಅಧಿಕ ಲಾನುಭವಿಗಳಿಗೆ ಮನೆ ಹಂಚಿದ್ದಾರೆ ಎಂದು ಆರೋಪಿಸಿದರು. ಅರ್ಹ ನೇಕಾರರಿಗೆ ವಸತಿ ಯೋಜನೆಯ ಸೌಲಭ್ಯ ನೀಡದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರಲ್ಲದೆ, ಈ ಕುರಿತು ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ಬಸವರಾಜ ಚಮಕೇರಿ, ರವಿ ಜವಳಗಿ, ಮುಖಂಡರಾದ ಮಹಾಲಿಂಗ ಮುದ್ದಾಪೂರ, ಚನ್ನಪ್ಪ ರಾಮೋಜಿ, ಚನ್ನಗಿರಿ ಕೆಳಗಡೆ ಇತರರಿದ್ದರು.