ಎಸ್ಟಿ ಜನಾಂಗಕ್ಕೆ ಮೀಸಲಾತಿಗೆ ಒತ್ತಾಯ

ಕೊಳ್ಳೇಗಾಲ: ನಾಯಕ ಜನಾಂಗಕ್ಕೆ ರಾಜ್ಯ ಸರ್ಕಾರ ಶೇ.7.5ರಷ್ಟು ಮೀಸಲಾತಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ಪಟ್ಟಣದಲ್ಲಿ ತಾಲೂಕು ನಾಯಕ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಬಸ್ ನಿಲ್ದಾಣದ ಶ್ರೀ ವರಸಿದ್ಧಿ ವಿನಾಯಕ ದೇಗುಲದಿಂದ ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಮೆರವಣಿಗೆ ಡಾ.ವಿಷ್ಣುವರ್ಧನ್, ಡಾ.ರಾಜಕುಮಾರ್ ಹಾಗೂ ಡಾ.ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ಬಂದು ತಾಲೂಕು ಕಚೇರಿ ತಲುಪಿತು. ಮೆರವಣಿಗೆ ಉದ್ದಕ್ಕೂ ಮೀಸಲಾತಿ ಹಕ್ಕಿನ ಕುರಿತಾದ ಮಾಹಿತಿ ಫಲಕ ಮತ್ತು ಫ್ಲೆಕ್ಸ್‌ಗಳನ್ನು ಹಿಡಿದು ಮುಖಂಡರು ತೆರಳಿದರು. ಈ ವೇಳೆ ಪ್ರತಿಭಟನಾನಿರತರು ತಹಸೀಲ್ದಾರ್ ಕುನಾಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ ಮಾತನಾಡಿ, ರಾಜ್ಯದಲ್ಲಿ 48ಲಕ್ಷದಷ್ಟಿರುವ ಪರಿಶಿಷ್ಟ ಪಂಗಡಕ್ಕೆ ಜನ ಸಂಖ್ಯೆಗೆ ಅನುಗುಣವಾಗಿ ರಾಜ್ಯ ಸರ್ಕಾರ ಶೇ.7.5ರಷ್ಟು ಮೀಸಲಾತಿ ಕಲ್ಪಿಸಬೇಕು. ರಾಜಕೀಯವಾಗಿ ಮೀಸಲಾತಿ ದೊರೆತಿದೆಯಾದರೂ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಶೇ.3ರಷ್ಟು ಮೀಸಲಾಗುತ್ತಿದೆ. ಇದರಿಂದ ನಾಯಕ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸಾಮೀಜಿ ಆದೇಶದ ಅನ್ವಯ ನಾಯಕ ಸಮುದಾಯದ ವಿವಿಧ ಸಂಘಟನೆಗಳು ಬೀದಿಗಿಳಿದು ಸಾಂಕೇತಿಕ ಪ್ರತಿಭಟನೆ ನಡೆಸಿವೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೂಪದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

2006ರ ಟ್ರೈಬಲ್ ವೆಲ್ಫೇರ್ ಆ್ಯಕ್ಟ್ ಅನ್ನು ರಾಜ್ಯದಲ್ಲಿ ಸಮಪರ್ಕವಾಗಿ ಅನುಷ್ಠಾನಗೊಳಿಸಿ ತುರ್ತಾಗಿ ಅರ್ಹ ಫಲಾನುಭವಿಗಳಿಗೆ ಗುರುತಿಸಿ ಸಾಗುವಳಿ ಹಕ್ಕುಪತ್ರ ನೀಡಬೇಕು. ಎಸ್ಟಿ ನಕಲಿ ಜಾತಿ ಪ್ರಮಾಣಪತ್ರ ಹಾವಳಿ ತಡೆಯಬೇಕು ಎಂದು ಆಗ್ರಹಿಸಿದರು.

ಚೂಡಾ ಮಾಜಿ ಅಧ್ಯಕ್ಷ ಆರ್.ಸುಂದರ್, ಕೆಲ್ಲಂಬಳ್ಳಿ ಸೋಮನಾಯಕ, ತಾಲೂಕು ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಗೋವಿಂದರಾಜ್, ತಾಲೂಕು ನಾಯಕ ಸಂಘಗಳ ಒಕ್ಕೂಟದ ಅಧ್ಯಕ್ಷ ಶಿವು, ಉಪಾಧ್ಯಕ್ಷ ಎಚ್.ಎಂ.ಮಹದೇವು, ಟೈಲರ್ ಸಂಘದ ಅಧ್ಯಕ್ಷ ಗೋವಿಂದರಾಜು, ಪಾಳ್ಯ ಗ್ರಾಪಂ ಉಪಾಧ್ಯಕ್ಷ ಬಿ.ರವಿ, ತಾ.ಪಂ.ಮಾಜಿ ಉಪಾಧ್ಯಕ್ಷ ಬಸವಣ್ಣ ನಾಯಕ, ತಾಪಂ ಸದಸ್ಯ ಕೃಷ್ಣಪ್ಪ, ನಗರಸಭಾ ಸದಸ್ಯರಾದ ಜಿ.ಎಂ.ಸುರೇಶ್, ನಾಗೇಂದ್ರ, ಮುಖಂಡರಾದ ಎಂ.ಕಾಂತರಾಜು, ಸೀಗನಾಯ್ಕ, ಶಂಕರ್, ಚಂದ್ರು, ಕೃಷ್ಣ, ಸೋಮಣ್ಣ, ಬಾಲರಾಜು, ಕಾಮರಾಜು ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *