ಕನಿಷ್ಠ ವೇತನ ಜಾರಿಗೆ ಒತ್ತಾಯ

ಹಾವೇರಿ: ಕನಿಷ್ಠ ಮಾಸಿಕ ಗೌರವ ಧನ, ಬಾಕಿಯಿರುವ ಪ್ರೋತ್ಸಾಹ ಧನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಿತಿ ಹಾಗೂ ಎಐಯುಟಿಯುಸಿ ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರು ಬುಧವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಆರೋಗ್ಯ ಇಲಾಖೆ ಯೋಜನೆ ಹಾಗೂ ಸೇವೆಗಳನ್ನು ಹಳ್ಳಿ ಹಾಗೂ ನಗರ ಪ್ರದೇಶದ ಬೇರುಮಟ್ಟಕ್ಕೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ನಿರಂತರಾಗಿ ಶ್ರಮಿಸುತ್ತಿದ್ದಾರೆ. ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಪೌಷ್ಟಿಕತೆಯ ಅರಿವು ಮೂಡಿಸಿ ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ಹಗಲಿರುಳು ದುಡಿಯುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಆಶಾ ಕಾರ್ಯಕರ್ತೆಯರಿಗೆ ಸೌಲಭ್ಯಗಳನ್ನು ಕಲ್ಪಿಸದೇ ಶೋಷಣೆ ಮಾಡುತ್ತಿದೆ. ಕನಿಷ್ಠ ವೇತನ ಸಹ ನೀಡದೇ ದುಡಿಸಿಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಇಂದಿಗೂ ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳೂ ವೇತನವಿಲ್ಲದೇ ಪರದಾಡುವ ಸ್ಥಿತಿಯಲ್ಲಿದ್ದಾರೆ. ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹಧನ ನೀಡುವ ಆಶಾ ಸಾಫ್ಟ್ ವೇತನ ಮಾದರಿಯಿಂದ ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ವರ್ಷಗಳಿಂದ ಆರ್ಥಿಕ ನಷ್ಟವಾಗುತ್ತಿದೆ. ಅಲ್ಲದೆ, ರಾಜ್ಯ ಸರ್ಕಾರ ನೀಡುವ 3,500 ರೂ. ಗೌರವಧನವನ್ನು ವಿಳಂಬ ಮಾಡಿ ನೀಡುತ್ತಿದ್ದು, ಕಳೆದ 4-5 ತಿಂಗಳಿನಿಂದ ಬಾಕಿಯಿದೆ ಎಂದು ಆರೋಪಿಸಿದರು.

ಪ್ರತಿ ತಿಂಗಳು ವೇತನವನ್ನು ನಿಗದಿತ ದಿನಾಂಕದೊಳಗೆ ಬಿಡುಗಡೆಗೊಳಿಸಬೇಕು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು. ಸಂಘಟನೆಯ ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ, ಜಿಲ್ಲಾಧ್ಯಕ್ಷೆ ಜಯಶೀಲಾ ಬಂಕಾಪುರ, ಮುಖಂಡರಾದ ರೂಪಾ ಮಾನೆ, ಮಂಜುಳಾ ಮಾಸೂರ, ಗಂಗಮ್ಮ ಸಣ್ಣಪೂಜಾರ, ವನಜಾಕ್ಷಿ, ಮಲ್ಲಮ್ಮ ಜಿಗಳಿ, ಪುಷ್ಪಾ ಮಡ್ಲೂರ ಸೇರಿ ನೂರಾರು ಆಶಾ ಕಾರ್ಯಕರ್ತೆಯರು ಇತರರಿದ್ದರು.

Leave a Reply

Your email address will not be published. Required fields are marked *