ಲೋಕಸಭೆಯಲ್ಲಿ ಶಾಸನ ರೂಪಿಸಲು ಒತ್ತಾಯ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಶಾಸನವನ್ನು (ಕಾಯ್ದೆ) ಸಂಸತ್ತಿನಲ್ಲಿ ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ವಿಶ್ವ ಹಿಂದು ಪರಿಷತ್ ಮುಖಂಡರು ಲೋಕಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರೂ ಆಗಿರುವ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿಪತ್ರ ಸಲ್ಲಿಸಿದರು.

ಕೆಡಿಎ ಮಾಜಿ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ವಿಎಚ್ಪಿ ಜಿಲ್ಲಾಧ್ಯಕ್ಷ ಸುಭಾಷ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಮೊದಲಾದವರು ಕಲಬುರಗಿಯಲ್ಲಿ ನಡೆದ ಪಿಎಸಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂಸದ ಖರ್ಗೆ ಇತರ ಸಂಸದರ ಎದುರು ಬೇಡಿಕೆ ಮಂಡಿಸಿದರು.

ಹಿಂದುಗಳು ಹಲವು ದಶಕಗಳಿಂದ ರಾಮ ಮಂದಿರಕ್ಕಾಗಿ ಹೋರಾಡುತ್ತ ಬರುತ್ತಿದ್ದಾರೆ. ಆದರೂ ಮಂದಿರ ನಿರ್ಮಾಣ ಆಗುತ್ತಿಲ್ಲ. ಹಲವು ಸಲ ಸರ್ಕಾರಗಳಿಗೆ ಮನವಿ ಮಾಡಲಾಗಿದೆ. ವಿಎಚ್ಪಿ ನಿರಂತರ ಹೋರಾಟ ಮಾಡುತ್ತಿರುವುದು ತಮ್ಮ ಗಮನಕ್ಕಿದೆ. ತಾವು ಶಾಸನ ರೂಪಿಸುವಂತೆ ಒತ್ತಡ ಹೇರಬೇಕು ಎಂದು ಸಂಸದ ಖರ್ಗೆ ಅವರಿಗೆ ಕೋರಿದರು.