ಅಂಗವಿಕಲ ಕ್ರೀಡಾಪಟುಗೆ ನೆರವಾಗಲು ಒತ್ತಾಯ

ಹುಣಸೂರು: ಪಟ್ಟಣದ ಸದಾಶಿವನಕೊಪ್ಪಲು ಬಡಾವಣೆಯ ನಿವಾಸಿ ಅಂತಾರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಕುಮಾರಿ ವಸಂತರಿಗೆ ನಗರಸಭೆಯಿಂದ ಯಾವುದೇ ಆರ್ಥಿಕ ಸಹಾಯ ನೀಡುತ್ತಿಲ್ಲ ಎಂದು ಆರೋಪಿಸಿ ನವಚೈತನ್ಯ ಅಂಗವಿಕಲರ ಸಂಘ, ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರಸಭೆ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ನಗರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಜೈ ಭೀಮ್ ಸಂಘದ ಮುಖಂಡ ಸುರೇಶ್ ಮಾತನಾಡಿ, ಕುಮಾರಿ ವಸಂತ ನಾಲ್ಕೈದು ವರ್ಷಗಳಿಂದ ನೇಪಾಳ ಸೇರಿ ವಿಶ್ವದ ವಿವಿಧ ಭಾಗಗಳಲ್ಲಿ ಆಯೋಜನೆಗೊಂಡಿರುವ ಅಂತಾರಾಷ್ಟ್ರೀಯ ಮಟ್ಟದ ಅಂಗವಿಕಲ ಪಂದ್ಯಾವಳಿಗಳಲ್ಲಿ ಶಾಟ್‌ಫುಟ್, ಡಿಸ್ಕಸ್‌ಥ್ರೋ ಪಂದ್ಯಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಕಡುಬಡತನದಲ್ಲೂ ಸಾಧನೆ ಮೆರೆಯುತ್ತಿರುವ ಈಕೆಗೆ ನಗರಸಭೆಯಿಂದ ಶೇ.5ರ ಅಂಗವಿಕಲರಿಗಾಗಿ ಮೀಸಲಾದ ಅನುದಾನದಡಿ ಯಾವುದೇ ಸವಲತ್ತುಗಳನ್ನು ವಿತರಿಸಿಲ್ಲ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳಾಗಲಿ, ಅದಿಕಾರಿಗಳಾಗಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ತಾಲೂಕಿನಲ್ಲಿ ಇಂತಹ ಹಲವು ಪ್ರತಿಭೆಗಳಿದ್ದು, ನಗರಸಭೆ ಇವರೆಲ್ಲರನ್ನೂ ಕಡೆಗಣಿಸಿದೆ. ಇಂತಹ ಹಲವು ಪ್ರತಿಭೆಗಳಿಗೆ ಸರ್ಕಾರದ ಸವಲತ್ತುಗಳನ್ನು ಶೀಘ್ರ ಕೊಡಬೇಕು. ನಗರಸಭೆ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ನಗರಸಭಾಧ್ಯಕ್ಷ ಎಚ್.ವೈ.ಮಹದೇವ್, ಫೆ.28ರಂದು ನಗರಸಭೆ ಸಾಮಾನ್ಯಸಭೆ ಹಮ್ಮಿಕೊಂಡಿದ್ದು, ಈ ಕುರಿತು ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನೀಡಿದ ಭರವಸೆಗೆ ಒಪ್ಪಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ವಿಕಲಚೇತನ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಪ್ರಭುಸ್ವಾಮಿ, ಗೌತಮ್, ಅಜ್ಗರ್ ಪಾಷಾ, ಶಿವಮೂರ್ತಿ, ಸತೀಶ್, ಕುಮಾರಿ ವಸಂತಾ ಇದ್ದರು.