ರಜನಿ ಪುತ್ರಿ ಸೌಂದರ್ಯ ಆರತಕ್ಷತೆ

ಸೂಪರ್​ಸ್ಟಾರ್’ ರಜನಿಕಾಂತ್ ಪುತ್ರಿ ಸೌಂದರ್ಯಾ ಕೆಲವು ದಿನಗಳ ಹಿಂದೆ ಒಂದು ಸಿಹಿಸುದ್ದಿ ನೀಡಿದ್ದರು. ತಾವು ಎರಡನೇ ಮದುವೆ ಆಗಲಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದರು. ಫೆ.11ರಂದು ನಟ ವಿಶಗಣ್ ಜತೆ ಅವರು ಸಪ್ತಪದಿ ತುಳಿಯಲಿದ್ದಾರೆ. ಅದರ ಪೂರ್ವಭಾವಿಯಾಗಿ ಶುಕ್ರವಾರ (ಫೆ.8) ಚೆನ್ನೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಖಾಸಗಿಯಾಗಿ ನೆರವೇರಿದ ಈ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಹಾಜರಿ ಹಾಕಿದ್ದರು. ನೀಲಿ ಮತ್ತು ಬಂಗಾರ ವರ್ಣ ಮಿಶ್ರಿತ ಸೀರೆಯಲ್ಲಿ ಸೌಂದರ್ಯಾ ಕಂಗೊಳಿಸಿದರೆ, ವಿಶಗಣ್ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. ಮೂಲತಃ ಉದ್ಯಮಿ ಆಗಿರುವ ವಿಶಗಣ್ 2018ರಲ್ಲಿ ‘ವಂಜಗರ್ ಉಳುಗಮ್ ಸಿನಿಮಾ ಮೂಲಕ ಚಿತ್ರರಂಗಕ್ಕೂ ಕಾಲಿಟ್ಟರು. 2010ರಲ್ಲಿ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಅವರನ್ನು ಸೌಂದರ್ಯಾ ವಿವಾಹವಾಗಿದ್ದರು. ಆದರೆ ದಾಂಪತ್ಯದಲ್ಲಿ ಹೊಂದಾಣಿಕೆ ಸಾಧ್ಯವಾಗದ ಕಾರಣ ಕೌಟುಂಬಿಕ ನ್ಯಾಯಾಲಯದ ಮೊರೆಹೋಗಿ 2017ರಲ್ಲಿ ವಿಚ್ಛೇದನ ಪಡೆದರು. ಈಗ ವಿಷಗಣ್ ಜತೆ ಸೌಂದರ್ಯಾ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. -ಏಜೆನ್ಸೀಸ್