26ಕ್ಕೆ ವಿಚಾರಣೆ ಮುಂದೂಡಿಕೆ

ಚಾಮರಾಜನಗರ: ಸುಳವಾಡಿಯ ಕಿಚ್ಚುಗುತ್ತಿ ಮಾರಮ್ಮ ವಿಷ ಪ್ರಸಾದ ದುರಂತ ಪ್ರಕರಣದ ನಾಲ್ವರು ಆರೋಪಿಗಳ ವಿಚಾರಣೆಯನ್ನು ನಗರದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಮಾ.26ಕ್ಕೆ ಮುಂದೂಡಿತು.

ಮೈಸೂರಿನ ಕಾರಾಗೃಹದಲ್ಲಿರುವ ನಾಲ್ವರು ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮೀಜಿ, ಮಾದೇಶ, ಅಂಬಿಕಾ ಹಾಗೂ ದೊಡ್ಡಯ್ಯ ಅವರ ವಿಚಾರಣೆಯನ್ನು ಇಲ್ಲಿಯತನಕ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತಿತ್ತು. ಗುರುವಾರ ಮೊದಲ ಬಾರಿಗೆ ನಗರದ ನ್ಯಾಯಾಲಯಕ್ಕೆ ನಾಲ್ವರನ್ನು ಹಾಜರುಪಡಿಸಲಾಯಿತು. ಹಾಗಾಗಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದ ತಂಡ ಸುಳವಾಡಿ ದುರಂತ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನ್ಯಾಯಾಧೀಶರಾದ ಜಿ.ಬಸವರಾಜ ಅವರು ನಿಮ್ಮ ವಕೀಲರು ಬಂದಿದ್ದಾರೆಯೇ ಎಂದು ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ ಅವರನ್ನು ಪ್ರಶ್ನಿಸಿದಾಗ, ಸೋಮವಾರ ಬರಲಿದ್ದಾರೆ ಎಂದು ತಿಳಿಸಿದರು.

ಉಳಿದ ಮೂವರು ಆರೋಪಿಗಳನ್ನು ಯಾವಾಗ ವಕೀಲರನ್ನು ನೇಮಿಸಿಕೊಳ್ಳುತ್ತೀರಿ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ ಸದ್ಯವೇ ನೇಮಿಸಿಕೊಳ್ಳುತ್ತೇವೆ. ನಮ್ಮ ವಕೀಲರು ಸಹ ಸೋಮವಾರ ಬರಲಿದ್ದಾರೆ ಎಂದರು.
ಪ್ರಕರಣ ಸಂಬಂಧ ದೋಷಾರೋಪಣ ಪಟ್ಟಿಯ ನಕಲಿ ಪ್ರತಿಗಳನ್ನು ನೀವು ಪಡೆಯುತ್ತೀರಾ ಎಂದು ನ್ಯಾಯಾಧೀಶರು ನಾಲ್ವರನ್ನು ಪ್ರಶ್ನಿಸಿದರು. ಇಮ್ಮಡಿ ಮಹದೇವಸ್ವಾಮೀಜಿ ಮಾತ್ರ ನಾನು ದೋಷಾರೋಪಣ ನಕಲಿ ಪ್ರತಿಗಳನ್ನು ಪಡೆಯುವುದಾಗಿ ನ್ಯಾಯಾಧೀಶರ ಗಮನಕ್ಕೆ ತಂದು ಸಹಿ ಮಾಡಿ ಒಪ್ಪಿಗೆ ಸೂಚಿಸಿದರು.
ಉಳಿದ ಮೂವರು ಆರೋಪಿಗಳಾದ ಮಾದೇಶ, ಅಂಬಿಕಾ, ದೊಡ್ಡಯ್ಯ ದೋಷಾರೋಪಣ ಪಟ್ಟಿಯ ನಕಲಿ ಪ್ರತಿಗಳನ್ನು ನಮ್ಮ ವಕೀಲರು ಪಡೆಯಲಿದ್ದಾರೆ ಎಂದರು. ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಮಾ.26 ಕ್ಕೆ ಮುಂದೂಡಿದರು.