ಎಚ್.ಡಿ.ಕೋಟೆ : ನವಜಾತ ಶಿಶುಗಳಿಂದ ಒಂದು ವರ್ಷದವರೆಗಿನ ಮಕ್ಕಳಿಗೆ ಆಸ್ಪತ್ರೆಯಲ್ಲಿ ನೀಡುವ ಎಲ್ಲ ಚುಚ್ಚುಮದ್ದು, ಲಸಿಕೆಯನ್ನು ಕೊಡಿಸಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದೊಂದಿಗೆ ಕಡಿಮೆ ತೂಕದ ಮಕ್ಕಳ ಆರೋಗ್ಯ ತಪಾಸಣೆ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಆರು ತಿಂಗಳಿಂದ ಆರು ವರ್ಷದ ಒಳಗಿನ ಕಡಿಮೆ ತೂಕದ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ವಯಸ್ಸಿಗೆ ಅನುಗುಣವಾಗಿ ಎತ್ತರಕ್ಕೆ ತಕ್ಕಂತೆ ತೂಕ ಇರಬೇಕು ಹಾಗೂ ಅತಿ ಕಡಿಮೆ ತೂಕವುಳ್ಳ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಎನ್‌ಆರ್‌ಸಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುವುದು ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸೋಮಣ್ಣ ಮಾತನಾಡಿ, ಪಾಲಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹುಟ್ಟಿದ ಆರು ತಿಂಗಳ ತನಕ ಎದೆಹಾಲನ್ನು ಬಿಟ್ಟು ಬೇರೇನು ನೀಡಬಾರದು. ಆರು ತಿಂಗಳ ನಂತರ ಮನೆಯಲ್ಲೇ ಪೌಷ್ಟಿಕ ಆಹಾರವನ್ನು ತಯಾರಿಸಿ ಮಗುವಿಗೆ ನೀಡಬೇಕು. ಕಾಲಕಾಲಕ್ಕೆ ಆಸ್ಪತ್ರೆಯಲ್ಲಿ ಲಸಿಕೆಯನ್ನು ಕೊಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸಂಪತ್‌ಕುಮಾರ್ ಮಾತನಾಡಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವೈದ್ಯಾಧಿಕಾರಿ ಡಾ.ಅಭಿಲಾಷ್, ಜಿಲ್ಲಾ ಆಸ್ಪತ್ರೆಯ ಡಿಇಐಸಿ ಮೇಲ್ವಿಚಾರಕ ಲೋಕೇಶ್, ವೈದ್ಯಾಧಿಕಾರಿ ಡಾ.ಮೋಹನ್, ಡಾ.ಹೇಮಲತಾ, ಡಾ.ರಮ್ಯಾ ಮತ್ತು ಸಿಬ್ಬಂದಿ, ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಹಾಜರಿದ್ದರು.