ಹುಗ್ಗಿ ಪಾತ್ರೆ ಬಿದ್ದು ಬಾಲಕನ ಕಾಲಿಗೆ ಗಾಯ

ಬಂಕಾಪುರ: ಬಿಸಿ ರವೆ ಹುಗ್ಗಿ ಬಿದ್ದು ಮಗುವಿನ ಕಾಲಿಗೆ ಗಾಯವಾದ ಘಟನೆ ಪಟ್ಟಣದ ಸುಣಗಾರ ಓಣಿಯ 73ನೇ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಸಂಭವಿಸಿದೆ.

ಊಟ ಬಡಿಸಲು ಆಹಾರ ಸಿದ್ಧಪಡಿಸಿ ಅಂಗನವಾಡಿ ಹೊರಗಿದ್ದ ಮಕ್ಕಳನ್ನು ಅಂಗನವಾಡಿ ಸಹಾಯಕಿ ಕರೆಯಲು ಹೋದಾಗ ಹುಗ್ಗಿಯ ಪಾತ್ರೆ ಉರುಳಿ ಮಗುವಿನ ಕಾಲಿನ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ.

ಸುಣಗಾರ ಓಣಿಯ ಆದರ್ಶ ಬನ್ನಿಮಟ್ಟಿ ಗಾಯಗೊಂಡ ಬಾಲಕ. ಘಟನೆ ನಡೆದಾಗ ಅಂಗನವಾಡಿಯಲ್ಲಿ ಸಹಾಯಕಿ ಮಾತ್ರ ಇದ್ದು ಕಾರ್ಯಕರ್ತೆ ಹೊರಗಡೆ ಹೋಗಿದ್ದರು. ಮಕ್ಕಳಿಗೆ ಊಟ ಬಡಿಸುವ ಸಮಯದಲ್ಲಿ ಅಂಗನವಾಡಿಯಲ್ಲಿಯೇ ಇದ್ದು ಕಾಳಜಿ ವಹಿಸಬೇಕಾಗಿದ್ದ ಕಾರ್ಯಕರ್ತೆಯ ನಿರ್ಲಕ್ಷ್ಯೇ ಈ ಘಟನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ, ಬಾಲಕನ ಪಾಲಕರು ಅಂಗನವಾಡಿಗೆ ಬೀಗ ಹಾಕಿದ್ದಾರೆ. ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳು ಬಂದು ಪರಿಶೀಲಿಸಿದ ನಂತರ ಬೀಗ ತೆಗೆಯಲಾಗುವುದು ಎಂದು ಮಗುವಿನ ಪಾಲಕರು ಹೇಳಿದ್ದಾರೆ.

Leave a Reply

Your email address will not be published. Required fields are marked *