ಮೂಲಸೌಕರ್ಯ ಸುಧಾರಣೆಗೆ ಒತ್ತು

ಬೆಳಗಾವಿ: ಚಳಿಗಾಲ ಅಧಿವೇಶನ ಸಮೀಪಿಸುತ್ತಿರುವ ಕಾರಣ ನಗರದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಚುರುಕು ಪಡೆದುಕೊಂಡಿದ್ದು, ಕುಂದಾನಗರಿಯು ಮದುವಣಗಿತ್ತಿಯಂತೆ ಸಿಂಗಾರಗೊಂಡು ಕಂಗೊಳಿಸುತ್ತಿದೆ.

ಅಧಿವೇಶನ ಹಿನ್ನೆಲೆಯಲ್ಲಿ ಇಡೀ ಸರ್ಕಾರವೆ ಬೆಳಗಾವಿ ನಗರಕ್ಕೆ ಲಗ್ಗೆ ಇಡುವ ಕಾರಣ ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ೇವರ್ಸ್‌ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆಬದಿ ಇರುವ ಕಬ್ಬಿಣದ ತಡೆಗೋಡೆಗಳಿಗೆ ಬಣ್ಣ ಬಳಿದು ಸಿಂಗರಿಸಲಾಗುತ್ತಿದೆ. ರಸ್ತೆ ವಿಭಜಕಗಳನ್ನು ತೊಳೆಯಲಾಗುತ್ತಿದೆ.

ನಗರದ ಬಹಳಷ್ಟು ಕಡೆಗಳಲ್ಲಿ ರಸ್ತೆಗಳು ಹಾಳಾಗಿವೆ. ಕೇಂದ್ರ ಬಸ್ ನಿಲ್ದಾಣ ಪಕ್ಕ ಇರುವ ಸರ್ಕಾರಿ ಪ್ರವಾಸಿ ಮಂದಿರ ರಸ್ತೆಯಲ್ಲಿ ಸಾಲು ಸಾಲು ತಗ್ಗು ಗುಂಡಿಗಳು ಬಿದ್ದಿವೆ. ನಗರದ ಬಹುತೇಕ ಕಡೆಗಳ ಒಳರಸ್ತೆ ಹಾಳಾಗಿವೆ. ಆದರೆ, ಸಚಿವರು, ಶಾಸಕರು ಸಂಚಾರ ಮಾಡುವ ಮುಖ್ಯ ರಸ್ತೆಗಳನ್ನಷ್ಟೆ ಸುಧಾರಿಸುತ್ತಿರುವುದು ಸರಿಯಲ್ಲ. ನಗರದ ತುಂಬೆಲ್ಲ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವಂತೆ ಜನ ಒತ್ತಾಯಿಸುತ್ತಿದ್ದಾರೆ.

ಆದರೆ, ಮಹಾನಗರ ಪಾಲಿಕೆ ಹಾಗೂ ಪಿಡಬ್ಲುಡಿ ಅಧಿಕಾರಿಗಳು ತುರ್ತು ಅಗತ್ಯವಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಂತ ಹಂತವಾಗಿ ಎಲ್ಲ ಕಾಮಗಾರಿ ಕೈಗೊಳ್ಳಲಾಗುವುದು ಎಂದಿದ್ದಾರೆ.

ಬೀದಿದೀಪಗಳ ದುರಸ್ತಿ: ನಗರದಲ್ಲಿರುವ ಪ್ರಮುಖ ಮಾರ್ಗಗಳಲ್ಲಿನ ಬೀದಿದೀಪಗಳನ್ನು ದುರಸ್ತಿ ಮಾಡಲಾಗುತ್ತಿದೆ. ರಸ್ತೆಯ ನಾಮಲಕ ತೊಳೆಯುತ್ತಿದ್ದೇವೆ. ಕಸ ವಿಲೇವಾರಿ ಚುರುಕು ಪಡೆದಿದೆ. ನಗರ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ವಿಜಯವಾಣಿಗೆ ತಿಳಿಸಿದ್ದಾರೆ.

ಈ ಹಿಂದಿನ ಯೋಜನೆಗಳ ಅನುದಾನದಲ್ಲಿ 200 ಮೀಟರ್ ಫೇವರ್ಸ್‌ ರಸ್ತೆ ನಿರ್ಮಿಸಲಾಗುತ್ತಿದೆ. ನಗರದಲ್ಲಿ ಹಾಳಾಗಿರುವ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚುತ್ತಿದ್ದೇವೆ.

| ಸಂಜೀವಕುಮಾರ್, ಇಇ, ಲೋಕೋಪಯೋಗಿ ಇಲಾಖೆ, ಬೆಳಗಾವಿ