More

    ಅಂಚೆ ಇಲಾಖೆಯಿಂದ ಜನರಿಗೆ ವಿಶಿಷ್ಟ ಸೇವೆ

    ಹರಿಹರ: ಬ್ಯಾಂಕ್ ವಹಿವಾಟು ಹಾಗೂ ಜೀವ ವಿಮೆ, ಉಳಿತಾಯ ಯೋಜನೆಗಳ ಮೂಲಕ ಭಾರತೀಯ ಅಂಚೆ ಇಲಾಖೆ ಎಲ್ಲ ಕ್ಷೇತ್ರದ ಜನರಿಗೆ ವಿಶಿಷ್ಟ ಸೇವೆ ನೀಡುತ್ತಿದೆ ಎಂದು ದಾವಣಗೆರೆ ವಿಭಾಗ ಅಂಚೆ ಅಧೀಕ್ಷಕ ಚಂದ್ರಶೇಖರ್ ಹೇಳಿದರು.

    ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಹರಿಹರ, ರಾಜಾರಾಮ ಕಾಲನಿ, ಯಂತ್ರಪುರ ಹಾಗೂ ದೊಡ್ಡಬಾತಿ ಅಂಚೆ ಕಚೇರಿಗಳ ಸಹಭಾಗಿತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

    ಅಂಚೆ ಇಲಾಖೆ ದೇಶಾದ್ಯಂತ ಶಾಖೆ ಹೊಂದಿದ್ದು, ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವುದರಿಂದ ಲಾಭಕ್ಕಿಂತ ಜನ ಸೇವೆಗೆ ಮೊದಲ ಆದ್ಯತೆ ನೀಡಲಾಗಿದೆ. ಮಹಿಳಾ ಸಮ್ಮಾನ್, ಸಮೂಹ ಅಪಘಾತ ವಿಮೆ, ಗಂಡು ಮಕ್ಕಳಿಗೆ ಸುಕುಮಾರ ಸಮೃದ್ಧಿ, ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ, ಪ್ರಧಾನಮಂತ್ರಿ ಜನ ಸುರಕ್ಷಾ ಇತ್ಯಾದಿ ಯೋಜನೆಗಳು ಜನಸಾಮಾನ್ಯರಿಗೆ ಸಾಮಾಜಿಕ ಭದ್ರತೆ ಒದಗಿಸುತ್ತವೆ ಎಂದರು.

    ಡಿಆರ್‌ಎಂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್. ರಾಜಶೇಖರಯ್ಯ ಮಾತನಾಡಿ, ಖಿಲ್ಜಿ ಆಡಳಿತಗಾರರ ಅವಧಿಯಿಂದ ದೇಶದಲ್ಲಿ ಅಂಚೆ ಸೇವೆ ಆರಂಭವಾಯಿತು. ಬಹು ಹಿಂದಿನಿಂದಲೂ ಅಂಚೆ ಇಲಾಖೆ ಮೇಲೆ ದೇಶವಾಸಿಗಳು ಇಟ್ಟುಕೊಂಡಿರುವ ವಿಶ್ವಾಸ ಇಂದಿಗೂ ಅದೇರೀತಿ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಹಾಯಕ ಅಂಚೆ ಅಧೀಕ್ಷಕ ಜೆ. ಗುರುಪ್ರಸಾದ್ ಮಾತನಾಡಿ, ಒಂದೆ ಸೂರು, ಸೇವೆ ನೂರು ಎಂಬ ಘೋಷವಾಕ್ಯದಡಿ ಅಂಚೆ ತನ್ನ ಸೇವೆ ವಿಸ್ತರಿಸಿದೆ. ಇಲಾಖೆಗೆ ಅಲ್ಪ ಲಾಭ, ಜನತೆಗೆ ಹೆಚ್ಚಿನ ಸೇವೆ ಆಧಾರದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. 3 ದಿನಗಳ ಅಭಿಯಾನದಲ್ಲಿ ಹರಿಹರದಲ್ಲಿ 966 ಉಳಿತಾಯ ಖಾತೆ, 249 ಮಹಿಳಾ ಸಮೃದ್ಧಿ, 23 ಎಸ್‌ಬಿ ಪ್ರಿಮಿಯಂ, 13 ಗುಂಪು ವಿಮೆ, 11 ಜೀವ ವಿಮೆ ಗುರಿ ಸಾಧಿಸಲಾಗಿದೆ ಎಂದರು.

    ಅಂಚೆ ವಿಮಾ ಅಭಿವೃದ್ಧಿ ಅಧಿಕಾರಿ ಜಾಕೀರ್ ಹುಸೇನ್ ಮಾತನಾಡಿ, ಅಂಚೆ ವಿಮೆಯ ಹಣಕ್ಕೆ ಸರ್ಕಾರವೇ ಭದ್ರತೆ ಒದಗಿಸುವುದರಿಂದ ಹೂಡಿಕೆದಾರರಿಗೆ ಯಾವುದೆ ಆತಂಕವಿಲ್ಲ. ಆದರೆ, ಕೆಲವು ಖಾಸಗಿ ವಿಮಾ ಕಂಪನಿಗಳಿಂದ ಹೂಡಿಕೆದಾರರಿಗೆ ನಿರೀಕ್ಷಿತ ಸೇವೆ ದೊರೆಯುತ್ತಿಲ್ಲ ಎಂದರು.

    ಅಂಚೆ ಪಾಲಕ ರಾಮಪ್ಪ ಸಾತ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಗಿರಿಯಮ್ಮ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಗುರುಬಸವರಾಜಯ್ಯ ಮಾತನಾಡಿದರು. ಅಂಚೆ ಕಚೇರಿ ವ್ಯವಸ್ಥಾಪಕಿ ವಸುಧಾ ಪಾಠಕ್, ಸಿಬ್ಬಂದಿಗಳಾದ ಶಂಕರಾಚಾರ್ ಬಡಿಗೇರ್, ಪ್ರದೀಪ್, ಪ್ರಶಾಂತ್, ಹರೀಶ್, ಮರಿದೇವ, ಆನಂದ್ ಜೋಶಿ, ಸಾಮಾಜಿಕ ಕಾರ್ಯಕರ್ತರಾದ ಬಿ.ಎಸ್. ಗೌಡ, ಸಂಗನಾಳ್, ಐರಣಿ ಹನುಮಂತಪ್ಪ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts