ಹುಣಸೂರು: ಮುಂದಿನ 30 ವರ್ಷಗಳ ಅವಧಿಗೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರಿನ ಸುಸ್ಥಿರ ಪೂರೈಕೆ ಮಾಡುವುದೇ ಜಲಜೀವನ ಮಿಷನ್ ಯೋಜನೆಯ ಮುಖ್ಯ ಗುರಿ. ಇದಕ್ಕೆ ಗ್ರಾಮೀಣ ಭಾಗದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದು ಜೆಜೆಎಂ ಜಿಲ್ಲಾ ಸಮಾಲೋಚನಾಧಿಕಾರಿ ನಿರಂಜನ್ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜೆಜೆಎಂ, ಸ್ವಚ್ಛ ಭಾರತ್ ಮಿಷನ್ ಮತ್ತು ಭಗೀರಥ ಸಂಸ್ಥೆ ಸಹಯೋಗದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಯಡಿ ಗ್ರಾಪಂ ಪಿಒಡಿ, ಅಧ್ಯಕ್ಷ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ಇಂಜಿನಿಯರ್‌ಗಳಿಗೆ ಆಯೋಜಿಸಿದ್ದ ವಾಶ್ ಒ ಅಂಡ್ ಎಂ ಚಟುವಟಿಕೆಗಳ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮನೆ ಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆಯ ಜೆಎಂಎಂ ಕಾಮಗಾರಿ ಬಹುತೇಕ ಸಂಪೂರ್ಣಗೊಂಡಿದ್ದು ಯೋಜನೆಯ ಕಾರ್ಯವಿಧಾನ ಮತ್ತು ನಿರ್ವಹಣೆಯನ್ನು ಇದೀಗ ಗ್ರಾಪಂಗೆ ವಹಿಸಬೇಕಿದೆ. ಯೋಜನೆಯ ಅನುಷ್ಠಾನ ಪರಿಣಾಮಕಾರಿ ಆಗಬೇಕಾದರೆ ಯೋಜನೆಯ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ಅಗತ್ಯ. ಈ ಹಿನ್ನೆಲೆಯ್ಲಲಿ ಪ್ರತೀ ಗ್ರಾಪಂ ಸದಸ್ಯ ಮತ್ತು ಅಧಿಕಾರಿಗಳಿಗೆ ಕೈಪಿಡಿ ನೀಡಲಾಗುತ್ತಿದೆ. ಪಿಡಿಒ ಅವರಿಂದ ಆರಂಭಗೊಂಡು ಗ್ರಾಪಂ ವರಿಷ್ಠರು, ಸದಸ್ಯರು, ನೀರುಗಂಟಿ, ಕಂದಾಯ ವಸೂಲಿಗಾರ ಮುಂತಾದ ಎಲ್ಲ ಸಿಬ್ಬಂದಿಗೂ ಯೋಜನೆಯಲ್ಲಿ ತಮ್ಮದೇ ಜವಾಬ್ದಾರಿಗಳಿವೆ. ಈ ನಿನಟ್ಟಿನಲ್ಲಿ ಆಯೋಜಿಸಿರುವ ತರಬೇತಿ ಕಾರ್ಯಾಗಾರದ ಸಂಪೂರ್ಣ ಸದ್ಬಳಕೆಯಾಗಲಿ ಎಂದು ಕೋರಿದರು.
ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಕೆ.ಎಂ.ರಾಜೇಂದ್ರ ಮಾತನಾಡಿ, ಈ ಹಿಂದೆ ಜನರು ಕುಡಿಯುವ ನೀರಿಗಾಗ ಕೆರೆ, ಕಟ್ಟೆ ಮತ್ತು ಬಾವಿಗಳನ್ನು ಅವಲಂಬಿಸಿದ್ದರು. ಕಾಲಕ್ರಮೇಣ ನಲ್ಲಿಯ ಮೂಲಕ, ತುಂಬೆಗಳಲ್ಲಿ ಶೇಖರಿಸಿ ಹಾಗೂ ಓವರ್‌ಹೆಡ್ ಟ್ಯಾಂಕ್‌ಗಳ ಮೂಲಕ ನಲ್ಲಿಗಳಲ್ಲಿ ನೀರು ಪೂರೈಸಲಾಗುತ್ತಿತ್ತು. ಇದೀಗ ಮನೆಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಸಲು ಜೆಜೆಎಂ ಯೋಜನೆ ಜಾರಿಗೊಳ್ಳುತ್ತಿದೆ. ತಾಲೂಕಿನಲ್ಲಿ 4 ಹಂತಗಳಲ್ಲಿ 179 ಪ್ರಮುಖ ಗ್ರಾಮಗಳಲ್ಲಿ (ಜನ ವಾಸಿಸುವ 310 ಗ್ರಾಮಗಳು)ಬಹುತೇಕ ಸಂಪೂರ್ಣಗೊಂಡಿದೆ. ತರಬೇತಿ ಮೂಲಕ ಯೋಜನೆಯ ಕಾರ್ಯಚಟುವಟಿಕೆಗಳು ಮತ್ತು ನಿರ್ವಹಣೆಯನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಿಳಿದುಕೊಳ್ಳಬೇಕು ಎಂದರು.
ತಾಪಂ ಇಒ ಕೆ.ಹೊಂಗಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ಸಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರತಿಯೊಬ್ಬ ನೌಕರರು ಮತ್ತು ಅಧಿಕಾರಿಗಳ ಪಾತ್ರ ಬಹುಮುಖ್ಯ ಎಂದರು.
ರತ್ನಶ್ರೀ ಪುರಸ್ಕೃತ ಜಿ.ಎಂ.ರೆಬೆಲ್ಲೋ ಸಂಪನ್ಮೂಲ ವ್ಯಕ್ತಿಯಾಗಿ ಯೋಜನೆಯ ಕಾರ್ಯಚಟುವಟಿಕೆ ಮತ್ತು ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಒದಗಿಸಿದರು. ಭಗೀರಥ ಸಂಸ್ಥೆಯ ಜಿಲ್ಲಾ ಸಂಯೋಜಕ ಮಹೇಶ್, ತಾಲೂಕು ಸಂಯೋಜಕ ಆನಂದ್ ಸೇರಿದಂತೆ ತಾಲೂಕಿನ 41 ಗ್ರಾಪಂಗಳ ಅಧ್ಯಕ್ಷರು, ಪಿಡಿಒ, ಇಂಜಿನಿಯರ್‌ಗಳು, ನೀರುಗಂಟಿಗಳು ಇನ್ನಿತರರಿದ್ದರು.