ದತ್ತಪೀಠಕ್ಕಿಲ್ಲ ಕೆಎಸ್​ಆರ್​ಟಿಸಿ ಬಸ್ ವ್ಯವಸ್ಥೆ

ಚಿಕ್ಕಮಗಳೂರು: ನಗರದಿಂದ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾ ಮಾರ್ಗದ ಮಾಹಿತಿ ಕೊರತೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮ ದಾರಿ ತಪ್ಪಿದ್ದು, ಸದ್ಯ ಈ ಮಾರ್ಗದಲ್ಲಿ ಬಸ್ ಸಂಚರಿಸುವುದು ನನೆಗುದಿಗೆ ಬಿದ್ದಿದೆ.

ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆಯ ಸಂಚಾಲಕ ಕೆ.ಎಸ್.ಗುರುವೇಶ್ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಪತ್ರ ಬರೆದು ಚಿಕ್ಕಮಗಳೂರಿಂದ ಬಾಬಾಬುಡನ್ ದರ್ಗಾದವರೆಗೆ ಮಿನಿ ಬಸ್​ಗಳ ಸಂಚಾರ ಆರಂಭಿಸುವಂತೆ ಕೋರಿದ್ದರು.

ಇದಕ್ಕೆ ಸ್ಪಂದಿಸಿದ ನಿಗಮವು ನಗರದಿಂದ ಕೈಮರ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಪಂಡರವಳ್ಳಿ ಮಾರ್ಗದಲ್ಲಿ ರಸ್ತೆಯ ಬಹುತೇಕ ಭಾಗಗಳು ತೀರಾ ಕಡಿದಾಗಿ ತೀಕ್ಷ್ಣತಿರುವು ಹಾಗೂ ಆಳ ಪ್ರಪಾತಗಳನ್ನು ಹೊಂದಿರುವುದರಿಂದ ಬಸ್ ಸಂಚಾರ ಕಷ್ಟ ಸಾಧ್ಯ. ಈ ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯೂ ಈ ಉದ್ದೇಶದಲ್ಲಿದೆ ಎಂದು ತಿಳಿಸಿದೆ.

ವಿಶೇಷವೆಂದರೆ ಈ ರಸ್ತೆ ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್ ದರ್ಗಾದ್ದೇ ಅಲ್ಲ ಎನ್ನುವ ಅಂಶ ಸ್ಪಷ್ಟವಾಗಿದ್ದು, ನಿಗಮಕ್ಕೆ ಈ ಮಾರ್ಗದ ಮಾಹಿತಿಯೇ ಇದ್ದಂತಿಲ್ಲ ಎನ್ನುವುದು ತಿಳಿದು ಬಂದಿದೆ. ತನ್ನ ಪತ್ರದ ಪೂರ್ಣಭಾಗದಲ್ಲಿ ಕೈಮರ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಪಂಡರವಳ್ಳಿ ಮಾರ್ಗದ ವಿವರ ನೀಡಿದ್ದು, ಬಸ್ ಸಂಚಾರ ಅಸಾಧ್ಯತೆಯ ಬಗ್ಗೆ ಮಾಹಿತಿ ನೀಡಲಾಗಿದೆ.

ಸಾರಿಗೆ ನಿಗಮದಿಂದ ಈ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಬೇಕು ಎನ್ನುವುದು ಎರಡು ದಶಕಗಳ ಬೇಡಿಕೆ. ಇದುವರೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್​ಗಳು ಬೇರೆ ಬೇರೆ ಕಾರಣಕ್ಕೆ ಸರಿಯಾದ ಸೇವೆ ಒದಗಿಸುತ್ತಿಲ್ಲ ಎನ್ನುವ ದೂರಿದ್ದು, ಈ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಮಿನಿಬಸ್​ಗಳನ್ನು ಬಿಡಬೇಕು ಎನ್ನುವ ಒತ್ತಡ ಇತ್ತೀಚೆಗೆ ಹೆಚ್ಚಾಗಿತ್ತು.

ಈ ಸಂಬಂಧ ಸ್ಥಳೀಯ ನಿವಾಸಿಗಳು ಹಾಗೂ ಸಂಘ-ಸಂಸ್ಥೆಗಳು ಜಿಲ್ಲಾಡಳಿತ, ಕೆಎಸ್​ಆರ್​ಟಿಸಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಚುನಾಯಿತ ಪ್ರತಿನಿಧಿಗಳ ಮೇಲೆ ಸಾಕಷ್ಟು ಒತ್ತಡ ಹೇರಿದರೂ ಪ್ರಯೋಜನವಾಗಿರಲಿಲ್ಲ.

ಪ್ರತೀ ಕಿ.ಮೀ.ನಿಂದ ಮತ್ತೊಂದು ಕಿ.ಮೀ.ವರೆಗೆ ರಸ್ತೆಯ ಪರಿಸ್ಥಿತಿ ಹೇಗಿದೆ? ಇಕ್ಕೆಲಗಳಲ್ಲಿ ಎಲ್ಲೆಲ್ಲಿ ಆಳ ಕಂದಕಗಳಿವೆ? ನಿರ್ವಿುಸಬೇಕಿರುವ ತಡೆಗೋಡೆಗಳೆಷ್ಟು? ಅಪಾಯಕಾರಿ ಯು ಟರ್ನ್​ನ ಮಾಹಿತಿ ವಿವರ ಒಳಗೊಂಡಿದ್ದು, ಕೆಎಸ್​ಆರ್​ಟಿಸಿ ವಾಹನ ಸಂಚಾರಕ್ಕೆ ಈ ರಸ್ತೆ ಯೋಗ್ಯವಾಗಿಲ್ಲ ಎಂದು ನಿರಾಕರಿಸಲಾಗಿದೆ. ಆದರೆ ಈ ರಸ್ತೆ ದತ್ತಪೀಠದ್ದಲ್ಲ ಎನ್ನುವುದು ನಿಗಮದ ಗಮನಕ್ಕೆ ಬಾರದಿರುವುದು ವಿಪರ್ಯಾಸವೇ ಸರಿ.

ನಿಗಮಕ್ಕೆ ಮನವರಿಕೆ ಪತ್ರ: ನಿಗಮದ ಕೆಲವು ಅಧಿಕಾರಿಗಳ ಅವಾಂತರದಿಂದ ಎಚ್ಚೆತ್ತ ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆಯ ಸಂಚಾಲಕ ಕೆ.ಎಸ್.ಗುರುವೇಶ್, ತಮಗೆ ಕಳುಹಿಸಿರುವ ಮಾಹಿತಿ ಇನಾಂ ದತ್ತಾತ್ರೇಯಪೀಠ ಬಾಬಾಬುಡನ್ ದರ್ಗಾದಲ್ಲ ಎನ್ನುವುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಲು ನಿಗಮಕ್ಕೆ ಮತ್ತೊಂದು ಪತ್ರ ಬರೆದಿದ್ದಾರೆ.

ಚಿಕ್ಕಮಗಳೂರಿನಿಂದ ಪಂಡರವಳ್ಳಿವರೆಗೆ ಕೆಎಸ್​ಆರ್​ಟಿಸಿ ಬಸ್ ಸಂಚರಿಸುವುದು ಸಾಧ್ಯವಿಲ್ಲ ಎನ್ನುವುದು ಸ್ಥಳೀಯರಾದ ತಮಗೂ ತಿಳಿದ ವಿಚಾರವೇ. ಅಷ್ಟಕ್ಕೂ ಈ ಮಾರ್ಗದಲ್ಲಿ ನಿಗಮದ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಯಾರೂ ಬೇಡಿಕೆ ಮುಂದಿಟ್ಟಿಲ್ಲ. ಗಿರಿ ಪ್ರದೇಶ ಎಂದರೆ ಕೇವಲ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಪಂಡರವಳ್ಳಿ ಮಾತ್ರವಲ್ಲ ಇದರಲ್ಲಿ ದತ್ತಪೀಠ, ಸಂಪಿಗೆಕಟ್ಟೆ, ಮಹಲ್ ಇನ್ನು ಮುಂತಾದ ಪ್ರದೇಶಗಳು ಸೇರಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಚಾರದಲ್ಲಿ ಸಂಸ್ಥೆಗೆ ಪೂರ್ಣ ಮಾಹಿತಿ ಇಲ್ಲ. ಕೆಲವರು ತಪ್ಪು ಮಾಹಿತಿ ನೀಡಿರಬಹುದು. ಚಿಕ್ಕಮಗಳೂರಿನಿಂದ ಕೈಮರ, ಕವಿಕಲ್​ಗಂಡಿ, ಅತ್ತಿಗುಂಡಿ, ಸಂಪಿಗೆಕಟ್ಟೆ, ಮಹಲ್ ಹಾಗೂ ದತ್ತಪೀಠ ಮಾರ್ಗಕ್ಕೆ ಬಸ್ ಓಡಿಸಬೇಕೆಂದು ಕೋರಲಾಗಿದ್ದು, ಈ ಮಾರ್ಗ ಅತ್ಯಂತ ಸುರಕ್ಷಿತ ಹಾಗೂ ಸುಸಜ್ಜಿತವಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಈ ಮಾರ್ಗದಲ್ಲಿ ದೊಡ್ಡ ಬಸ್​ಗಳನ್ನು ಓಡಿಸಲು ಅವಕಾಶವಿದ್ದರೂ ತಿರುವುಗಳು, ಆಳ ಕಂದಕಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಮಿನಿ ಬಸ್ ಅನ್ನೇ ಕೋರಿರುವುದಾಗಿ ತಿಳಿಸಿದ್ದಾರೆ.

ಮಿನಿ ಬಸ್ ವ್ಯವಸ್ಥೆ ಒದಗಿಸಿದಲ್ಲಿ ನಿತ್ಯ ಪಯಣಿಸುವ ಕೂಲಿ ಕಾರ್ವಿುಕರು, ಶಾಲಾ ಮಕ್ಕಳು, ಶಿಕ್ಷಕರು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಸಿಬ್ಬಂದಿಗೆ ಅನುಕೂಲವಾಗಲಿದೆ. ಮತ್ತೊಮ್ಮೆ ಸ್ಥಳ ಪರಿಶೀಲಿಸಿ ನಗರದಿಂದ ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್ ದರ್ಗಾಕ್ಕೆ ಮಿನಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಕೋರಿದ್ದಾರೆ.