More

  ವಕೀಲಿ ವೃತ್ತಿಯಲ್ಲೊಂದು ಸುತ್ತು..

  ಕಾನೂನು ಶಿಕ್ಷಣವೇ ನನ್ನ ಮೊದಲ ಆಯ್ಕೆ ಆಗಬೇಕು, ಕಾನೂನು ಪದವಿ ಪಡೆಯಬೇಕು, ವಕೀಲಿಕೆ ಮಾಡಬೇಕು, ನ್ಯಾಯಾಧೀಶ ಆಗಬೇಕು ಎನ್ನುವವರು ಈ ಮೊದಲು ವಿರಳವಾಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಕಾನೂನು ಅಧ್ಯಯನದತ್ತ ವಾಲುತ್ತಿದೆ. ಈ ವೃತ್ತಿ ಆಯ್ದುಕೊಳ್ಳುವವರಿಗೆ ಇರುವ ಸವಾಲುಗಳೇನು? ಅದನ್ನವರು ಹೇಗೆ ಎದುರಿಸಬೇಕು? ಏನೇನು ಅವಕಾಶಗಳಿವೆ? ಇಲ್ಲಿದೆ ಮಾಹಿತಿ…

  ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಹೋಲಿಸಿದಲ್ಲಿ ಕಾನೂನು ಪದವಿ ಪಡೆಯಲು ಬೇಕಾದ ವಿದ್ಯಾರ್ಹತೆ ಅತ್ಯಂತ ಸರಳ. ಹಿಂದೆಲ್ಲಾ ಶೇಕಡಾ 35 ಅಂಕಗಳನ್ನು ಪಡೆದ ಪದವೀಧರ ವಿದ್ಯಾರ್ಥಿಗಳು 3 ವರ್ಷಗಳ ಕಾನೂನು ಪದವಿ ಪಡೆಯಬಹುದಿತ್ತು. ಮಾತ್ರವಲ್ಲ, ಸಂಜೆ ಕಾಲೇಜು, ಅರೆಕಾಲಿಕ ಅಥವಾ ಪೂರ್ಣಕಾಲಿಕ ದೂರಶಿಕ್ಷಣಗಳ ಮೂಲಕವೂ ಕಾನೂನು ಪದವಿ ಪಡೆಯಲು ಅವಕಾಶವಿತ್ತು.

  ಎಷ್ಟೋ ಜನ ತಮ್ಮ ವೃತ್ತಿ, ಉದ್ಯೋಗದ ಜತೆಯಲ್ಲಿ ಕಾನೂನು ಪದವಿ ಪಡೆದದ್ದೂ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಶೇಕಡಾ 45 ಅಂಕ ಪಡೆದಂತಹ ಪದವಿ ಹಾಗೂ ಪಿಯು ವಿದ್ಯಾರ್ಥಿಗಳು, ಅನುಕ್ರಮವಾಗಿ 3 ಮತ್ತು 5 ವರ್ಷಗಳ ಕಾನೂನು ಪದವಿ ಪಡೆಯಲು ನಾನಾ ಕಡೆಗಳಲ್ಲಿ ಅವಕಾಶ ಇದೆ. ಕಾನೂನು ಕ್ಷೇತ್ರದ ಅಭಿವೃದ್ಧಿ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಹಲವು ಕಾನೂನು ವಿಶ್ವವಿದ್ಯಾಲಯಗಳು ತಲೆ ಎತ್ತಿವೆ. ಮೊದಲ ಬಾರಿಗೆ ಕಕ್ಷಿದಾರನೊಬ್ಬ ತನ್ನ ಪ್ರಕರಣವನ್ನು ವಕೀಲನ ಮಡಿಲಿಗೆ ಹಾಕುವ ಮೂಲಕ ಅವಕಾಶಗಳ ಸರಮಾಲೆಯೊಂದನ್ನು ನೀಡುತ್ತಾನೆ. ಆ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಲು, ವೃತ್ತಿ ನೈಪುಣ್ಯ ಬೆಳೆಸಿಕೊಳ್ಳಲು, ಹೊಸ ರೀತಿಯ ಪ್ರಯೋಗಗಳನ್ನು ಮಾಡಲು ಹಾಗೂ ಕಾನೂನಾತ್ಮಕ ಹೋರಾಟ ಮಾಡಿ ನ್ಯಾಯ ಒದಗಿಸಿಕೊಡಲು ಅವಕಾಶ ಮಾಡಿಕೊಡುತ್ತಾನೆ. ಕೀರ್ತಿ, ಯಶಸ್ಸು, ಪ್ರಚಾರ ಹಾಗೂ ಕೊನೆಯದಾಗಿ ಸಂಪಾದನೆ ತಂದುಕೊಡುತ್ತಾನೆ. ಈ ರೀತಿ ಒಂದೊಂದು ಪ್ರಕರಣವೂ, ಒಂದೊಂದು ಹೊಸ ಅಧ್ಯಾಯವಾಗಿ ಒಬ್ಬ ವಕೀಲನ ಜೀವನವೇ ಒಂದು ಅದ್ಭುತ ಅನುಭವದ ಕಥನವಾಗುತ್ತದೆ. ನಿಜಾರ್ಥದಲ್ಲಿ ಒಬ್ಬ ಕಕ್ಷಿದಾರ ವಕೀಲನ ಪಾಲಿಗೆ ದೇವರಿದ್ದಂತೆ. ಕಕ್ಷಿದಾರರಲ್ಲಿ ವಿಶ್ವಾಸ, ನಂಬಿಕೆ ಹಾಗೂ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಕೀಲರ ಮೇಲಿದೆ. ವಕೀಲರ ಬಳಿ ಒಳ್ಳೆಯವರು, ಕೆಟ್ಟವರು, ವಿದ್ಯಾವಂತರು, ಅವಿದ್ಯಾವಂತರು, ಬಡವರು, ಶ್ರೀಮಂತರು, ಪುರುಷರು, ಮಹಿಳೆಯರು ಹೀಗೆ ಎಲ್ಲಾ ವರ್ಗದ, ನಾನಾ ತರದ, ನಾನಾ ಸ್ತರದ ವ್ಯಕ್ತಿಗಳು ಸಂಪರ್ಕಕ್ಕೆ ಬರುತ್ತಾರೆ. ಹೀಗೆ ಬಂದವರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಗೌರವದಿಂದ ನಡೆಸಿಕೊಂಡು ವೃತ್ತಿ ಧರ್ಮವನ್ನು ಪರಿಪಾಲಿಸಬೇಕಾಗುವುದು.

  ಪ್ರತಿ ಕ್ಷಣವೂ ಅಧ್ಯಯನ

  ಪ್ರತಿ ದಿನವೂ, ಪ್ರತಿ ಕ್ಷಣವೂ ಅಧ್ಯಯನ ಮಾಡುತ್ತಾ ಹೊಸ ಹೊಸ ಪ್ರಯೋಗ, ವ್ಯಾಖ್ಯಾನ, ಆಯಾಮಗಳನ್ನು ಕೊಡುವ ವೃತ್ತಿಗಳಲ್ಲೊಂದು ವಕೀಲಿಕೆ. ಮಾರುಕಟ್ಟೆಯಲ್ಲಿ ಸಿದ್ಧ ಉಡುಪುಗಳು, ತಿಂಡಿತಿನಿಸುಗಳು ಸಿಕ್ಕಂತೆ ಯಾವುದೇ ಒಬ್ಬ ವಕೀಲನಿಗೆ ರೆಡಿಮೇಡ್ ಕೇಸ್ ಅಥವಾ ಪ್ರಕರಣ ಸಿಗುವುದಿಲ್ಲ ಮತ್ತು ಸಿಕ್ಕ ಸಮಸ್ಯೆಗೂ ರೆಡಿಮೇಡ್ ಪರಿಹಾರ ಇರುವುದಿಲ್ಲ. ಕಕ್ಷಿದಾರರು ತರುವಂತಹ ಪ್ರತಿ ಸಮಸ್ಯೆಯನ್ನು ಬಗೆಹರಿಸಲು ಬೇಕಾದ ಮಾಗೋಪಾಯ, ಪರಿಹಾರವನ್ನು ಪ್ರತಿ ಬಾರಿಯೂ ಹೊಸದಾಗಿಯೇ ಕಂಡುಕೊಳ್ಳಬೇಕಾಗುತ್ತದೆ. ಹೇಗೆ ಐದು ಬೆರಳುಗಳು ಒಂದೇ ಸಮನಾಗಿರುವುದಿಲ್ಲವೋ ಅಂತೆಯೇ ಬರುವ ಪ್ರಕರಣಗಳೂ ಒಂದೇ ರೀತಿ ಇರುವುದಿಲ್ಲ. ಅದೇ ರೀತಿ ಎಲ್ಲ ವಕೀಲರೂ ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬ ವಕೀಲನಿಗೂ ವಿಭಿನ್ನ ಕಾರ್ಯಶೈಲಿ, ಸಾಮರ್ಥ್ಯ ಮತ್ತು ಅನುಭವ ಇರುತ್ತದೆ. ಇಂದಿನ ಕಾಲಘಟ್ಟದಲ್ಲಿ ಕಾನೂನು ಪದವೀಧರರಿಗೆ ಪ್ರಪಂಚದ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಬೇಡಿಕೆ ಇದೆ. ಒಳ್ಳೆಯ ವೃತ್ತಿಪರ ವಕೀಲರಿಗೆ ಸಾಕಷ್ಟು ಬೇಡಿಕೆ ಇದೆ. ಎಷ್ಟೇ ಜನ ವೃತ್ತಿ ನಡೆಸಿದರೂ ಕಠಿಣ ಪರಿಶ್ರಮಿಗಳಿಗೆ, ಜವಾಬ್ದಾರಿಯುತ ವಕೀಲರಿಗೆ ಅತ್ಯುತ್ತಮ ಅವಕಾಶಗಳಿವೆ. ವೃತ್ತಿಯನ್ನು ನಂಬಿ ಎಲ್ಲ ರೀತಿಯಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡಿದ ವಕೀಲರಿಗೆ ಯಶಸ್ಸಿದೆ. ಶಾಂತಿ, ಸಮಾಧಾನ, ಅಧ್ಯಯನ, ವೃತ್ತಿ ನೈಪುಣ್ಯ, ಎದೆಗಾರಿಕೆ, ವಾಕ್ಪಟುತ್ವ, ವಿವಿಧ ಕ್ಷೇತ್ರಗಳ ಜತೆ ಉತ್ತಮ ಬಾಂಧವ್ಯ ಕೂಡ ಅಷ್ಟೇ ಮುಖ್ಯ.

  ಏನೇನು ಕೋರ್ಸ್​ಗಳಿವೆ?

  ಬ್ಯಾಚುಲರ್ ಆಫ್ ಲಾ (ಎಲ್​ಎಲ್​ಬಿ), ಮಾಸ್ಟರ್ ಆಫ್ ಲಾ (ಎಲ್​ಎಲ್​ಎಮ್, ಮಾಸ್ಟರ್ ಆಫ್ ಬ್ಯುಸಿನೆಸ್ ಲಾ, ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್​ಡಿ)

  ಯುವಕರಿಗೆ ಕಿವಿಮಾತು: ವೃತ್ತಿಯನ್ನು ಆರಂಭಿಸಬೇಕಾದರೆ ಸಾಮಾನ್ಯವಾಗಿ ಪ್ರತಿಯೊಬ್ಬರೂ, ಹಿರಿಯ ವಕೀಲರ ಬಳಿ ಕಿರಿಯ ವಕೀಲನಾಗಿಯೇ ಒಂದಷ್ಟು ಕಾಲ ತಪಸ್ಸು ಮಾಡಬೇಕಾಗುತ್ತದೆ. ಸನ್ಮಾರ್ಗದಲ್ಲಿ ವೃತ್ತಿ ನಡೆಸಿ, ಪರಿಣತಿ ಪಡೆದ, ಆಳವಾದ ಅಧ್ಯಯನ ಇರುವ, ಅನುಭವಿ, ಹೆಸರುವಾಸಿ ಮತ್ತು ವೃತ್ತಿಗೆ ಬರುವವರ ಬಗ್ಗೆ ಕಾಳಜಿ ಇರುವ ಹಿರಿಯ ವಕೀಲರ ಕಚೇರಿಯಲ್ಲಿ ಅವಕಾಶ ಸಿಗಬೇಕಾದರೆ ನಿಜವಾಗಿಯೂ ಪುಣ್ಯ ಮಾಡಿರಬೇಕು. ಸ್ವಸಾಮರ್ಥ್ಯದಿಂದ ಒಂದು ಹಂತಕ್ಕೆ ಬೆಳೆದು ಹಿರಿಯ ವಕೀಲರ ಜತೆಗಿದ್ದಾಗ ಕಕ್ಷಿದಾರರಲ್ಲಿ ಹಾಗೂ ಸಮಾಜದಲ್ಲಿ ತಮ್ಮ ಬಗ್ಗೆ ವಿಶ್ವಾಸವನ್ನು ಬೆಳೆಸಿಕೊಂಡಾಗ ಮಾತ್ರ ವೃತ್ತಿಪಥದಲ್ಲಿ ಸಾಗಬಹುದು.

  ಒಂದು ಬಾರಿ ಕಿರಿಯ ವಕೀಲನಾಗಿ ಒಂದು ಕಚೇರಿ ಸೇರಿದ ನಂತರ ಕಷ್ಟವೋ, ಸುಖವೋ ಒಂದಷ್ಟು ಕಾಲ ಸ್ಥಿರವಾಗಿ ವೃತ್ತಿ ನಡೆಸಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ಒಂದು ವರ್ಚಸ್ಸು, ಪರಿಚಯ, ನಂಬಿಕೆ ಬೆಳೆಯುತ್ತದೆ. ನಾನಾ ಕಾರಣಕ್ಕಾಗಿ ಪದೇ ಪದೇ ಕಚೇರಿ ಬದಲಾಯಿಸುತ್ತಾ ಹೋದರೆ ಒಂದು ರೀತಿ ಅಲೆಮಾರಿತನ ಎದ್ದು ಕಾಣಬಹುದು. ಈ ವೃತ್ತಿಯ ವಿಶೇಷವೆಂದರೆ ಎಷ್ಟೇ ದೊಡ್ಡ ವಕೀಲರಾದರೂ ಸಹಜವಾಗಿ ಎದುರಾಗುವ ಪ್ರಶ್ನೆ ಎಂದರೆ ಇವರು ಮೂಲತಃ ಯಾರ ಬಳಿ ಕಿರಿಯ ವಕೀಲರಾಗಿ ಕಾರ್ಯ ನಿರ್ವಹಿಸಿದರು ಎಂಬುದು.

  ವಾಹನ ಚಾಲನೆ ಮತ್ತು ವಕೀಲಿಕೆ

  ಎಷ್ಟೋ ಬಾರಿ ನಾವೆಷ್ಟೇ ಜಾಗರೂಕತೆಯಿಂದ ವಾಹನ ಓಡಿಸಿದರೂ ಬೇರೆಯವರು ನಮಗೆ ತೊಂದರೆ ಕೊಡಬಹುದು. ಕೆಲವೊಂದು ಬಾರಿ ನಾವೇ ಅಜಾಗರೂಕತೆಯಿಂದ ಓಡಿಸುವ ಸಾಧ್ಯತೆ ಇರುತ್ತದೆ. ಎಲ್ಲ ಸಂದರ್ಭಗಳಲ್ಲೂ ಯಾವುದೇ ಅಪಘಾತಕ್ಕೆ ಒಳಗಾಗದೆ, ಬಂದಂತಹ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿ, ಪ್ರಯಾಣಿಕರನ್ನು ಗುರಿ ತಲುಪಿಸುವ ಜವಾಬ್ದಾರಿ ವಾಹನ ಚಾಲಕನದ್ದಾಗಿರುತ್ತದೆ. ಯಾವಾಗ ಗೇರ್ ಹಾಕಬೇಕು? ಎಲ್ಲಿ ಬ್ರೇಕ್ ಅವಶ್ಯಕತೆ ಇದೆ? ಎಲ್ಲಿ ಲೈಟ್ ಉಪಯೋಗಿಸಬೇಕು? ಎಷ್ಟು ವೇಗದಲ್ಲಿ ಹೋಗಬೇಕು? ಯಾವ ರೀತಿ ಇನ್ನೊಂದು ವಾಹನಕ್ಕೆ ತೊಂದರೆ ಆಗದಂತೆ ಸಿಗ್ನಲ್ ದಾಟಿ ಹೋಗಬೇಕು? ಯಾವ ರಸ್ತೆಯಲ್ಲಿ ಯಾವ ರೀತಿ ಓಡಿಸಬೇಕು ಎಂಬಿತ್ಯಾದಿ ವಿಚಾರಗಳು ಒಬ್ಬ ಚಾಲಕನ ಅರಿವಿನಲ್ಲಿ ಇರಬೇಕಾಗುತ್ತದೆ. ಇದೇ ರೀತಿ ವಕೀಲನೊಬ್ಬನ ಬಳಿ ಬಂದ ಕಕ್ಷಿದಾರನ ಸಮಸ್ಯೆ ಏನು? ಆ ತೊಂದರೆಗೆ ಇರುವ ಪರಿಹಾರವೇನು? ಎದುರಾಗಬಹುದಾದ ಸಮಸ್ಯೆಗಳೇನು? ಸಮಸ್ಯೆಗಳನ್ನು ಮೀರಿ ಪರಿಹಾರ ಕಂಡುಕೊಳ್ಳುವುದು ಹೇಗೆ? ಎಂಬೆಲ್ಲಾ ವಿಚಾರಗಳನ್ನು ಅರಿತು ಕಾನೂನು ವ್ಯಾಪ್ತಿಯಲ್ಲಿ, ನ್ಯಾಯಾಲಯಗಳ ಚೌಕಟ್ಟಿನೊಳಗೆ ಪರಿಹಾರ ಕಂಡುಕೊಳ್ಳುವುದು ಹೇಗೆಂದು ಅರಿಯುವ ಪ್ರಯತ್ನವೇ ವಕೀಲಿ ವೃತ್ತಿ.

  ಇತಿಹಾಸದ ಪುಟಗಳಲ್ಲಿ ವಕೀಲಿಕೆ

  ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿದರೆ ಹಲವಾರು ಕಾನೂನು ಪದವೀಧರರು ಸಾಮಾಜಿಕ, ಧಾರ್ವಿುಕ, ರಾಜಕೀಯ ನಾಯಕರುಗಳಾಗಿ ಜೀವನದಲ್ಲಿ ಯಶಸ್ಸು ಸಾಧಿಸಿರುವುದು ಸರ್ವವೇದ್ಯ. ಬ್ರಿಟಿಷ್ ಆಳ್ವಿಕೆಯಲ್ಲಿ ನ್ಯಾಯಾಲಯ ವ್ಯವಸ್ಥೆ ಜಾರಿಗೆ ಬಂದಾಗ ವಕೀಲರ ಮಹತ್ವ ಹಾಗೂ ಅರಿವು ಹೆಚ್ಚಾಗತೊಡಗಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ವೃತ್ತಿಯಲ್ಲಿ ಒಂದಷ್ಟು ಕಾಲ ವಕೀಲರಾಗಿ ಸೇವೆ ಸಲ್ಲಿಸಿ, ನಂತರ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಈ ವೇಳೆ ಚಳವಳಿಗೆ ಭದ್ರ ನಾಯಕತ್ವ ಕೊಟ್ಟರಷ್ಟೇ ಅಲ್ಲ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. ಅಂದಿನಿಂದ ಇಂದಿನ ಸರ್ಕಾರದ ತನಕ ರಾಜಕೀಯವಾಗಿ ವಕೀಲರು ಮೇಲುಗೈ ಸಾಧಿಸುತ್ತಿದ್ದಾರೆ. ಹಿಂದೊಂದು ಕಾಲದಲ್ಲಿ ವಕೀಲರು ಹೇಗೇ ಕೇಸು ನಡೆಸಿದರೂ ಕಕ್ಷಿದಾರರು ಅತ್ಯಂತ ಶ್ರದ್ಧೆ, ಗೌರವ ಹಾಗೂ ವಿಶ್ವಾಸದಿಂದ ವಕೀಲರನ್ನು ನಡೆಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಕಕ್ಷಿದಾರರು ಕೂಡ ಕಾನೂನು ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದ ಜ್ಞಾನ ಹೊಂದುತ್ತಿದ್ದು, ವಕೀಲರು ಗೌರವಯುತವಾಗಿ ನಡೆಸಿಕೊಳ್ಳುವ ವ್ಯಕ್ತಿತ್ವ ಹೊಂದಿದ್ದರೆ ಮಾತ್ರ ಗೌರವ ಕೊಡುವಂತಹ ಸನ್ನಿವೇಶ ಇದೆ. ಕಕ್ಷಿದಾರರಲ್ಲಿ ವಿಶ್ವಾಸ, ನಂಬಿಕೆ ಹಾಗೂ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಕೀಲರ ಮೇಲಿದೆ ಮತ್ತು ಇದೊಂದು ನೈತಿಕ ಕರ್ತವ್ಯ ಹಾಗೂ ವೃತ್ತಿ ಧರ್ಮವೇ ಆಗಿದೆ. ಆದ್ದರಿಂದ ವಕೀಲಿಕೆ ಎಂಬುದು ಜಗತ್ತಿನ ಉದಾತ್ತ ವೃತ್ತಿ ಎಂದು ಕರೆಯಲ್ಪಡುತ್ತದೆ. ಅತ್ಯಂತ ಜವಾಬ್ದಾರಿಯುತ ಮತ್ತು ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸಹಾಯ ಹಸ್ತ ನೀಡುವಂತಹ ವೃತ್ತಿ. ಹೀಗಾಗಿಯೇ ಇದೊಂದು ಸಾಮಾಜಿಕ ಸೇವೆ ಎಂದೇ ಪರಿಗಣಿಸಲ್ಪಟ್ಟಿದೆ. ಒಬ್ಬ ವಕೀಲನಿಗೆ ತಾನು ಕೈಗೆತ್ತಿಕೊಂಡಿರುವ ವ್ಯಾಜ್ಯ ಅಥವಾ ಪ್ರಕರಣವನ್ನು ಒಂದು ರ್ತಾಕ ಅಂತ್ಯಕ್ಕೆ ತಲುಪಿಸುವುದು ಅತ್ಯಂತ ಆದ್ಯತೆಯ ವಿಷಯವಾಗಿರುತ್ತದೆ. ಅದಕ್ಕಾಗಿ ಆತ ತನ್ನ ಕಾರ್ಯದಲ್ಲಿ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡುವುದರ ಜತೆಗೆ ಅವಿರತ ಪ್ರಯತ್ನ ನಡೆಸಬೇಕಾಗುತ್ತದೆ.

  ಉದ್ಯೋಗಾವಕಾಶಗಳು

  1. ಭಾರತದ ಯಾವುದೇ ಕೋರ್ಟ್​ನಲ್ಲಿ ವಕೀಲಿಕೆ
  2. ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ಕಾನೂನು ಸಲಹೆಗಾರ ಹುದ್ದೆ
  3. ತೆರಿಗೆ, ಕಾರ್ವಿುಕ ಇಲಾಖೆ, ಸಾರ್ವಜನಿಕ ಅಭಿಯೋಜಕ ಅಥವಾ ಡಿಫೆನ್ಸ್​ನಲ್ಲಿ ಉದ್ಯೋಗ
  4. ಒಂದು ಸಂಸ್ಥೆ ಅಥವಾ ಕುಟುಂಬದ ಕಾನೂನು ಸಲಹೆಗಾರರು
  5. ಕಾನೂನು ಕಾಲೇಜುಗಳಲ್ಲಿ ಉಪನ್ಯಾಸಕರು
  6. ಭರಿಯಲ್ ಎಸ್ಟೇಟ್, ಲೀಗಲ್/ಲಾ ಫರ್ಮ್​​ಗಳಲ್ಲಿ ಸಾಲಿಸಿಟರ್ಸ್
  7. ಭಕಂಪನಿ ಸೆಕ್ರೆಟರಿ
  8. ಭನ್ಯಾಯಾಂಗ ಪರೀಕ್ಷೆ ಬರೆದು ನ್ಯಾಯಾಧೀಶ ರಾಗಬಹುದು.

  (ಲೇಖಕರು ಹಿರಿಯ ವಕೀಲರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts