More

    ವೇದ ದರ್ಶನ ಅಂಕಣ|ಅಪ್ರಕಟಿತವಾದ ಸತ್ಯವೇ ಋತ

    ‘‘ನೀರಿನ ಮಧ್ಯೆಯೇ ನಿಂತಿರುವ ಮನುಷ್ಯನಿಗೆ ಬಾಯಾರಿದಾಗ ಕುಡಿಯಲು ಒಂದು ಹನಿ ನೀರೂ ಸಿಕ್ಕದಿರುವಂತೆ ಉಪ್ಪು ನೀರಿನ ಸಮುದ್ರಮಧ್ಯದಲ್ಲಿ ನಿಂತಿರುವ ತಮ್ಮ ದಾಹವನ್ನು ತೀರಿಸು’’ವಂತೆ ಕೇಳಿಕೊಳ್ಳುವ ವಸಿಷ್ಠರ ಮಾತಿನಲ್ಲಿಯೂ ಸಾಂಕೇತಿಕ ಅರ್ಥವಿದೆ. (ಮಂಡಲ 7-89-4).

    ವರುಣನಿಗೆ ಏಳು ಸಹೋದರಿಯರೂ ಇರುವುದಾಗಿಯೂ ತಿಳಿದುಬರುತ್ತದೆ. (ಈ ತತ್ತ್ವದ ವಿಷಯಕ್ಕೆ ಮುಂದೆ ಬೇರೆ ಲೇಖನದಲ್ಲಿ ವಿಸ್ತಾರವಾಗಿ ತಿಳಿಸಲಾಗುವುದು.) ಅಥವಾ ವರುಣನೇ, ಮಾನವಶರೀರದಲ್ಲಿ ಅಂತರ್ಹಿತವಾದ ಸಮುದ್ರರೂಪವಾಗಿಯೂ ಇದ್ದಾನೆ. (ಸ ಸಮುದ್ರಃ ಅಪೀಚ್ಯಃ.) ಇವನು ಸಪ್ತಸಿಂಧುಗಳಿಗೂ ಅಧಿಪತಿ.

    ಋಗ್ವೇದದ ಒಂದನೇ ಮಂಡಲದಲ್ಲಿ 24 ಸೂಕ್ತದಲ್ಲಿ, ಶುನಃಶ್ಯೇಫ ಋಷಿಯಿಂದ ಉಕ್ತವಾದ ವರುಣಸ್ತುತಿಯು ಪ್ರಸಿದ್ಧವಾಗಿದೆ. ಶುನಶ್ಯೇಫನ ವೃತ್ತಾಂತವು ಜಗತ್ಪ್ರಸಿದ್ಧವಾಗಿದ್ದು, ಯೂಪಸ್ತಂಭಕ್ಕೆ ಪಶುವಿನಂತೆ ಕಟ್ಟಲ್ಪಟ್ಟಿದ್ದ ಅವನನ್ನು ಬಿಡಿಸಿದ ಈ ಸೂಕ್ತದ ಮಹಿಮೆಯು ಅಗಾಧವಾದುದು. ‘‘ಸಮಸ್ತ ಪ್ರಾಣಿಗಳಿಗೂ, ಪ್ರಾಣೇಚ್ಛೆಯೆಂಬುದು ದೊಡ್ಡದು. ಪಕ್ಷಿಗಳು, ತಮ್ಮ ಗೂಡುಗಳ ಸುತ್ತಲೂ, ಅಭಿಮಾನದಿಂದ ಹಾರಾಡುವಂತೆ ಪ್ರಶಾಂತವಾದ ತನ್ನ ಮನಸ್ಸು ಉಚಿತವಾದ ಚಿಂತನೆಗಳಿಂದ, ಉತ್ತಮ ಜೀವನವನ್ನೇ ಬಯಸುವಂತಾಗಲಿ’’ ಎಂದು ಪುನಃ ಶುನಶ್ಯೇಫ ಋಷಿಯು ಮನಮೋಹಕವಾಗಿ ಪ್ರಾರ್ಥಿಸುತ್ತಾನೆ.

    ವರುಣನು ಅನ್ನಪ್ರದಾತೃವೂ ಹೌದು. ಅಥವಾ ಮನುಷ್ಯರು ವರುಣನನ್ನು ಧ್ಯಾನಿಸಿ, ಅವನಿಗೆ ಸರ್ವದಾ ಅಭಿಮುಖರಾಗಿ ಇರುವುದು ‘‘ಹಸಿರು ಹುಲ್ಲಿನಿಂದ ಸಮೃದ್ಧವಾದ ಹುಲ್ಲುಗಾವಲುಗಳನ್ನೇ ನೆನೆದು, ಅವುಗಳ ಕಡೆಗೆ ಆಸೆಯಿಂದ ಹಸುಗಳು ಓಡುವಂತೆ’’ ಇದೆ.

    ವರುಣನ ಋತಕ್ಕೆ ಮಿತ್ರನ ಸತ್ಯವು ಸರಿಹೋಲುವ ತತ್ತ್ವ. ಪ್ರಕಟವಾದ ಋತವೇ ಸತ್ಯ. ಮತ್ತು ಅಪ್ರಕಟಿತವಾದ ಸತ್ಯವೇ ಋತ. ಅಥವಾ ಸತ್ಯವು ಋತದ ಒಂದು ಅಂಶ. ‘‘ಯಾವುದು ಸಜ್ಜನರಲ್ಲಿ ಹುಟ್ಟಿ ಹರಡಿರುವುದೋ ಅದಕ್ಕೆ ಸತ್ಯ’’ವೆಂಬುದಾಗಿ ನಿರುಕ್ತದಲ್ಲಿ ಕರೆಯಲಾಗಿದೆ. (ಸತ್ಸುಜಾಯತೇ ಸತ್​ಪ್ರಭಂ ಭವತಿ ಇತಿ). ದೇವತೆಗಳು ಅಸತ್ಯವನ್ನು ತ್ಯಜಿಸಿ, ಸತ್ಯಮಾರ್ಗ ಅವಲಂಬಿಗಳಾದುದರಿಂದಲೇ ದೇವತೆಗಳಾದರೆಂದು ವೇದವೇ ಹೇಳುತ್ತದೆ. ಸತ್ಯಸ್ವರೂಪಗಳಾದ ವೇದಕರ್ಮಗಳು, ನಿತ್ಯ ನೈಮಿತ್ತಿಕ ಕರ್ಮಗಳ ರೂಪದಲ್ಲಿ ಜಗತ್ತನ್ನು ರಕ್ಷಿಸುವುದರಿಂದ ಮಿತ್ರಾವರುಣರು ಈ ಕರ್ಮಗಳಿಗೂ ಅಭಿಮಾನಿಗಳು. ಇವುಗಳನ್ನು ಪಾಲಿಸದವರನ್ನು ದಂಡಿಸುವುದು, ಪಾಲಿಸಿದವರನ್ನು ಅನುಗ್ರಹಿಸುವುದು ಇವರ ಮುಖ್ಯಕರ್ತವ್ಯಗಳು. ಋತವು ಸತ್ಯದ ‘‘ನಾಭಿ’’ ಎಂದೂ ವರ್ಣಿಸಲ್ಪಟ್ಟಿದೆ. ಜ್ಞಾನವೂ ಸತ್ಯದಿಂದಲೇ ಸಾಧ್ಯ. ಅಂಧಕಾರರೂಪದ ಅಸತ್ಯವನ್ನು ನಾಶಪಡಿಸಿ, ಸತ್ಯರೂಪದ ಬೆಳಕನ್ನು ಲೋಕಕ್ಕೆ ತುಂಬುವ ಆದಿತ್ಯ, ಮಿತ್ರಾವರುಣರ ಗರ್ಭರೂಪದ ಶಿಶುವೆಂಬುದಾಗಿ ವರ್ಣಿಸಲ್ಪಟ್ಟಿದ್ದಾನೆ. ‘‘ಗೋವುಗಳ ಹಿಂಡನ್ನು ಮುಂಭಾಗದಲ್ಲಿ ನೆಮ್ಮದಿಯಾಗಿ ಅಟ್ಟಿಕೊಂಡು ಹೋಗುವ ಗೋಪಾಲನಂತೆ’’ ವರುಣನು ವರ್ಣಿಸಲ್ಪಟ್ಟಿದ್ದಾನೆ. ಹಸಿವೆಯನ್ನು ಉಂಟುಮಾಡಿ ಸ್ಪರ್ಧೆಗೆ ಮತ್ತು ವಿನಾಶಕ್ಕೆ ಕಾರಣವಾಗುವ ಧನಕ್ಕಿಂತಲೂ ವಿಶಿಷ್ಟವಾದ ಧನವನ್ನು ಅನುಗ್ರಹಿಸುವವನು ವರುಣನು. ಹೀಗೆ ಇಪ್ಪತ್ತನಾಲ್ಕಕ್ಕಿಂತಲೂ ಹೆಚ್ಚು ಸೂಕ್ತಗಳಲ್ಲಿ ಮಿತ್ರಾ-ವರುಣರು ಸ್ತುತಿಸಲ್ಪಟ್ಟಿದ್ದಾರೆ. ವರುಣಪತ್ನಿಗೆ ವರುಣಾನೀ ಎಂದು ಹೆಸರು. ವಸಿಷ್ಠರಲ್ಲದೆ ಅತ್ರಿ, ದೀರ್ಘತಮಸ್ಸು, ಶುನಶ್ಯೇಫ ಮೊದಲಾದ ಅನೇಕ ಋಷಿಗಳು ಭಗವಂತನ ಈ ದಿವ್ಯಾಂಶವನ್ನು ಕೊಂಡಾಡಿ ಉಪಕಾರ ಮಾಡಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts