More

    ಅನಿಷ್ಠ ದೇವದಾಸಿ ಪದ್ಧತಿ ತೊಲಗಿಸಲು ಯೋಜನಾಧಿಕಾರಿ ಪೂರ್ಣಿಮಾ ಏಳುಬಾವಿ ಸಲಹೆ

    ಕೊಪ್ಪಳ: ದೇವದಾಸಿ ಪದ್ಧತಿ ಅನಿಷ್ಠವಾಗಿದ್ದು ಆಚರಣೆ ಶಿಕ್ಷಾರ್ಹ ಅಪರಾಧ. ಎಲ್ಲರೂ ಒಂದಾಗಿ ಈ ಪದ್ಧತಿ ನಿರ್ಮೂಲನೆ ಮಾಡಬೇಕೆಂದು ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಏಳು ಬಾವಿ ಹೇಳಿದರು.

    ಇದನ್ನೂ ಓದಿ: ಮಾಸಿಕ ವೇತನ ರೂ.3ಸಾವಿರ ಕೊಡಲು ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಘಟಕ ಒತ್ತಾಯ

    ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ಜಾತ್ರೋತ್ಸವದಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

    ಶತಮಾನಗಳಿಂದಲೂ ಅನಕ್ಷರತೆ, ಮೂಢನಂಬಿಕೆ, ಪರಸ್ಪರ ಶೋಷಣೆ, ದೌರ್ಜನ್ಯಗಳಿಂದ ಸಮಾಜ ನಲುಗಿದೆ. ಇಂದಿಗೂ ಅಲ್ಲಲ್ಲಿ ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ದೇವರ ಹೆಸರಿನಲ್ಲಿನ ಶೋಷಣೆಗಳು ನಿಲ್ಲಬೇಕು.

    ಜೋಗಮ್ಮ, ಜೋಗಪ್ಪ, ಭಿಕ್ಷೆ ಬೇಡುವುದು, ದೇವಾಸಿ ಮಾಡುವುದನ್ನು ಕೈ ಬಿಡಬೇಕು. ಈ ಬಗ್ಗೆ ಅನೇಕ ಕಾನೂನುಗಳಿದ್ದು, ಎಲ್ಲರೂ ಅರಿಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

    ದೇವಸ್ಥಾನದ ಇಒ ಅರವಿಂದ ಸುತಗೊಂಡಿ ಮಾತನಾಡಿ, ದೇವರ ಹೆಸರಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಬಲಿ ತೆಗೆದುಕೊಳ್ಳುವ ದೇವದಾಸಿ ಪದ್ಧತಿಯಂಥ ಅಂಧ ಆಚರಣೆಗಳು ಮಕ್ಕಳು ಮತ್ತು ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯವಿವಾಹ ಪದ್ಧತಿ ನಿಲ್ಲಬೇಕು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ತಿಳಿಸಿದರು.

    ಆಟೋ ಮೂಲಕ ಜಾಗೃತಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ದಾದೇಸಾಬ್ ಎಚ್, ಸಕ್ಕುಬಾಯಿ ಎಸ್.ಎಚ್, ತಾಲೂಕು ಯೋಜನಾಧಿಕಾರಿಗಳಾದ ರೇಣುಕಾ ಎಂ., ಮರಿಯಪ್ಪ ಎಂ., ಸರೋಜಾ ಹಿರೇಮಠ್ ಇತರರಿದ್ದರು.

    ಜಾತ್ರೆಗೆ ವಿಶೇಷ ಬಸ್ ಸೌಲಭ್ಯ

    ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ಜಾತ್ರೋತ್ಸವ ಅಂಗವಾಗಿ ಭಕ್ತರಿಗೆ ಅನುಕೂಲವಾಗುವಂತೆ ಮೇ 16 ರವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

    ಜಾತ್ರೆ ಅವಧಿಯಲ್ಲಿ ಕೊಪ್ಪಳ, ಕುಷ್ಟಗಿ ಹಾಗೂ ಗಂಗಾವತಿ ಬಸ್ ನಿಲ್ದಾಣಗಳಿಂದ ಹುಲಿಗಿಗೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಮನವಿ ಮಾಡಿದ್ದಾರೆ.

    ಶಾಂತಿ ಕಾಪಾಡಲು ಮನವಿ

    ಉತ್ತರ ಕರ್ನಾಟಕದ ಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಿ ಜಾತ್ರೋತ್ಸವಕ್ಕೆ ಆಗಮಿಸುವ ಸಾರ್ವಜನಿಕರು ಶಾಂತಿ ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಮನವಿ ಮಾಡಿದ್ದಾರೆ.

    ಜಾತ್ರೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹುಲಿಗಿ ಗ್ರಾಮದಲ್ಲಿ ಮೇ 16ರ ರಾತ್ರಿ 11 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು, ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

    ಮೈಯಲ್ಲಿ ದೇವರು ಬಂದಂತೆ ಆಡುವವರಿಗೆ, ಮಾನಸಿಕ ಸನ್ನಿ ಬರುವಂಥವರಿಗೆ ಮನೋವೈದ್ಯರಿಂದ ಚಿಕ್ಸಿತೆ ಮಾಡಿಸುವ ಅಗತ್ಯವಿದೆ. ಅಂಥ ಜನರು ಕಂಡುಬಂದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿರುವ ತುರ್ತು ಚಿಕಿತ್ಸಾ ಘಟಕ, ಉಚಿತ ಸಲಹಾ ಕೇಂದ್ರ, ಸಖಿ-ಒನ್ ಸ್ಟಾಪ್ ಸೆಂಟರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ ಘಟಕಕ್ಕೆ ತಿಳಿಸಬೇಕು.
    | ಯಮುನಾ ಬೇಸ್ತರ, ಸಖಿ-ಒನ್‌ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts