ಹಾಲುಣಿಸುತ್ತಿದ್ದ 12 ದಿನದ ಮಗುವನ್ನು ಹೊತ್ತೊಯ್ದು ಕಚ್ಚಿ ಕೊಂದ ಕೋತಿ

ಆಗ್ರಾ: 12 ದಿನದ ಮಗುವನ್ನು ತಾಯಿಯ ಕೈಯಿಂದ ಕಸಿದು ಪರಾರಿಯಾದ ಕೋತಿಯೊಂದು, ನೆರೆ ಮನೆಯ ಮಹಡಿ ಮೇಲೆ ಹಸುಗೂಸನ್ನು ಕಚ್ಚಿ ಕೊಂದಿರುವ ಧಾರುಣ ಘಟನೆ ಆಗ್ರಾದ ಮೊಹಲ್ಲಾ ಕೆಚ್ಚಾರಾ ಎಂಬಲ್ಲಿ ಸೋಮವಾರ ನಡೆದಿದೆ.

ಸೋಮವಾರ ಸಂಜೆ ಮಗುವಿಗೆ ತಾಯಿ ಹಲುಣಿಸುತ್ತಿದ್ದ ಸಂದರ್ಭದಲ್ಲಿ ಬಳಿಗೆ ಬಂದ ಕೋತಿ, ಮಗುವನ್ನು ಹೊತ್ತು ಮನೆಗಳ ಮೇಲೆ ಹಾರತೊಡಗಿತು. ಕೋತಿ ಮಗುವನ್ನು ಕಸಿಯುತ್ತಿದ್ದಂತೆ ತಾಯಿ ಚೀರತೊಡಗಿದಳು. ಸಂಬಂಧಿಗಳೆಲ್ಲರೂ ಸೇರಿ ಕೋತಿಯನ್ನು ಬೆನ್ನಟ್ಟಿದರು. ಆದರೆ, ಮಗುವನ್ನು ಬಿಡಿಸಿಕೊಳ್ಳುವಷ್ಟರಲ್ಲಿ ಕೋತಿ ಆಕ್ರಮಣಕಾರಿಯಾಗಿ ವರ್ತಿಸಿತ್ತು. ಮಗುವನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿತ್ತು. ನೆರೆ ಮನೆಯ ಮಹಡಿಯ ಮೇಲೆ ಮಗು ರಕ್ತದ ಮಡುವಿನಲ್ಲಿ ಬಿದ್ದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ತೀವ್ರ ಗಾಯಗಳಿಂದ ಪ್ರಜ್ಞೆ ಕಳೆದುಕೊಂಡಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಗು ಅದಾಗಲೇ ಮೃತಪಟ್ಟಿತ್ತು ಎನ್ನಲಾಗಿದೆ. ಆದರೆ, ಮಗು ಸಾವೀಗೀಡಾಗಿರುವುದನ್ನು ನಂಬಲು ತಯಾರಿಲ್ಲದ ಕುಟುಂಬ ಮತ್ತೊಂದು ಆಸ್ಪತ್ರೆಗೆ ತೆರಳಿತ್ತು. ಆದರೆ, ಅಲ್ಲಿನ ವೈದ್ಯರೂ ಅದೇ ಮಾತನ್ನೇ ಪುನರುಚ್ಚರಿಸಿದ್ದರು.

ಮೊಹಲ್ಲಾ ಕೆಚ್ಚಾರ ಪ್ರದೇಶದಲ್ಲಿರುವ ಕೋತಿಗಳು ತೀರ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.